ಹುಬ್ಬಳ್ಳಿ[ನ.4]: ಇಲ್ಲಿನ ಶಹರ ಠಾಣೆಯ ಎದುರು ಬ್ರಾಡವೇ ರಸ್ತೆಯಲ್ಲಿ ಭಾನುವಾರ ಸಂಜೆ ಏಕಾಏಕಿ ಕುಸಿದಿದೆ. ಇದು ಜನರಲ್ಲಿ ಆತಂಕವನ್ನುಂಟು ಮಾಡಿತು.

ಶಹರ ಠಾಣೆಯ ಎದುರಿನ ರಸ್ತೆಯಲ್ಲೇ ಇದಾಗಿದ್ದು, ಸುಮಾರು 2 ಅಡಿಗಳಷ್ಟು ರಸ್ತೆ ಕುಸಿದು ದೊಡ್ಡ ಗುಂಡಿಯಂತಾಗಿದೆ. ಎದುರಿನ ಅಂಗಡಿಕಾರರೊಬ್ಬರು ಜನರು ಬೀಳದಿರಲೆಂಬ ಉದ್ದೇಶದಿಂದ ಅದರ ಸುತ್ತಲು ಇಟ್ಟಂಗಿ ಇಟ್ಟಿದ್ದಾರೆ. ತೆಗ್ಗಿಗೆ ಅಡ್ಡಲಾಗಿ ಬೋರ್ಡ್‌ ಇಟ್ಟಿದ್ದಾರೆ.

ಆಗಿದ್ದೇನು?

ಭಾನುವಾರ ಸಂಜೆ ದ್ವಿಚಕ್ರ ವಾಹನವೊಂದು ಹೋಗುತ್ತಿದ್ದಾಗ ರಸ್ತೆ ಸ್ವಲ್ಪ ಕುಸಿದಂತೆ ಕಂಡಿದೆ. ಏನಾಗಿದೆ? ಎಂದು ಇಲ್ಲಿನ ನಾಗರಿಕರು ರಸ್ತೆಯನ್ನು ಮುಟ್ಟಿದ್ದಾರೆ. ಅಷ್ಟರೊಳಗೆ ಅದು ಸುಮಾರು ಎರಡು ಅಡಿಗಳಷ್ಟು ಆಳಕ್ಕೆ ಕುಸಿದಿದೆ. ಇದನ್ನು ನೋಡಿ ಗಾಬರಿಯಾದ ನಾಗರಿಕರು ಪಾಲಿಕೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಆದರೆ ಪಾಲಿಕೆಯವರಾರ‍ಯರು ಅಲ್ಲಿಗೆ ಬಂದಿಲ್ಲ. ಬಳಿಕ ಅಂಗಡಿಕಾರ ಟಿ.ವಿ. ಪೂಜಾರಿ ಅವರೇ ಅದರೊಳಗೆ ಯಾರು ಬೀಳದಂತೆ ಸುತ್ತಲು ಇಟ್ಟಂಗಿ ಇಟ್ಟು ರಕ್ಷಣೆ ಮಾಡಿದ್ದಾರೆ. ಕಳಪೆ ಕಾಮಗಾರಿಯ ರಸ್ತೆ ನಿರ್ಮಾಣದಿಂದಲೇ ಈ ರೀತಿ ಆಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ ಟಿ.ವಿ. ಪೂಜಾರಿ, ಪಾಲಿಕೆಗೆ ದೂರು ನೀಡಿದೇವು. ಆದರೆ ಯಾರೊಬ್ಬರು ಬರಲಿಲ್ಲ. ಹೀಗಾಗಿ ನಾವೇ ಸುತ್ತಲು ಇಟ್ಟಂಗಿ ಹಾಗೂ ಬೋರ್ಡ್‌ ಇಟ್ಟೆವು ಎಂದು ಹೇಳಿದ್ದಾರೆ.