ಹುಬ್ಬಳ್ಳಿ(ಅ.19): ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಸಾಮಾನ್ಯ ಮಳೆಯಾಗಿದ್ದರೆ, ರಾತ್ರಿ ವೇಳೆ ಗುಡುಗು, ಸಿಡಿಲು ಸಹಿತ ಸುಮಾರು 3 ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಮಳೆ ಸುರಿದಿದೆ. ಈ ನಡುವೆ ಕುಂದಗೋಳ, ನವಲಗುಂದ ತಾಲೂಕುಗಳಲ್ಲೂ ಮಳೆಯಾಗಿದೆ.

ಬೆಳಗ್ಗೆಯಿದ್ದ ಬಿಸಿಲು ಮಧ್ಯಾಹ್ನವಾಗುತ್ತಿದ್ದಂತೆ ಬದಲಾಗಿ ಏಕಾಏಕಿ ಮೋಡ ಕವಿದ ವಾತಾವರಣ ಸೃಷ್ಟಿಯಾಯಿತು. ಬಳಿಕ 3 ಗಂಟೆಯಿಂದ ಅರ್ಧ ತಾಸಿನ ಕಾಲ ಮಳೆಯಾಗಿದ್ದರೆ, ಸಂಜೆವರೆಗೂ ಜಿಟಿಜಿಟಿ ಮಳೆ ಹನಿಯುತ್ತಲೇ ಇತ್ತು.
ರಾತ್ರಿ 7.30ರಿಂದ ಧಾರಾಕಾರ ಮಳೆಯಾಯಿತು. ದಾಜಿಬಾನ್‌ ಪೇಟೆಯ ತುಳಜಾಭವಾನಿ ದೇವಸ್ಥಾನದ ಬಳಿ ಮೊಳಕಾಲ್ಮಟ ನೀರು ನಿಂತು ಅಕ್ಷರಶಃ ಹೊಂಡಗಳಂತಾಗಿದ್ದವು. ಇನ್ನು ಬಿಆರ್‌ಟಿಎಸ್‌ ಮಾರ್ಗದ ಶ್ರೀನಗರ, ವಿದ್ಯಾನಗರ, ಹೊಸೂರುಗಳಲ್ಲೂ ಮೊಳಕಾಲ್ಮಟ ನೀರು ನಿಂತಿತ್ತು. ಕೆಲವೆಡೆಯಂತೂ ಬಿಆರ್‌ಟಿಎಸ್‌ ಕಾರಿಡಾರ್‌ ಕೆರೆಯಂತೆ ಭಾಸವಾಗುತ್ತಿತ್ತು. ಮಂಟೂರು ರಸ್ತೆಯಲ್ಲಿನ ವಿವಿಧ ಪ್ಲಾಟ್‌ಗಳು ಕೆಸರು ಗದ್ದೆಯಂತಾದವು. ಅಲ್ಲಿನ ನಿವಾಸಿಗಳು ಮನೆಗಳಿಗೆ ತೆರಳಲು ಹರಸಾಹಸ ಪಟ್ಟರು. ಕೆಲವರಂತೂ ದ್ವಿಚಕ್ರವಾಹನವನ್ನು ಪ್ಲಾಟ್‌ನಿಂದ ಒಂದು ಕಿಲೋ ಮೀಟರ್‌ ದೂರ ನಿಲುಗಡೆಗೊಳಿಸಿ ಮನೆಗಳಿಗೆ ನಡೆದುಕೊಂಡೇ ತೆರಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇನ್ನು ಅರವಿಂದನಗರ, ಕಮರಿಪೇಟದ ಕೆಲಕಾಂಪ್ಲೆಕ್ಸ್‌ಗಳಿಗೆ ನೀರು ನುಗ್ಗಿ ವ್ಯಾಪಾರಸ್ಥರು ತೊಂದರೆ ಅನುಭವಿಸಿದರು. ನಿರಂತರವಾಗಿ ಸುರಿದ ಮಳೆಯಿಂದಾಗಿ ಚರಂಡಿಗಳೆಲ್ಲ ತುಂಬಿ ಅದರ ಕೊಳಚೆ ನೀರೆಲ್ಲ ರಸ್ತೆ ಮೇಲೆ ಹರಿಯಿತು. ಇದರಿಂದ ದ್ವಿಚಕ್ರವಾಹನ ಸವಾರರು, ಸೇರಿದಂತೆ ವಿವಿಧ ವಾಹನಗಳ ಸವಾರರು ತಮ್ಮ ವಾಹನ ಚಲಾಯಿಸಲು ಹರಸಾಹಸ ಪಟ್ಟರು. ಮಂಟೂರು ರಸ್ತೆಯಲ್ಲಿನ ಗುಂಜಾಳ ಪ್ಲಾಟ್‌, ನೇಕಾರನಗರದಲ್ಲಿನ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿತ್ತು.

ಕುಂದಗೋಳ, ನವಲಗುಂದದಲ್ಲಿ ಮಳೆ

ಈ ನಡುವೆ ಕುಂದಗೋಳ ಹಾಗೂ ನವಲಗುಂದ ತಾಲೂಕುಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಈ ತಾಲೂಕುಗಳಲ್ಲಿ ರಾತ್ರಿ 3 ಗಂಟೆ ಕಾಲ ಮಳೆ ಸುರಿದಿದೆ. ಇದರಿಂದ ಕುಂದಗೋಳ ತಾಲೂಕಿನ ಅಲ್ಲಾಪುರದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು. ಹೊಲಗಳು ಮತ್ತೆ ಜಲಾವೃತವಾಗಿವೆ.ಕಳೆದ ಎರಡು ತಿಂಗಳಿಂದ ಮಳೆಯಿಂದ ಅನುಭವಿಸುತ್ತಿರುವ ತೊಂದರೆಯಿಂದಾಗಿ ಮತ್ತೆ ಮಳೆ ಬರುತ್ತಿರುವುದು ಗ್ರಾಮೀಣ ಭಾಗದ ನಿವಾಸಿಗಳಲ್ಲಿ ಬೆಚ್ಚಿ ಬೀಳಿಸುತ್ತಿದೆ.

ಅಕ್ಟೋಬರ್‌ 26ರವರೆಗೆ ಮಳೆ

ಈ ನಡುವೆ ಅ. 26ರ ವರೆಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಬೀದ ತಿಳಿಸಿದ್ದಾರೆ. ನೆರೆ ಪೀಡಿತ ಪ್ರದೇಶದಲ್ಲಿನ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯವನ್ನು ತಿಳಿಸಿರುವ ಅವರು, ಅ. 26ರ ವರೆಗೆ ಧಾರವಾಡ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅದರ ನಂತರದ ಪರಿಸ್ಥಿತಿ ಬಗ್ಗೆ ಅ. 24ರ ನಂತರ ಗೊತ್ತಾಗಲಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಿಂಗಾರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಒಂದು ವೇಳೆ ನ. 15ರೊಳಗೆ ಜೋಳ ಬಿತ್ತಲಿಲ್ಲವೆಂದರೆ ಮುಂದೆ ಬಿತ್ತನೆ ಮಾಡಲು ಬರಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.