ಗದಗ ಜಿಲ್ಲೆಯ ‘ಕಪ್ಪತಗುಡ್ಡ’ಕ್ಕೆ ಮತ್ತೊಮ್ಮೆ ಅಗ್ನಿಪರೀಕ್ಷೆ!
ಸಿಎಂ ಬಿಎಸ್‌ವೈ ಅಧ್ಯಕ್ಷತೆಯಲ್ಲಿ ವನ್ಯಜೀವಿ ಮಂಡಳಿ ಸಭೆ| ‘ಕಪ್ಪತಗುಡ್ಡ’ಕ್ಕೆ ಮತ್ತೊಮ್ಮೆ ಅಗ್ನಿಪರೀಕ್ಷೆ| 2017ರ ಜ.16ರಂದು ಕಪ್ಪತಗುಡ್ಡವನ್ನು ‘ಸಂರಕ್ಷಿತ ಅರಣ್ಯ ಪ್ರದೇಶ’ ಎಂದು ಘೋಷಿಸಿ,‘ವನ್ಯಜೀವಿಧಾಮ ಸ್ಥಾನಮಾನ’ ನೀಡಲಾಗಿತ್ತು| ಇದೀಗ ಆ ಸ್ಥಾನಮಾನ ಪರಿಶೀಲಿಸುವ ಪ್ರಸ್ತಾವನೆ ಸಭೆಯ ಪ್ರಮುಖ ಅಜಂಡಾ ಆಗಿದ್ದು| ಸರ್ಕಾರದ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಪರಿಸರ ಪ್ರೇಮಿಗಳಲ್ಲಿ ಮತ್ತು ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ|
ಹುಬ್ಬಳ್ಳಿ(ಅ.17): ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಬಿಂಬಿತವಾಗಿರುವ ಗದಗ ಜಿಲ್ಲೆಯ ‘ಕಪ್ಪತಗುಡ್ಡ’ಕ್ಕೆ ಮತ್ತೊಮ್ಮೆ ಅಗ್ನಿಪರೀಕ್ಷೆ ಎದುರಾಗಿದ್ದು, ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ‘ಕರ್ನಾಟಕ ವನ್ಯಜೀವಿ ಮಂಡಳಿ’ ಸಭೆಯಲ್ಲಿ ಇದರ ಸಂರಕ್ಷಣೆಯ ಭವಿಷ್ಯ ನಿರ್ಧಾರವಾಗಲಿದೆ.
2017ರ ಜ.16ರಂದು ಕಪ್ಪತಗುಡ್ಡವನ್ನು ‘ಸಂರಕ್ಷಿತ ಅರಣ್ಯ ಪ್ರದೇಶ’ ಎಂದು ಘೋಷಿಸಿ,‘ವನ್ಯಜೀವಿಧಾಮ ಸ್ಥಾನಮಾನ’ ನೀಡಲಾಗಿತ್ತು. ಇದೀಗ ಆ ಸ್ಥಾನಮಾನ ಪರಿಶೀಲಿಸುವ ಪ್ರಸ್ತಾವನೆ ಗುರುವಾರ ನಡೆಯಲಿರುವ ಸಭೆಯ ಪ್ರಮುಖ ಅಜಂಡಾ ಆಗಿದ್ದು, ಸರ್ಕಾರದ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಪರಿಸರ ಪ್ರೇಮಿಗಳಲ್ಲಿ ಮತ್ತು ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಕಪ್ಪತಗುಡ್ಡ ತನ್ನ ಒಡಲಲ್ಲಿ ನಾನೂರಕ್ಕೂ ಹೆಚ್ಚು ಅಮೂಲ್ಯ ಔಷಧಿ ಸಸ್ಯಗಳ ಜತೆಗೆ ಹೇರಳ ಖನಿಜ ಸಂಪತ್ತನ್ನು ಹೊಂದಿದೆ. ಅಪಾರ ಪ್ರಮಾಣದ ಚಿನ್ನದ ಅದಿರು ಇರುವುದನ್ನು ಅರಿತ ಕೆಲ ಕಂಪೆನಿಗಳು ಇಲ್ಲಿ ಗಣಿಗಾರಿಕೆ ಮಾಡಲು ಪರವಾನಿಗೆ ಪಡೆದು, ಅವಕಾಶಕ್ಕಾಗಿ ಹಾತೊರೆಯುತ್ತಿದ್ದವು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಅಪಾಯ ಅರಿತ ಗದಗದ ತೋಂಟದಾರ್ಯ ಮಠದ ಲಿಂ.ಪೀಠಾಧೀಶ ಡಾ.ಸಿದ್ದಲಿಂಗ ಸ್ವಾಮೀಜಿಗಳು ದೊಡ್ಡ ಆಂದೋಲನವನ್ನೇ ನಡೆಸಿದ್ದರು. ಈ ಜನಾಂದೋಲನ ಮತ್ತು ಪರಿಸರ ಪ್ರೇಮಿಗಳ ಆಗ್ರಹಕ್ಕೆ ಮಣಿದ ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕಪ್ಪತಗುಡ್ಡವನ್ನು ‘ಸಂರಕ್ಷಿತ ಅರಣ್ಯ ಪ್ರದೇಶ’ ಎಂದು ಘೋಷಿಸಿತ್ತು. ಇದರೊಂದಿಗೆ ಗುಡ್ಡಕ್ಕೆ ಎದುರಾಗಿದ್ದ ಆಪತ್ತು ದೂರವಾಯಿತು ಎಂದು ಇಲ್ಲಿನ ಜನತೆ ಸಮಾಧಾನದ ನಿಟ್ಟುಸಿರು ಬಿಟ್ಟು ಇನ್ನೂ 9 ತಿಂಗಳು ಕಳೆದಿಲ್ಲ, ಈಗ ನೂತನವಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಆ ‘ಸಂರಕ್ಷಿತ ಅರಣ್ಯ ಪ್ರದೇಶ ಸ್ಥಾನಮಾನ’ ಪರಿಶೀಲನೆಗೆ ಮುಂದಾಗಿರುವುದು ಮತ್ತೊಂದು ರೀತಿಯ ಕಳವಳ ಹುಟ್ಟಿಸಿದೆ.