ಹುಬ್ಬಳ್ಳಿ(ಅ.28): ಅತಿವೃಷ್ಟಿಯಿಂದ ರಾಜ್ಯದಲ್ಲಿ ಸಾಕಷ್ಟು ಅವಾಂತರಗಳಾಗಿವೆ. ಮಳೆಯಿಂದಾಗಿ ದೊಡ್ಡಮಟ್ಟದ ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಸ್ವಲ್ಪ ಸಮಯ ಕೊಡಬೇಕಾಗುತ್ತೆ. ಯಾವುದೇ ಸರ್ಕಾರವಿದ್ದರೂ ಒಂದೇ ರಾತ್ರಿಯಲ್ಲಿ ಎಲ್ಲವನ್ನೂ ಬಗೆಹರಿಸಲು ಆಗಲ್ಲ. ನನ್ನ ಅನಿಸಿಕೆ ಪ್ರಕಾರ ರಾಜ್ಯದಲ್ಲಿ ಹಣದ ಕೊರತೆಯಿಲ್ಲ. ಮಂತ್ರಿಗಳು ದಿನಕ್ಕೊಂದು ಹೇಳಿಕೆ ಕೊಡುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. 

ಸೋಮವಾರ ನಗರದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು ಒಮ್ಮೆ ಆರ್ಥಿಕವಾಗ ಸದೃಢವಾಗಿದ್ದೇವೆ ಅಂತಾರೆ, ಇನ್ನೊಮ್ಮೆ ಆರ್ಥಿಕ ಪರಿಸ್ಥಿತಿ ತನಗೆ ಮಾತ್ರ ಗೊತ್ತು ಅಂತಾರೆ. ಸಿಎಂ ಗೊಂದಲದ ಹೇಳಿಕೆ ಕೊಡುತ್ತಾರೆ. ನಮ್ಮ ಬದುಕು ಪುನಃ ಕಟ್ಟಿಕೊಡುತ್ತಾರಾ ಅನ್ನುವ ಭರವಸೆ ಸಂತ್ರಸ್ತರಿಗೆ ಮೂಡುತ್ತಿಲ್ಲ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನೆರೆ ಸಂತ್ರಸ್ತರು ಆತಂಕದಲ್ಲಿದ್ದಾರೆ. ಆತ್ಮಹತ್ಯೆಯತ್ತ ಸಾಗುತ್ತಿದ್ದಾರೆ. ಸಂತ್ರಸ್ತರಿಗೆ ಬದುಕು ಕಟ್ಟಿಕೊಡಲು ಸರ್ಕಾರ ಮುಂದಾಗಬೇಕು. ಚುನಾವಣೆ ಎಷ್ಟರ ಮಟ್ಟಿಗೆ ನಡೆಯುತ್ತೆ ಗೊತ್ತಿಲ್ಲ. ನೆರೆ ಸಂತ್ರಸ್ತರ ಪರವಾಗಿ ಇರುವವರಿಗೆ ನನ್ನ ಶಕ್ತಿ ಧಾರೆ ಎರೆಯಲು ಸಿದ್ಧರಿದ್ದೇವೆ ಎಂದು ತಿಳಿದಿದ್ದಾರೆ. 

ಟಿಲಿಫೋನ್ ಕದ್ದಾಲಿಕೆ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ತಪ್ಪು ಮಾಡಿದ್ರೆ ನಾನು ಹೆದರಬೇಕು. ಯಾವ ಟೆಲಿಫೋನ್ ಟ್ಯಾಪಿಂಗ್, ಐಎಮ್‌ಎ ತನಿಖೆಗೆ ನಾನು ಹೆದರಲ್ಲ. ಐಎಮ್‌ಎ ರೂವಾರಿ ಓಡಿದ್ದು ನಾನು‌ ತೆಗೆದುಕೊಂಡ ಕ್ರಮದಿಂದ. ಯಡಿಯೂರಪ್ಪ ಮುಂದುವರಿಯಲಿ, ನನ್ನ ಉಳಿಸ್ರಪ್ಪ ಎಂದು ಯಾರ ಹತ್ರಾನೂ ಭಿಕ್ಷೆ ಬೇಡಲ್ಲ. ಇದು ನನ್ನ ರಾಜಕೀಯ ಜಾಯಮಾನವಲ್ಲ ಎಂದು ತಿಳಿಸಿದ್ದಾರೆ. 

ಸಾಲಮನ್ನಾದಿಂದ ಲಕ್ಷಾಂತರ ಕುಟುಂಬಗಳ ಜೀವ ಉಳಿದಿದೆ. ಇಲ್ಲದಿದ್ದರೆ ಎಷ್ಟೋ ಜನರು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಸಾಲಮನ್ನಾಕ್ಕೆ ಕೇಂದ್ರ ಸರ್ಕಾರದ ಬಳಿ ಭಿಕ್ಷೆ ಕೇಳಬೇಕಿಲ್ಲ‌. ರಾಜ್ಯದಲ್ಲಿ ದುಡ್ಡಿನ ಸಮಸ್ಯೆಯಿಲ್ಲ, ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕು‌. ಈಗಿರುವ ಸರ್ಕಾರ ಕೆಡವಿ ಮತ್ತೊಂದು ಚುನಾವಣೆ ಮಾಡಬೇಕು ಅನ್ನೋದು ನನ್ನ ವಿಚಾರವಲ್ಲ. ಮತ್ತೊಂದು ಚುನಾವಣೆ ನಡೆದ್ರೆ ರಾಜಕಾರಣಿಗಳ ಗಮನ ಜನರ ಸಮಸ್ಯೆಗಳತ್ತ ಇರಲ್ಲ. ಜನರ ಕಷ್ಟ ನೋಡಿ ತೀರ್ಮಾನ ಬದಲಿಸಿದ್ದೇನೆ. ಮಧ್ಯಂತರ ಚುನಾವಣೆ ಬರಬಾರದು ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ. 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋದಲ್ಲೆಲ್ಲ ಅನ್ನಭಾಗ್ಯ ಯೋಜನೆ ಕೊಟ್ಟೆ ಅಂತಾರೆ. ಪುಕ್ಕಟೆ ಅಕ್ಕಿ ಕೊಡಲು ಎಷ್ಟು ಹಣ ಇಟ್ಟಿದ್ದರು? ಅನ್ನಭಾಗ್ಯಕ್ಕೆ ನಾನೇ ಎಂಟು ನೂರು ಕೋಟಿ ರೂಪಾಯಿ ಹೊಂದಿಸಬೇಕಾಯಿತು ಎಂದು ಹೇಳಿದ್ದಾರೆ.