ಹುಬ್ಬಳ್ಳಿ[ನ.7]: ಹುಬ್ಬಳ್ಳಿ- ಧಾರವಾಡ ಮಹಾನಗರ ರಾಜ್ಯಕ್ಕೆ ಎರಡನೆಯ ದೊಡ್ಡ ನಗರ. ವಾಣಿಜ್ಯ ನಗರಿ ಎಂಬೆಲ್ಲ ಹೆಸರುಗಳು ಇದಕ್ಕುಂಟು. ಆದರೆ ಇಲ್ಲಿನ ರಸ್ತೆಗಳು ಮಾತ್ರ ತಗ್ಗು-ಗುಂಡಿಗಳಿಂದ ಕೂಡಿವೆ. ಮಳೆ ಬಂದರೆ ಕೆಸರು ಗದ್ದೆಯಂತಾಗುವ ರಸ್ತೆಗಳು, ಬಿಸಿಲು ಬಿದ್ದರೆ ಧೂಳಿನ ಮಜ್ಜನವಾಗುತ್ತದೆ. ಇದೀಗ ಧೂಳನ್ನು ಸರಿಯಾಗಿ ನಿರ್ವಹಿಸದ ಪಾಲಿಕೆ, ಜನಪ್ರತಿನಿಧಿಗಳ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಸಂಘ- ಸಂಸ್ಥೆಗಳು ಹೋರಾಟಕ್ಕೆ ಅಣಿಯಾಗುತ್ತಿವೆ. ಮಹಾನಗರದಲ್ಲಿನ ಧೂಳಿನ ಸಮಸ್ಯೆಯಿಂದಾಗಿ ಪ್ರತಿನಿತ್ಯ ನಾಗರಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಬೆಳಗ್ಗೆ ಬಿಳಿ ಬಣ್ಣದ ಅಂಗಿ ಹಾಕಿಕೊಂಡು ಮನೆಯಿಂದ ಹೊರಬಿದ್ದರೆ ಸಾಕು ಒಂದೇ ಗಂಟೆಯಲ್ಲೇ ಅದು ಕೆಂಪು ಬಣ್ಣಕ್ಕೆ ತಿರುಗಿರುತ್ತದೆ. ದೆಹಲಿಯಲ್ಲಿ ಮಾಲಿನ್ಯದಿಂದಾಗಿ ಅಲ್ಲಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಹುಬ್ಬಳ್ಳಿಯಲ್ಲಿ ಧೂಳಿನಿಂದಾಗಿ ಅದಕ್ಕಿಂತಲೂ ಭೀಕರ ಸಮಸ್ಯೆ ಎದುರಿಸುವಂತಾಗುತ್ತಿದೆ. ಅಸ್ತಮಾ ಸೇರಿದಂತೆ ಶ್ವಾಸಕೋಶಕ್ಕೆ ಸಂಬಂಧಪಟ್ಟಂತೆ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ವೈದ್ಯರು, ಸಾರ್ವಜನಿಕ ಸಂಘಟನೆಗಳು ಕಳವಳ ವ್ಯಕ್ತಪಡಿಸುತ್ತಿವೆ.

ಅಂಗಡಿಗಳಿಗೆ ಬಂತು ಪ್ಲಾಸ್ಟಿಕ್: 

ವ್ಯಾಪಾರಸ್ಥರ ಗೋಳಂತೂ ಹೇಳುವಂತಿಲ್ಲ. ಅಂಗಡಿಯಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗದಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅಂಗಡಿಕಾರರು ತಮ್ಮ ಮೂಗಿಗೆ ಬಟ್ಟೆ ಕಟ್ಟಿಕೊಂಡು, ಮಾಸ್ಕ್ ಹಾಕಿಕೊಂಡು ವ್ಯಾಪಾರ ನಡೆಸುತ್ತಿರುವುದು ಒಂದೆಡೆಯಾದರೆ, ತಮ್ಮ ಅಂಗಡಿಗಳಿಗೆ ಧೂಳು ಮೆತ್ತದಿರಲು ಬಾಗಿಲುಗಳಿಗೆಲ್ಲ ಪ್ಲಾಸ್ಟಿಕ್ ಪೇಪರ್‌ಗಳನ್ನು ಹಾಕಿ ವ್ಯಾಪಾರ ಮಾಡುವಂತಾಗಿದೆ. ಇಲ್ಲಿನ ನೀಲಿಜಿನ್ ರಸ್ತೆಯಲ್ಲಿನ ಎಲ್ಲ ಅಂಗಡಿಗಳ ಬಾಗಿಲುಗಳಿಗೂ ದೊಡ್ಡ ದೊಡ್ಡ ಪ್ಲಾಸ್ಟಿಕ್ ಹಾಕಿರುವುದು ಕಂಡುಬರುತ್ತಿದೆ. ಕಳೆದ 10 ದಿನಗಳ ಹಿಂದಿನಿಂದ ಅಂದರೆ ಕೊಂಚ ಮಳೆ ಶಾಂತವಾದ ಬಳಿಕ ಇಡೀ ನಗರವೇ ಧೂಳುಮಯವಾಗಿದೆ. ಈ ಹಿನ್ನೆಲೆ ಧೂಳಿನಿಂದ ತಮ್ಮಅಂಗಡಿಯಲ್ಲಿನ ಸಾಮಗ್ರಿಗಳನ್ನು ಹಾಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಂಗಡಿಗಳ ಬಾಗಿಲಿಗೆ ಪ್ಲಾಸ್ಟಿಕ್ ಕವರ್‌ ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. 

ವ್ಯಾಪಾರಸ್ಥರ ಆಕ್ರೋಶ: 

ಈ ಕುರಿತಂತೆ ಅಂಗಡಿಕಾರ ರಮೇಶ ಎಂಬುವರು ಮಾತನಾಡಿ, ಏನು ಮಾಡೋದು ಇಲ್ಲಿನ ಜನಪ್ರತಿನಿಧಿಗಳು ಹಾಗೆ ಇದ್ದಾರೆ. ಅಧಿಕಾರಿಗಳು ಅದೇ ರೀತಿ ಇದ್ದಾರೆ. ಯಾರೊಬ್ಬರು ಜನರ ಸಮಸ್ಯೆಯನ್ನು ಕೇಳುತ್ತಿಲ್ಲ. ಧೂಳಿನಿಂದ ವ್ಯಾಪಾರವೆಲ್ಲ ಹದಗೆಟ್ಟು ಹೋಗುತ್ತಿದೆ. ಕೆಮ್ಮು, ದಮ್ಮುಗಳಿಂದ ಬಳಲುತ್ತಿದ್ದೇವೆ. ಈ ಕಾರಣಕ್ಕಾಗಿ ಅಂಗಡಿಗಳಿಗೆ ಪ್ಲಾಸ್ಟಿಕ್ ಕವರ ಹಾಕಿ ವ್ಯಾಪಾರ ಮಾಡಾಕ್ಕತ್ತೇವಿ ನೋಡಿ ಎಂದು ಆಕ್ರೋ ಶವ್ಯಕ್ತಪಡಿಸುತ್ತಾರೆ.

ನಿಯಂತ್ರಣ ಅಗತ್ಯ: 

ಕರ್ನಾಟಕ ಥಿಂಕರ್ಸ್ ಫೋರಂ ಅಧ್ಯಕ್ಷ ಪಿ.ಎಚ್. ನೀರಲಕೇರಿ ಮಾತನಾಡಿ, ಎಲ್ಲೆಂದರಲ್ಲಿಕಸ, ತಗ್ಗು- ಗುಂಡಿಗಳ ರಸ್ತೆ ಹಾಗೂ ವಿಪರೀತ ಹೊಗೆಬಿಡುವ ಕೆಎಸ್ಸಾರ್ಟಿಸಿ ಬಸ್ಸುಗಳು ಸೇರಿದಂತೆ ಭಾರಿ ವಾಹನಗಳ ನಿರ್ವಹಣೆ ಮತ್ತು ನಿಯಂತ್ರಣ ಮಾಡದೇ ಇರುವ ಕಾರಣದಿಂದಲೇ ಧೂಳು ಹುಬ್ಬಳ್ಳಿ- ಧಾರವಾಡ ಮಹಾನಗರದ ಜನತೆಗೆ ಕಂಟಕವಾಗಿ ಪರಿಣಮಿಸಿದೆ. ಸರಿಯಾಗಿ ಕಸ ಸಂಗ್ರಹಣೆ ಮಾಡಿದರೆ ಗಾಳಿಗೆ ಪ್ಲಾಸ್ಟಿಕ್ ಅಂತಹ ವಸ್ತುಗಳು ಹಾರುವುದಿಲ್ಲ. ಮಳೆಗೆ ಹದಗೆಟ್ಟ ರಸ್ತೆಗಳನ್ನು ಸರಿಯಾಗಿ ಅಭಿವೃದ್ಧಿ ಮಾಡಿದರೆ ಧೂಳು ಏಳುವುದಿಲ್ಲ. ಹಾಗೆಯೇ, ಖಾಸಗಿ ಬೈಕ್ ಹಾಗೂ ಕಾರಿನ ಹೊಗೆ ಪರೀಕ್ಷೆ ಮಾಡುವಷ್ಟೇ ಪ್ರಾಮಾಣಿಕವಾಗಿ ಕೆಎಸ್ಸಾರ್ಟಿಸಿ ಬಸ್ಸುಗಳ ಮತ್ತು ಭಾರಿ ವಾಹನಗಳ ಹೊಗೆ ಪರೀಕ್ಷೆಗಳನ್ನು ಸಹ ಟ್ರಾಫಿಕ್ ಪೊಲೀಸರು ಪರಿಶೀಲಿಸಿದರೆ ಎಷ್ಟೋ ಪ್ರಮಾಣದ ಹೊಗೆ, ಧೂಳನ್ನು ನಿಯಂತ್ರಿಸಬಹುದು ಎಂದು ಅಭಿಪ್ರಾಯಪಡುತ್ತಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಗಿರೀಶ ಪೂಜಾರ ಮಾತನಾಡಿ, ಮಹಾನಗರದಲ್ಲಿ ಹೆಸರಿಗೆ ಮಾತ್ರ ಅಭಿವೃದ್ಧಿಯಾಗುತ್ತಿದ್ದು, ನಿಜವಾಗಿ ಇಲ್ಲಿನ ಜನರು ಧೂಳುಸೇ ರಿದಂತೆ ಅನೇಕ ಕಾರಣಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಶಿಕ್ಷಣ, ಉದ್ಯೋಗ ಹಾಗೂ ಇತರೆ ಕಾರಣಗಳಿಂದಾಗಿ ರಾಜ್ಯದ ಬೇರೆ ಬೇರೆ ಊರುಗಳಿಂದ ಧಾರವಾಡಕ್ಕೆ ಬರುವ ಜನರಿಗೆ ಧೂಳು ಆವರಿಸುತ್ತಿದೆ. ಬರೀ ಹಗಲು ಮಾತ್ರವಲ್ಲದೇ ರಾತ್ರಿ ಸಮಯದಲ್ಲಿ ಧೂಳಿನಿಂದ ಮುಂದಿನ ವಾಹನ ಕಾಣದಂತಹ ಸ್ಥಿತಿ ಉಂಟಾಗಿದೆ. ಜನಪ್ರತಿನಿಧಿಗಳು ರಾಜಕೀಯ ಬಿಟ್ಟು ರಸ್ತೆಗಳನ್ನು ಸುಧಾರಿಸುವ ಕಾರ್ಯ ಮಾಡಬೇಕಿದೆ. ಮಹಾನಗರದಲ್ಲಿ ಧೂಳು ಮುಕ್ತ ಆಡಳಿತ ನೀಡಬೇಕು. ಇಲ್ಲದೇ ಹೋದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ. ಧೂಳಿನಿಂದ ನಾನಾ ಸಮಸ್ಯೆಯನ್ನು ಎದುರಿಸುತ್ತಿರುವ ಸಾರ್ವಜನಿಕರು ಎದುರಿಸುತ್ತಿದ್ದು, ಇನ್ನಾದರೂ ಧೂಳುಮುಕ್ತಕ್ಕಾಗಿ ಅಧಿಕಾರಿವರ್ಗ ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಲಿ ಎಂಬ ಒತ್ತಾಯ ಸಾರ್ವಜನಿಕರದ್ದು

ಇಂದು ಪ್ರತಿಭಟನೆ

ಧೂಳಿನ ಸಮಸ್ಯೆಯಿಂದ ರೊಚ್ಚಿಗೆದ್ದಿರುವ ಸಾರ್ವಜನಿಕರು ಇದೀಗ ಹೋರಾಟದ ಹಾದಿ ಹಿಡಿಯುತ್ತಿದ್ದಾರೆ. ಯುವ ಮುಖಂಡ ಶಾಕೀರ ಸನದಿ ಅವರ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ  11 ಗಂಟೆಗೆ ಮಾಸ್ಕ್ ವಿತರಿಸುವ ಮೂಲಕ ಪ್ರತಿಭಟನೆ ನಡೆಯಲಿದೆ. ಈ ಕುರಿತಂತೆ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಶಾಕೀರ ಸನದಿ ಈ ಬಗ್ಗೆ ಪ್ರಚಾರ ನಡೆಸಿದ್ದು, ಸುಮಾರು 200 ಕ್ಕೂ ಹೆಚ್ಚು ಮಾಸ್ಕ್ ವಿತರಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.