ಬೆಂಗಳೂರಲ್ಲಿ ಟೆಸ್ಲಾ ಕಾರು ಸಂಶೋಧನಾ ಘಟಕ!
ಬೆಂಗಳೂರಲ್ಲಿ ಟೆಸ್ಲಾ ಕಾರು ಸಂಶೋಧನಾ ಘಟಕ| ಭಾರತಕ್ಕೆ ಪ್ರವೇಶ ಮಾಡಿದ ವಿಶ್ವದ ಅತ್ಯಾಧುನಿಕ ಎಲೆಕ್ಟ್ರಿಕ್ ಕಾರು ಕಂಪನಿ
ನವದೆಹಲಿ(ಜ.13): ಅತ್ಯಾಧುನಿಕ, ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಮುಂಚೂಣಿ ಕಂಪನಿಯಾಗಿರುವ ಅಮೆರಿಕ ಮೂಲದ ಟೆಸ್ಲಾ, ಬೆಂಗಳೂರಿನಲ್ಲಿ ತನ್ನ ಸಂಶೋಧನಾ ಮತ್ತು ಅಭಿವೃದ್ಧಿ ಘಟಕ ಸ್ಥಾಪಿಸಿದೆ. ಜ.8ರಂದೇ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ಕಂಪನಿಯನ್ನು ನೋಂದಣಿ ಮಾಡಿಸಲಾಗಿದೆ. ಜೊತೆಗೆ ಕಂಪನಿಗೆ ಮೂರು ನಿರ್ದೇಶಕರನ್ನೂ ನೇಮಿಸಲಾಗಿದೆ.
ಟೆಸ್ಲಾ ಕಂಪನಿ ಭಾರತದಲ್ಲಿ ಕೇಂದ್ರ ಕಚೇರಿ ಕಚೇರಿ, ಉತ್ಪಾದನಾ ಘಟಕ ಮತ್ತು ಸಂಶೋಧನಾ ಘಟಕ ತೆರೆಯುವ ಉದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ ಟೆಸ್ಲಾ ಕಂಪನಿಯನ್ನು ತಮ್ಮ ರಾಜ್ಯಗಳಿಗೆ ಆಹ್ವಾನಿಸಲು ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳು ತುದಿಗಾಲಲ್ಲಿ ನಿಂತಿದ್ದು, ಈಗಾಗಲೇ ತಮ್ಮ ತಮ್ಮ ರಾಜ್ಯಗಳಲ್ಲಿ ನೀಡುವ ಜಾಗ ಸೇರಿದಂತೆ ಇತರೆ ಸೌಲಭ್ಯಗಳ ಕುರಿತು ಟೆಸ್ಲಾ ಕಂಪನಿಗೆ ಮಾಹಿತಿ ನೀಡಿವೆ.
ಈ ಪೈಕಿ ಬೆಂಗಳೂರಿನಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಘಟಕ ಸ್ಥಾಪಿಸಲು ನಿರ್ಧರಿಸಿದೆ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ. ಟೆಸ್ಲಾ ಕಂಪನಿಗೆ ಘಟಕ ಸ್ಥಾಪಿಸಲು ಕರ್ನಾಟಕ ಸರ್ಕಾರವು ಬೆಂಗಳೂರು, ತುಮಕೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಜಾಗ ನೀಡುವ ಪ್ರಸ್ತಾಪ ಸಲ್ಲಿಸಿತ್ತು ಎನ್ನಲಾಗಿದೆ.
ಜಗತ್ತಿನ ನಂ.1 ಶ್ರೀಮಂತ ಎಲಾನ್ ಮಸ್ಕ ಒಡೆತನದ ಟೆಸ್ಲಾ ಕಂಪನಿಯ ಕಾರುಗಳು, ಐಷಾರಾಮಿ ಕಾರುಗಳಿಗೆ ಹೆಸರಾದ ಮರ್ಸಿಡಿಸ್ ಬೆಂಜ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿವೆ. ಟೆಸ್ಲಾದ ಎಲೆಕ್ಟ್ರಿಕ್ ಕಾರಿನ ಪೈಕಿ ಸೆಡಾನ್ 3 ಮಾದರಿಯನ್ನು ಆರಂಭಿಕ ಹಂತದಲ್ಲಿ ಭಾರತಕ್ಕೆ ಪರಿಚಯಿಸುವ ಸಾಧ್ಯತೆ ಇದೆ. ಇವು ಒಮ್ಮೆ ಚಾಜ್‌ರ್ ಮಾಡಿದರೆ 500 ಕಿ.ಮೀ ದೂರ ಸಾಗಬಲ್ಲವು. ದರ 55-60 ಲಕ್ಷ ರು. ಇರಲಿದೆ.
ಟೆಸ್ಲಾ ಆಗಮನಕ್ಕೆ ಬಿಎಸ್‌ವೈ ಹರ್ಷ
ಭಾರತದಲ್ಲಿ ಪರಿಸರ ಸ್ನೇಹಿ ವಾಹನಗಳನ್ನು ಹೊಂದುವುದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಟೆಸ್ಲಾ ಕಂಪನಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವನ್ನು ಶೀಘ್ರವೇ ಆರಂಭಿಸಲಿದೆ. ಭಾರತ ಹಾಗೂ ಕರ್ನಾಟಕಕ್ಕೆ ಆಗಮಿಸುತ್ತಿರುವ ಎಲನ್ ಮಸ್ಕ್‌ಗೆ ಸ್ವಾಗತ. ಶುಭವಾಗಲಿ.
- ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ