Asianet Suvarna News Asianet Suvarna News

ಧಾರವಾಡ: ಪ್ರತಿ ಹಾಸ್ಟೆಲ್‌ಗೆ ತಾಲೂಕು ಅಧಿಕಾರಿಗಳ ಭೇಟಿ ಕಡ್ಡಾಯ

ಹಾಸ್ಟೆಲ್‌ಗಳಿಗೆ ಆಯಾ ತಾಲೂಕು ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಕಡ್ಡಾಯವಾಗಿ ಪ್ರಗತಿ ಪರಿಶೀಲಿಸಬೇಕು| ವಸತಿ ನಿಲಯಗಳಲ್ಲಿನ ಗ್ರಂಥಾಲಯ, ಅಂತರ್ಜಾಲ ಸೇವೆ ಹಾಗೂ ಪಠ್ಯ ಪುಸ್ತಕಗಳ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳ ಸುರಕ್ಷತೆಗೆ ಅಧಿ​ಕಾ​ರಿ​ಗಳು ಕಡ್ಡಾ​ಯ​ವಾಗಿ ಆದ್ಯತೆ ನೀಡ​ಬೇ​ಕು| ಬಾಲಕಿಯರ ವಸತಿ ನಿಲಯಗಳಿಗೆ ಕಡ್ಡಾಯವಾಗಿ ಮಹಿಳಾ ವಾರ್ಡನ್‌ ಮತ್ತು ಮಹಿಳಾ ಅಡುಗೆಯವರನ್ನು ನೇಮಿಸಬೇಕು| ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು|

Officers Visit Is Mandatory to Every Hostel in Dharwad District
Author
Bengaluru, First Published Oct 19, 2019, 2:55 PM IST

ಧಾರವಾಡ(ಅ.19): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಇರುವ ಪ್ರತಿ ಹಾಸ್ಟೆಲ್‌ಗಳಿಗೆ ಆಯಾ ತಾಲೂಕು ಅಧಿಕಾರಿಗಳು ಪ್ರತಿವಾರ ಅನಿರೀಕ್ಷಿತ ಭೇಟಿ ನೀಡಿ ಕಡ್ಡಾಯವಾಗಿ ಪ್ರಗತಿ ಪರಿಶೀಲಿಸಬೇಕು ಎಂದು ಹಿಂದು​ಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೊಹಮ್ಮದ ಮೊಹಸಿನ್‌ ಖಡಕ್‌ ಎಚ್ಚ​ರಿಕೆ ನೀಡಿ​ದ್ದಾರೆ.

ಶುಕ್ರ​ವಾರ ಜಿಲ್ಲಾ ಪಂಚಾಯತ್‌ ಸಭಾಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮ, ಮೊರಾರ್ಜಿ ದೇಸಾಯಿ ವಸತಿಶಾಲೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ವಸತಿ ನಿಲಯಗಳಲ್ಲಿನ ಗ್ರಂಥಾಲಯ, ಅಂತರ್ಜಾಲ ಸೇವೆ ಹಾಗೂ ಪಠ್ಯ ಪುಸ್ತಕಗಳ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳ ಸುರಕ್ಷತೆಗೆ ಅಧಿ​ಕಾ​ರಿ​ಗಳು ಕಡ್ಡಾ​ಯ​ವಾಗಿ ಆದ್ಯತೆ ನೀಡ​ಬೇ​ಕೆಂದು ಸೂಚಿ​ಸಿ​ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ವಿವಿಧ ಸಮುದಾಯಗಳಿಗೆ ಸಮುದಾಯ ಭವನ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ನಿಯಮಾನುಸಾರವಿಲ್ಲದ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸದಿರುವ ಸಂಘ, ಸಂಸ್ಥೆ, ಟ್ರಸ್ಟ್‌ಗಳಿಗೆ ಅಂತಿಮ ತಿಳುವಳಿಕೆ ಪತ್ರ ನೀಡಿ, ಪ್ರಸ್ತಾವನೆಗಳನ್ನು ರದ್ದುಪಡಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕಾಧಿಕಾರಿಗಳಿಗೆ ವಾಹನ ಸೌಕರ್ಯ ನೀಡಲಾಗಿದೆ. ಪ್ರತಿವಾರ ಪ್ರತಿ ಹಾಸ್ಟೆಲ್‌ಗೆ ಅಧಿಕಾರಿ ಕಡ್ಡಾಯವಾಗಿ ಭೇಟಿ ನೀಡಬೇಕು. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಆಭ್ಯಾಸಕ್ಕೆ ಅನುಕೂಲವಾಗಲು ಗ್ರಂಥಾಲಯ, ಅಂತರ್ಜಾಲ ಸೇವೆ ಮತ್ತು ಪಠ್ಯಪುಸ್ತಕ ನೀಡಲಾಗಿದೆ. ಅವುಗಳ ಸದ್ಬಳಕೆ ಆಗುವಂತೆ ಎಚ್ಚರಿಕೆ ವಹಿಸಬೇಕು ಎಂದ​ರು.

ವಾರ್ಡನ್‌ಗಳು ತಮ್ಮ ವಿದ್ಯಾರ್ಥಿ ವಸತಿನಿಲಯಗಳ ಸಮೀಪದಲ್ಲಿದ್ದು, ಪ್ರತಿ ಸಮಯದ ಉಪಾಹಾರ, ಊಟ, ನೀರು, ವಿದ್ಯುತ್‌ ಸೇರಿದಂತೆ ಎಲ್ಲ ಸೌಕರ್ಯಗಳು ಉತ್ತಮ ಗುಣಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ದೊರೆಯುವಂತೆ ಜಾಗ್ರತೆ ವಹಿಸಬೇಕು. ಪ್ರತಿದಿನ ಸಂಜೆ ವಿದ್ಯಾರ್ಥಿಗಳಿಗೆ ವಿಶೇಷ ವರ್ಗ ನಡೆಸಬೇಕು ಎಂದು ಹೇಳಿದರು.

ಬಾಲಕಿಯರ ವಸತಿ ನಿಲಯಗಳಿಗೆ ಕಡ್ಡಾಯವಾಗಿ ಮಹಿಳಾ ವಾರ್ಡನ್‌ ಮತ್ತು ಮಹಿಳಾ ಅಡುಗೆಯವರನ್ನು ನೇಮಿಸಬೇಕು. ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳ ಅರ್ಜಿ ಸಲ್ಲಿಸುವಾಗ ಆಧಾರ್‌ ಲಿಂಕ್‌ ಆಗಿರುವ ಬ್ಯಾಂಕ್‌ ವಿವರ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆಯಲು ಅಧಿಕಾರಿಗಳಿಗೆ ಸೂಚಿಸಿದರು.

ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಉನ್ನತ ದರ್ಜೆಯಲ್ಲಿ ಬರುವಂತೆ ಪ್ರತಿಯೊಬ್ಬ ಅಧಿಕಾರಿ, ವಾರ್ಡನ್‌ಗಳು ಮುತುವರ್ಜಿ ವಹಿಸಬೇಕು. ಪಾಲಕರ ಭರವಸೆಯನ್ನು ಹುಸಿಗೊಳಿಸಬಾರದು ಎಂದು ಅವರು ತಿಳಿಸಿದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಲಾಖೆಯ ವಸತಿನಿಲಯಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಇಲಾಖೆಯಿಂದ ಶೇ. 20ರಷ್ಟು ಹೆಚ್ಚುವರಿ ಹಾಸ್ಟೆಲ್‌ ಪ್ರವೇಶಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾ​ಗಿದ್ದು, ರು. 45 ಕೋಟಿ ಹೆಚ್ಚುವರಿ ಅನುದಾನ ಕೇಳಿದ್ದು, ಪ್ರಸ್ತಾವನೆಯು ಆರ್ಥಿಕ ಇಲಾಖೆ ಪರಿಶೀಲನೆಯಲ್ಲಿದೆ ಎಂದು ಅವರು ತಿಳಿಸಿದರು.

ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಮೆಟ್ರಿಕ್‌ ಪೂರ್ವ 26 ಮತ್ತು ಮೆಟ್ರಿಕ್‌ ನಂತರದ 41 ವಿದ್ಯಾರ್ಥಿನಿಲಯಗಳಿವೆ. ಬಾಲಕ ಮತ್ತು ಬಾಲಕಿಯರಿಗೆ ಸೇರಿದಂತೆ ಒಟ್ಟು 67 ವಿದ್ಯಾರ್ಥಿನಿಲಯಗಳಿದ್ದು 5420 ಜನ ಪ್ರವೇಶ ಪಡೆದಿದ್ದಾರೆ. ಖಾಸಗಿ ಅನುದಾನಿತ 4 ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಲಯಗಳಿವೆ. ವಿದ್ಯಾರ್ಥಿನಿಲಯಗಳಿಗೆ 67 ಕಟ್ಟಡಗಳ ಅಗತ್ಯವಿದ್ದು, ಅದರಲ್ಲಿ 31 ಸ್ವಂತ ಕಟ್ಟಡಗಳು ಮತ್ತು 36 ಬಾಡಿಗೆ ಕಟ್ಟಡಗಳಲ್ಲಿ ವಿದ್ಯಾರ್ಥಿನಿಲಯಗಳಿವೆ ಎಂದು ತಿಳಿಸಿದರು.

ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿ 2006-07ರಿಂದ 2018-19ರ ವರೆಗೆ ಜಿಲ್ಲೆಯ ವಿವಿಧ ತಾಲೂಕಿನಲ್ಲಿ 71 ಸಮುದಾಯ ಭವನಗಳು ಮತ್ತು 9 ವಿದ್ಯಾರ್ಥಿನಿಲಯಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಗುರುರಾಜ ಕುಲಕರ್ಣಿ ಮಾತನಾಡಿ, ನಿಗಮದ ವಿವಿಧ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿ ಶಾಸಕರ ಅನುಮೋದನೆ ಪಡೆದು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಚಾರ್ಯರು ಮಾತನಾಡಿ, ವಿದ್ಯಾರ್ಥಿಗಳ ಅಭ್ಯಾಸ, ಸಾಧನೆ ಕುರಿತು ವಿವರಿಸಿದರು.
 

Follow Us:
Download App:
  • android
  • ios