ಶಿವಾನಂದ ಗೊಂಬಿ

ಹುಬ್ಬಳ್ಳಿ[ಅ.30]: ನೈರುತ್ಯ ರೈಲ್ವೆ ವಲಯದ ಕೇಂದ್ರ ಸ್ಥಳ, ಜಂಕ್ಷನ್‌ ಹೊಂದಿರುವ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿನ ಅಕ್ರಮ ಚಾಯ್‌ವಾಲಾಗಳಿಗೆ ಕಡಿವಾಣ ಬೀಳುವುದು ಯಾವಾಗ? ಇವು ಇಲ್ಲಿನ ರೈಲು ನಿಲ್ದಾಣದಲ್ಲಿ ಇತ್ತೀಚಿಗೆ ನಡೆದ ‘ಫೀಡ್ ಬಾಂಬ್ ಸ್ಫೋಟ’ ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ಉಂಟಾಗಿರುವ ಪ್ರಶ್ನೆಗಳು.

ಹುಬ್ಬಳ್ಳಿ ಜಂಕ್ಷನ್ ಹೊಂದಿರುವ ದೊಡ್ಡ ನಿಲ್ದಾಣ. ಇಲ್ಲಿಐದು ಫ್ಲಾಟ್‌ ಫಾರಂಗಳಿವೆ. ಪ್ರತಿ ನಿತ್ಯ 55 ರೈಲುಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ಕನಿಷ್ಟವೆಂದರೂ 36800ಕ್ಕೂ ಹೆಚ್ಚು ಜನ (ಫುಟ್‌ಫಾಲ್) ನಿಲ್ದಾಣಕ್ಕೆ ಬರುತ್ತಾರೆ, ಹೋಗುತ್ತಾರೆ. ಜತೆಗೆ ಉತ್ತರ ಕರ್ನಾಟಕದಲ್ಲಿ ಚಹಾದ ಸೇವನೆಯೂ ಜಾಸ್ತಿಯೇ ಇದೆ. ಹೀಗಾಗಿ, ಸಹಜವಾಗಿ ಚಾಯ್‌ವಾಲಾಗಳು ಸಾಕಷ್ಟು ಜನರಿದ್ದಾರೆ .ಆದರೆ, ಹೀಗೆ ನಿಲ್ದಾಣಗಳಲ್ಲಿ ಕಾಣ ಸಿಗುವ ಚಾಯ್‌ವಾಲಾಗಳಲ್ಲಿ ಸಾಕಷ್ಟು ಜನ ಅಕ್ರಮ ಚಾಯ್‌ವಾಲಾಗಳು ಎನ್ನುವ ಮಾತಿದೆ. ಇವರಿಗೆ ಇಲಾಖೆಯಿಂದ ಯಾವುದೇ ರೀತಿಯ ಅನುಮತಿ ಇರಲ್ಲ. ಬೇಕಾಬಿಟ್ಟಿಯಾಗಿ ಮಾರಾಟಮಾಡುತ್ತಾರೆ. ಇವರನ್ನು ಯಾರೂ ಕೇಳುವುದಿಲ್ಲ.

ಇತ್ತೀಚಿಗೆ ಅಂದರೆ 13 ದಿನಗಳ ಹಿಂದೆ ನಡೆದ ‘ಫೀಡ್‌ಬಾಂಬ್ ಸ್ಫೋಟ’ದಿಂದ ಇಂಥ ಅಕ್ರಮ ಚಾಯ್‌ವಾಲಾಗಳಿರುವ ಅಂಶ ಬೆಳಕಿಗೆ ಬಂದಿದೆ. ಫೀಡ್ ಬಾಂಬ್‌ಕೂಡ ಸ್ಫೋಟವಾಗಿದ್ದು ಒಬ್ಬ ಚಾಯವಾಲಾನ ಕೈಯಲ್ಲೇ. ಹಾಗಂತ ಆತ ಅಕ್ರಮ ಚಾಯವಾಲಾ ಅಲ್ಲ.ಇಲಾಖೆಯಿಂದ ಬ್ಯಾಚ್ ಪಡೆದಿರುವ ಅಧಿಕೃತ ಚಾಯ್‌ವಾಲಾ. ಆದರೆ ಈ ಘಟನೆಯಿಂದ ಅಕ್ರಮ ಚಾಯ್‌ವಾಲಾಗಳು ಇರುವುದು, ಅವರ ಕರಾಮತ್ತೇನು, ಅವರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದೆಲ್ಲ ಬಹಿರಂಗಗೊಳ್ಳುತ್ತಿದೆ. 

ಯಾವ ರೀತಿ ನಿಯಮ: 

ಹಾಗೆ ನೋಡಿದರೆ ರೈಲ್ವೆ ನಿಲ್ದಾಣವಾಗಲಿ, ರೈಲುಗಳಲ್ಲಾಗಲಿ ಚಹಾ ಮಾರಾಟ ಮಾಡಬೇಕೆಂದರೆ ಇಲಾಖೆ ಅದಕ್ಕೊಂದು ಶಿಸ್ತು ಬದ್ಧತೆ ರೂಪಿಸಿದೆ. ಕ್ಯಾಂಟೀನ್ ನಿಲ್ದಾಣದಲ್ಲೇ ಇರಬೇಕು. ಕಡ್ಡಾಯವಾಗಿ ಗುತ್ತಿಗೆ ಪಡೆದಿರಬೇಕು. ಆತನ ಬಳಿ ಎಷ್ಟು ಜನ ಕೆಲಸಗಾರರಿದ್ದಾರೆ ಎಂಬ ಬಗ್ಗೆ ಇಲಾಖೆಗೆ ಮಾಹಿತಿ ನೀಡಿ ಅವರ ಹೆಸರಿನಲ್ಲಿ ಬ್ಯಾಚ್‌ಗಳನ್ನು ಪಡೆಯಬೇಕು. ಅವರಿಗೆ ಮಾತ್ರ ಚಹಾ ಮಾರಾಟ ಮಾಡಲು ಅವಕಾಶ. ಇನ್ನು ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಚಹಾ ಮಾರಾಟ ಮಾಡುವುದನ್ನು ಪ್ರತ್ಯೇಕವಾಗಿಯೇ ನಿಗದಿ ಮಾಡಲಾಗಿರುತ್ತದೆ. ಜತೆಗೆ ಯಾವ ರೈಲು ಎಂಬುದನ್ನೂ ಸೂಚಿಸಲಾಗಿರುತ್ತದೆ. ಅದೇ ರೈಲಿನಲ್ಲಿ ಸಂಚರಿಸಿ ಚಹಾಮಾರಾಟ ಮಾಡಬೇಕು. ಅವರು ಯಾವುದೇ ಕಾರಣಕ್ಕೂ ನಿಲ್ದಾಣದಲ್ಲಿ ಮತ್ತು ನಿಲ್ದಾಣದಲ್ಲಿ ಮಾರಾಟ ಮಾಡುವವರು ರೈಲಿನಲ್ಲಿ ಮಾರಾಟ ಮಾಡುವಂತಿಲ್ಲ. ಹಾಗೊಂದು ವೇಳೆ ಮಾರಾಟ ಮಾಡುವಾಗ ಸಿಕ್ಕಿ ಬಿದ್ದರೆ ಅದನ್ನು ಅಕ್ರಮ ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿಆಗುತ್ತಿರುವುದು ಇದೇ. ಇದರೊಂದಿಗೆ ಇಲ್ಲಿನ ಗುತ್ತಿಗೆದಾರರು ಚಹಾಮಾರಾಟಕ್ಕೆ ಬಳಸುವ ಚಾಯ್‌ವಾಲಾಗಳ ಸಂಖ್ಯೆಯೇ ಬೇರೆ. 

ಇಲಾಖೆಗೆ ಕೊಡುವ ಸಂಖ್ಯೆಯೇ ಬೇರೆ.  5-10 ಜನ ಹುಡುಗರನ್ನು ಚಹಾ ಮಾರಾಟ ಮಾಡಲು ಹಚ್ಚುತ್ತೇವೆ ಎಂದು ಅನುಮತಿ ಪಡೆದು, 30-40 ಜನ ಹುಡುಗರನ್ನು ಬಳಕೆ ಮಾಡಿಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಕನಿಷ್ಠವೆಂದರೂ 150-160 ವರೆಗೆ ಅಕ್ರಮ ಚಾಯ್‌ವಾಲಾಗಳೇ ಸಿಗುತ್ತಾರೆ. ಇವರಿಗೆ ಬ್ಯಾಚ್ ಇರುವುದಿಲ್ಲ.ಇವರ ಹಿಂದೆ ಸ್ಥಳೀಯ ಮಟ್ಟದ ಮರಿ ಪುಡಾರಿಗಳು ಇದ್ದಾರೆ ಎಂಬುದರ ಕುರಿತು ಇಲಾಖೆಯ ಮೂಲಗಳು ತಿಳಿಸುತ್ತದೆ. ಇದು ಆರ್‌ಪಿಎಫ್ ಅಧಿಕಾರಿಗಳಿಗಾಗಲಿ, ರೈಲ್ವೆ ಅಧಿಕಾರಿಗಳಿ ಗಾಗಲಿ ಗೊತ್ತಿಲ್ಲ ಅಂತೇನೂ ಅಲ್ಲ. ಆದರೂ ಕಂಡೂ ಕಾಣದಂತೆ ಇರುತ್ತಾರೆ. ಇದರಲ್ಲಿ ಅವರು ಶಾಮೀಲಾಗಿ ರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಸಚಿವರ ಖಡಕ್ ವಾರ್ನಿಂಗ್:

ಈ ನಡುವೆ ಫೀಡ್‌ಬಾಂಬ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಸ್ಥಳ ವೀಕ್ಷಣೆಗೆ ಬಂದಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ನಿಲ್ದಾಣದಲ್ಲಿರುವ ಅಕ್ರಮ ಚಾಯ್‌ವಾಲಾಗಳಿಗೆ ಕಡಿವಾನ ಹಾಕಿ. ಯಾವುದೇ ಕಾರಣಕ್ಕೂ ಅನಧಿಕೃತ ಚಾಯ್‌ವಾಲಾಗಳು ಇರುವಂತಿಲ್ಲ ಎಂದು ಖಡಕ್‌ವಾರ್ನಿಂಗ್ ನೀಡಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿಎಚ್ಚೆತ್ತುಕೊಂಡಿರುವ ಇಲಾಖೆ ಇದೀಗ ಅಕ್ರಮ ಚಾಯ್‌ವಾಲಾಗಳ್ಯಾರು ಎಂಬುದನ್ನು ಪರಿಶೀಲಿಸುತ್ತಿದೆ. ಶೀಘ್ರದಲ್ಲೇ ಅಕ್ರಮ ಚಾಯ್‌ವಾಲಾಗಳಿಗೆ ಕಡಿವಾಣ ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸುತ್ತಾರೆ. ಹುಬ್ಬಳ್ಳಿ ನಿಲ್ದಾಣದಲ್ಲಿ 200 ಕ್ಕೂ ಹೆಚ್ಚು ಅಕ್ರಮ ಚಾಯ್‌ವಾಲಾಗಳು ಈಗಲಾದರೂ ಪಾಲನೆಯಾಗುವುದೇ 

ರೈಲ್ವೆ ರಾಜ್ಯ ಸಚಿವರ ಸೂಚನೆ?

ಕಂಪ್ಲೇಂಟ್ ಕೊಟ್ಟಿಲ್ಲವೇಕೆ? ಇನ್ನು ಫೀಡ್ ಬಾಂಬ್ ಸ್ಫೋಟಗೊಂಡು ಗಾಯಗೊಂಡಿರುವ ಹುಸೇನಸಾಬ್ ನಾಯಕವಾಲೆ ಆಸ್ಪತ್ರೆ ಸೇರಿದ್ದಾನೆ. ಈತ ಕೌಸ್ತುಬ್ ಎಂಬ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ. ಬಳ್ಳಾರಿ- ವಾಸ್ಕೋ, ವಾಸ್ಕೋ-ಮೀರಜ್ ಟ್ರೈನ್‌ನಲ್ಲಿ ಚಹಾ ಮಾರಾಟ ಮಾಡುವ ಬ್ಯಾಚ್ ಹೊಂದಿರುವ ಯುವಕ. ಆದರೆ ಈ ಕ್ಯಾಂಟೀನ್ ಮಾಲೀಕ ಆಸೀಫ್ ಬಳ್ಳಾರಿ ಈವರೆ ಗೂತಮ್ಮ ಕ್ಯಾಂಟೀನ್ ಹುಡುಗನ ಕೈಯಲ್ಲೇಕೆ ಬಾಂಬ್‌ ಕೊಟ್ಟಿರಿ ಎಂದು ಪ್ರಶ್ನಿಸಿ ದೂರು ನೀಡಿಲ್ಲ. ಹುಸೇನಸಾಬ್‌ನ ತಾಯಿ ಮಾತ್ರ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಕೌಸ್ತುಬ್ ಕ್ಯಾಂಟೀನ್‌ ಮಾಲೀಕ ಕೂಡ ದೂರು ನೀಡಬೇಕಿತ್ತು. ತನ್ನ ಬಳಿ ಕೆಲಸ ಮಾಡುವ ಕೆಲಸಗಾರರಿಗೆ ಏನಾದರೂ ಆದರೆ ಮಾಲೀಕನೂ ಜವಾಬ್ದಾರನಲ್ಲವೇ? ಏಕೆ ನೀಡುತ್ತಿಲ್ಲಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.