ಹುಬ್ಬಳ್ಳಿ(ಅ.17): ಸೀಟ್‌ ಬೆಲ್ಟ್‌ ಹಾಕದ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿಯನ್ನು ಬೈಕ್ ಸವಾರ ಬೆನ್ನತ್ತಿ ಪ್ರಶ್ನಿಸಿ, ನೀವೇ ನಿಯಮ ಅಲ್ಲಂಘಿಸಿದರೆ ಹೇಗೆ, ಇದು ಯಾವ ನ್ಯಾಯ ಎಂದು ತರಾಟೆಗೆ ತೆಗೆದುಕೊಂಡ ವಿಡಿಯೋವೊಂದು ಹುಬ್ಬಳ್ಳಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನಗಳನ್ನು ಹೊತ್ತೊಯ್ಯುವ ಟೋಯಿಂಗ್‌ ವಾಹನದಲ್ಲಿನ ಪೊಲೀಸ್‌ ಸಿಬ್ಬಂದಿ ಸೀಟ್‌ ಬೆಲ್ಟ್‌ ಹಾಕದೇ ತೆರಳುತ್ತಿದ್ದು, ಇದನ್ನು ಗಮನಿಸಿದ ಬೈಕ್‌ ಸವಾರನೊಬ್ಬ ವಾಹನ ಚಲಿಸುತ್ತಿರುವಾಗಲೇ ತರಾಟೆಗೆ ತೆಗೆದುಕೊಂಡಿದ್ದಾನೆ. ನೀವ್ಯಾಕೆ ಸೀಟ್‌ ಬೆಲ್ಟ್‌ ಹಾಕಲ್ಲ ಎಂದು ಪ್ರಶ್ನಿಸಿದ್ದಾನೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನೀವು ಸೀಟ್‌ ಬೆಲ್ಟ್‌ ಹಾಕಿಲ್ಲ. ನಿಮ್ಮ ವಾಹನದ ಚಾಲಕನೂ ಸೀಟ್‌ ಬೆಲ್ಟ್‌ ಹಾಕಿಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾನೆ. ನಿಮಗೊಂದು ನ್ಯಾಯ, ನಮಗೊಂದು ನ್ಯಾಯನಾ? ಕೋರ್ಟ್‌ ಇದೇನಾ ಹೇಳಿರೋದು ಎಂದೆಲ್ಲ ಪ್ರಶ್ನಿಸಿದ್ದಾನೆ. ಅಲ್ಲದೇ, ಯಾವ ಠಾಣೆ, ನಿಮ್ಮ ಹೆಸರೇನು ಎಂದೆಲ್ಲ ಪ್ರಶ್ನಿಸಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಇದರಿಂದ ತಬ್ಬಿಬ್ಬಾದ ಪೊಲೀಸಪ್ಪ, ಕೊನೆಯವರೆಗೂ ತನ್ನ ಹೆಸರನ್ನು ಮಾತ್ರ ಹೇಳಿಲ್ಲ. ದಕ್ಷಿಣ ಸಂಚಾರಿ ಪೊಲೀಸ್‌ ಠಾಣೆ ಎಂದು ಮಾತ್ರ ಹೇಳಿದ್ದಾರೆ. ಸೀಟ್‌ ಬೆಲ್ಟ್‌ ಈ ವಾಹನಕ್ಕೆ ಇಲ್ಲವೇ ಇಲ್ಲ ಎಂದು ಹೇಳಿ ಅಲ್ಲಿಂದ ಮುಂದೆ ಹೋಗಿದ್ದಾರೆ.

ಇದೆಲ್ಲವನ್ನು ಬೈಕ್‌ ಸವಾರ ವಿಡಿಯೋ ಚಿತ್ರೀಕರಣ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಇದೀಗ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ.