ಹುಬ್ಬಳ್ಳಿ[ನ.2]: ಬಿಜೆಪಿ ಸರ್ಕಾರ ಹೋಗಬಾರದು ಎನ್ನುವುದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರ ಮನಸ್ಸಿನಲ್ಲಿದೆ. ಕುಮಾರಸ್ವಾಮಿ ಅವರು ಒಮ್ಮೊಮ್ಮೆ ದುಡುಕುತ್ತಾರೆ. ಎಮೋಷನಲ್ ಆಗುತ್ತಾರೆ. ಹಿಂದೆ ಮುಂದೆ ವಿಚಾರ ಮಾಡದೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೀಗಾಗಿ ಜೆಡಿಎಸ್ ಶಾಸಕರಲ್ಲಿ ಗೊಂದಲವಾಗಿದೆ ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಅವರು ಹೇಳಿದ್ದಾರೆ. 

ಬಿಜೆಪಿ ಸರ್ಕಾರಕ್ಕೆ ತೊಂದರೆ ಕೊಡ್ಬಾರ್ದು ಎಂದ್ರು ಕುಮಾರಸ್ವಾಮಿ..!

ಶನಿವಾರ ನಗರದಲ್ಲಿ ಮಾತನಾಡಿದ ಅವರು, ಸಧ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಆಗಬಾರದು. ಬಿಜೆಪಿ ಸರ್ಕಾರ ಮುಂದುವರಿಯಲಿ ಎನ್ನುವುದು ಉತ್ತಮ ವಿಚಾರವಾಗಿದೆ. ಬಹುತೇಕ ಜೆಡಿಎಸ್ ಶಾಸಕರು ಬಿಜೆಪಿಗೆ ಬೆಂಬಲ ಕೊಡುವುದರ ಪರವಾಗಿ ನಿಲುವು ಹೊಂದಿದ್ದಾರೆ. ಕುಮಾರಸ್ವಾಮಿ ಅವರು ಎಲ್ಲರ ಸಭೆ ಕರೆದು ಒಟ್ಟಾಗಿ ಚರ್ಚಿಸಿ, ತೀರ್ಮಾನಿಸಬೇಕು. ಉಪ ಚುನಾವಣೆಯಲ್ಲಿ ಕೆಲವು ಕಡೆ ಬಿಜೆಪಿಗೆ ಬೆಂಬಲ ಕೊಡಬೇಕು ಅನ್ನುವ ಚಿಂತನೆಯೂ ಇದೆ. ಅದಕ್ಕೆ ದೇವೇಗೌಡರು ಒಪ್ಪಬೇಕಲ್ಲಾ? ರಾಜಕೀಯದಲ್ಲಿ ಯಾವಾಗ ಏನಾಗುತ್ತೊ ಗೊತ್ತಾಗಲ್ಲಾ. ಸಿದ್ದರಾಮಯ್ಯ ಮೇಲೆ ಕುಮಾರಸ್ವಾಮಿಯವರಿಗೆ ಪೂರ್ಣ ವಿಶ್ವಾಸವಿತ್ತು. ಆದರೂ ಸಮ್ಮಿಶ್ರ ಸರ್ಕಾರ ಉಳಿಯಲಿಲ್ಲ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಟಿಪ್ಪು ಇತಿಹಾಸ ಪಠ್ಯದಿಂದ ತೆಗೆಯುವ ವಿಚಾರಕ್ಕೆ ಸಂಬಂಧ ಮಾತನಾಡಿದ ಅವರು, ತಜ್ಞರ ಸಮಿತಿ ವರದಿ ಆದರಿಸಿ ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ತರಾತುರಿ ನಿರ್ಧಾರ ಮಾಡುವುದು ತಪ್ಪು. ಯಾವುದೇ ಸರ್ಕಾರವಾದರೂ ಶಾಶ್ವತ ಇರಲ್ಲ. ಅನರ್ಹ ಶಾಸಕರು ಬಿಜೆಪಿ ಮೇಲೆ ನಂಬಿಕೆ ಇಟ್ಟು ರಾಜೀನಾಮೆ ಕೊಟ್ಟಿದ್ದಾರೆ. ಅನರ್ಹರ ವಿಚಾರದಲ್ಲಿ ಯಡಿಯೂರಪ್ಪನವರ ಹೇಳಿಕೆ ಸರಿಯಾಗಿದೆ. ಈ ವಿಚಾರದಲ್ಲಿ ಯಡಿಯೂರಪ್ಪನವರಿಗೆ ನನ್ನ ಬೆಂಬಲವಿದೆ. ಈಗಾಗಲೇ ಆಪರೇಷನ್ ಕಮಲ ಆಗಿಹೋಗಿದೆ. ಹೀಗಾಗಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಬಿಜೆಪಿ ಧರ್ಮ ಎಂದು ತಿಳಿಸಿದ್ದಾರೆ.