ಶಿವಾನಂದ ಗೊಂಬಿ

ಹುಬ್ಬಳ್ಳಿ[ನ.2]: ಉತ್ತರ ಕರ್ನಾಟಕದ ಪಾಲಿನ ಆರೋಗ್ಯ ಧಾಮ ಎನಿಸಿರುವ ಇಲ್ಲಿನ ಕಿಮ್ಸ್‌ನ ನಿರ್ದೇಶಕರ ಹುದ್ದೆಗೆ ಮತ್ತೆ ಸರ್ಕಾರ ನೋಟಿಫಿಕೇಶನ್ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರ ನೆರವಿನಿಂದ ಹೇಗಾದರೂ ಮಾಡಿ ಹುದ್ದೆ ಗಿಟ್ಟಿಸಿಕೊಳ್ಳಲು ವೈದ್ಯರ ದೊಡ್ಡ ಲಾಬಿ ಶುರುವಾಗಿದೆ. 

ಕಿಮ್ಸ್‌ಗೆ ಕಳೆದ ಒಂದೂವರೆ ವರ್ಷದಿಂದ ಕಾಯಂ ನಿರ್ದೇಶಕರೇ ಇಲ್ಲ. ಒಂದೂವರೆ ವರ್ಷದ ಹಿಂದೆ ಡಾ. ದತ್ತಾತ್ರೇಯ ಬಂಟ್ ತಮ್ಮ ಅವಧಿಯನ್ನು ಮುಗಿಸಿದ್ದರು. ಈ ವೇಳೆ ಸಮ್ಮಿಶ್ರ ಸರ್ಕಾರವಿತ್ತು. ಆಗ ಪೌರಾಡಳಿತ ಸಚಿವರಾಗಿದ್ದ ದಿ. ಸಿ.ಎಸ್. ಶಿವಳ್ಳಿ ಕೃಪಾಕಟಾಕ್ಷದಿಂದ ಡಾ. ರಾಮಲಿಂಗಪ್ಪ ಅಂಥರತಾನಿ ಪ್ರಭಾರಿ ನಿರ್ದೇಶಕರಾಗಿದ್ದರು. ಈಗಲೂ ಅವರೇ ಪ್ರಭಾರಿ. ಕಾಯಂ ನಿರ್ದೇಶಕರಾಗಿಲ್ಲದ ಕಾರಣ ಕೆಲವೊಂದಿಷ್ಟು ನಿರ್ಣಯಗಳನ್ನು ಕೈಗೊಳ್ಳಲು ರಾಮಲಿಂಗಪ್ಪ ಅವರಿಗೆ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಇದೀಗ ಕಿಮ್ಸ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶುರುವಾಗಿದೆ. ಪೂರ್ಣ ಪ್ರಮಾಣದಲ್ಲಿ ಶುರುವಾಗಿಲ್ಲದಿದ್ದರೂ ಸದ್ಯ ನ್ಯೂರಾಲಾಜಿ ವಿಭಾಗದ ಒಪಿಡಿ ಮಾತ್ರ ಪ್ರಾರಂಭವಾಗಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲು ಕೆಲವೊಂದಿಷ್ಟು ನೇಮಕಾತಿಯನ್ನು ಮಾಡಿಕೊಳ್ಳಬೇಕಿದೆ. 

ಈ ಹಿನ್ನೆಲೆಯಲ್ಲಿ ಕಾಯಂ ನಿರ್ದೇಶಕರನ್ನು ನೇಮಕ ಮಾಡಬೇಕು ಎಂಬುದು ಇಲ್ಲಿನ ಜನಪ್ರತಿನಿಧಿಗಳು ಹಾಗೂ ಕಿಮ್ಸ್‌ ಸಿಬ್ಬಂದಿಯ ಒತ್ತಾಯ. ಈ ಹಿನ್ನೆಲೆಯಲ್ಲಿ ಇದೀಗ ನಿರ್ದೇಶಕರ ಹುದ್ದೆಗೆ ಸರ್ಕಾರ ನೋಟಿಫಿಕೇಶನ್‌ ಹೊರಡಿಸಿದೆ. ನ. 8 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. 11 ರಿಂದ 16 ರವರೆಗೆ ಸಂದರ್ಶನ ನಡೆಸುವ ಸಾಧ್ಯತೆ ಇದೆ. ಸಂದರ್ಶನ ಮಾಡಿದ ನಂತರವೇ ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪೈಪೋಟಿ ಹೇಗಿದೆ: 

ಸದ್ಯ ಪ್ರಭಾರಿ ನಿರ್ದೇಶಕರಾಗಿರುವ ಡಾ. ರಾಮಲಿಂಗಪ್ಪ ಅಂಥರತಾನಿ, ಫಿಜಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಕೆ.ಎಫ್. ಕಮ್ಮಾರ, ಮಾನಸಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ. ಮಹೇಶ ದೇಸಾಯಿ ಹಾಗೂ ಹಿಂದಿನ ನಿರ್ದೇಶಕ ದತ್ತಾತ್ರೇಯ ಬಂಟ್ ಮಧ್ಯೆತೀವ್ರ ಪೈಪೋಟಿ ನಡೆದಿದೆ. ಇದರಲ್ಲಿ ದತ್ತಾತ್ರೇಯ ಬಂಟ್ ಈಗಾಗಲೇ ಒಂದುಬಾರಿ ನಿರ್ದೇಶಕರಾಗಿದ್ದರು. ಅವರ ಅವಧಿಯಲ್ಲಿ ಬಡ್ತಿ ಸೇರಿದಂತೆ ಮತ್ತಿತರರ ವಿಷಯಗಳಿಗೆ ಸಂಬಂಧಪಟ್ಟಂತೆ ಇಲಾಖೆಯಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಅವರ ನೇಮಕಾತಿ ಕಷ್ಟ ಎನ್ನಲಾಗುತ್ತಿದೆ. ಮಹೇಶ ದೇಸಾಯಿ ಅವರೀಗ ಇಲ್ಲಿನ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಜತೆಗೆ ಡಿಮ್ಹಾನ್ಸ್‌ದ ಪ್ರಭಾರಿ ನಿರ್ದೇಶಕರಾಗಿ ಅನುಭವ ಹೊಂದಿದ್ದಾರೆ. ಈ ನಡುವೆ ವೈದ್ಯಕೀಯ ಶಿಕ್ಷಣ ಖಾತೆಯನ್ನೂ ಹೊಂದಿರುವ ಡಿಸಿಎಂ ಅಶ್ವತ್ಥ ನಾರಾಯಣ ಶನಿವಾರ (ನ.2) ನಗರಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಈ ವಿಷಯವೂಚರ್ಚೆಗೆ ಬರುವ ಸಾಧ್ಯತೆಯೂ ಇದೆ. ಈ ವೇಳೆ ಈ ನಾಲ್ವರು ತಮ್ಮ ಹಕ್ಕನ್ನು ಸಹ ಮಂಡಿಸುವ ಸಾಧ್ಯತೆ ಇದೆ. ಆದರೂ ಈ ನಾಲ್ವರು ಒಳಗೊಳಗೆ ಲಾಬಿ ನಡೆಸುತ್ತಿರುವುದಂತೂ ಸ್ಪಷ್ಟ. ಆದರೆ ಯಾರಿಗೆ ಒಲಿಯುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ. ಒಟ್ಟಿನಲ್ಲಿ ಕಿಮ್ಸ್ ನಿರ್ದೇಶಕರ ಹುದ್ದೆಗೆ ಭಾರಿ ಪ್ರಮಾಣದಲ್ಲಿ ಲಾಬಿ ನಡೆದಿರುವುದಂತೂ ಸತ್ಯ. ಮಂಜೂರಾದ ಬೆಳೆ ವಿಮೆ ಹಣ ನೀಡಲು ನಿರಾಕರಿಸಿದ ಬ್ಯಾಂಕ್ ಮ್ಯಾನೇಜರ್‌ ವಿರುದ್ಧ ಪ್ರತಿಭಟನೆ ನಡೆಸಿದ ನವಲಗುಂದ ತಾಲೂಕಿನ ಶಿರೂರ ರೈತರು. 

ಇಬ್ಬರದೂ ಸಮ ಸೇವೆ 

ಡಾ. ರಾಮಲಿಂಗಪ್ಪ ಅಂಥರತಾನಿ, ಫಿಜಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಕೆ.ಎಫ್. ಕಮ್ಮಾರ,ಈ ಇಬ್ಬರು ನೌಕರಿಗೆ ಸೇರಿದ್ದು ಏಕಕಾಲಕ್ಕೆ ಅಂದರೆ 1997 ರಲ್ಲಿ. ಆದರೆ ಕಮ್ಮಾರ ಫಿಜಿಯಾಲಜಿ ವಿಭಾಗದ ಮುಖ್ಯಸ್ಥರಾಗಿ 13 ವರ್ಷಗಳಾದರೆ, ರಾಮಲಿಂಗಪ್ಪ ವಿಭಾಗದ ಮುಖ್ಯಸ್ಥರಾಗಿ ಬರೀ ನಾಲ್ಕು ವರ್ಷಗಳು ಮಾತ್ರ. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಇವರಿಗೆ ಕಾಯಂ ನಿರ್ದೇಶಕರ ಹುದ್ದೆ ನೀಡದೇ ಪ್ರಭಾರಿ ಹುದ್ದೆ ನೀಡಲಾಯಿತು. ಜೇಷ್ಠತೆ ಗಮನಿಸಿದರೆ ಕಮ್ಮಾರ ನಿರ್ದೇಶಕರಾಗುವ ಸಾಧ್ಯತೆ ಜಾಸ್ತಿಯಿದೆ ಎಂಬ ಮಾತು ಕಿಮ್ಸ್ ವೈದ್ಯಕೀಯ ಮೂಲಗಳದ್ದು.