Asianet Suvarna News Asianet Suvarna News

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತ, ಇಂದಿನಿಂದಲೇ ಸರ್ವೀಸ್ ನಿಲ್ಲಿಸುವುದಾಗಿ ಬಾಂಬೆ ಹೈಕೋರ್ಟ್‌ಗೆ ಸ್ಪಷ್ಟನೆ!

ರ‍್ಯಾಪಿಡೋ ಬೈಕ್ ಸರ್ವೀಸ್‌ಗೆ ಅತೀ ದೊಡ್ಡ ಶಾಕ್ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಇಂದಿನಿಂದ ಜನವರಿ 20ರ ವರೆಗೆ ರ‍್ಯಾಪಿಡೋ ಬೈಕ್ ಸರ್ವೀಸ್ ಲಭ್ಯವಿಲ್ಲ. ಈ ಕುರಿತು ರ‍್ಯಾಪಿಡೋ ಬಾಂಬೈ ಹೈಕೋರ್ಟ್‌ಗೆ ತಿಳಿಸಿದೆ. ದಿಢೀರ್ ಬೈಕ್ ಟ್ಯಾಕ್ಸಿ ರದ್ದುಪಡಿಸಿದ್ದು ಯಾಕೆ?

Rapido bike taxi suspended in Maharastra till jan 20th two wheeler service aggregator tells to Bombay high court ckm
Author
First Published Jan 13, 2023, 4:58 PM IST

ಮುಂಬೈ(ಜ.13):  ರ‍್ಯಾಪಿಡೋ ಬೈಕ್ ಟ್ಯಾಕ್ಸಿ ದೇಶದ ಬಹುತೇಕ ನಗರಗಳಲ್ಲಿ ಬೇರು ಬಿಟ್ಟಿದೆ. ಆದರೆ ಹಲವು ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ಇಲ್ಲ. ಇದು ರ‍್ಯಾಪಿಡೋ ಬೈಕ್ ಸೇವೆಗೆ ಮುಳ್ಳಾಗಿ ಪರಿಣಮಿಸಿದೆ. ಮಹಾರಾಷ್ಟ್ರದಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗೆ ಸರ್ಕಾರ ಅನುಮತಿ ನಿರಾಕರಿಸಿದ ಬೆನ್ನಲ್ಲೇ ಹೈಕೋರ್ಟ್ ಮೆಟ್ಟಿಲೇರಿದ್ದ ರ‍್ಯಾಪಿಡೋಗೆ ತೀವ್ರ ಹಿನ್ನಡೆಯಾಗಿದೆ. ಅನುಮತಿ ಇಲ್ಲದೆ, ನಿಯಮಬಾಹಿರವಾಗಿ ಆರಂಭಿಸಿರುವ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನು ನೀವೇ ನಿಲ್ಲಿಸುತ್ತೀರಾ? ಇಲ್ಲಾ ನಾವು ಖಾಯಂ ಆಗಿ ನಿಲ್ಲಿಸಬೇಕಾ ಎಂದು ಹೈಕೋರ್ಟ್ ಗರಂ ಆಗಿದೆ. ಹೈಕೋರ್ಟ್ ಪ್ರಶ್ನೆಗೆ ಬೆಚ್ಚಿ ಬಿದ್ದ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಈ ತಕ್ಷಣದಿಂದಲೇ ಸೇವೆ ಸ್ಥಗಿತಗೊಳಿಸುವುಗಾಗಿ ಹೈಕೋರ್ಟ್‌ಗೆ ತಿಳಿಸಿದೆ.

ಇಂದು ಮಧ್ಯಾಹ್ನ 1 ಗಂಟೆಯಿಂದ ರ‍್ಯಾಪಿಡೋ ಬೈಕ್ ಸೇವೆ ಮಹಾರಾಷ್ಟ್ರದಲ್ಲಿ ಲಭ್ಯವಿಲ್ಲ. ಜನವರಿ 20ರ ವರೆಗೆ ಈ ಸೇವೆ ಲಭ್ಯವಿರುವುದಿಲ್ಲ. ಬಳಕೆದಾರರು ಅನಾನೂಕೂಲಕ್ಕೆ ಕ್ಷಮೆ ಇರಲಿ. ಆ್ಯಪ್ ಇಂದಿನಿಂದ ಜನವರಿ 20ರ ವರೆಗೆ ಕಾರ್ಯನಿರ್ವಹಿಸುವುದಿಲ್ಲ ಎಂದು ರ‍್ಯಾಪಿಡೋ ಬೈಕ್ ಸರ್ವೀಸ್ ಹೇಳಿದೆ. 

Bengaluru: ಬೈಕ್‌ ಟ್ಯಾಕ್ಸಿ ಸಂಚಾರಕ್ಕೆ ಸಾರಿಗೆ ಪ್ರಾಧಿಕಾರದಿಂದ ಅನುಮತಿ ನಿಚ್ಚಳ

ಮಹಾರಾಷ್ಟ್ರದಲ್ಲಿ ರ‍್ಯಾಪಿಡೋ ಬೈಕ್ ಸರ್ವೀಸ್ ಸೇವೆ ಕುರಿತ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಜಸ್ಟೀಸ್ ಜಿಎಸ್ ಪಟೇಲ್ ಹಾಗೂ ಜಸ್ಟೀಸ್ ದಿಗೆ ನೇತೃತ್ವದ ಪೀಠ್ ವಾರ್ನಿಂಗ್ ನೀಡಿದೆ. ಯಾವುದೇ ಅನುಮತಿ, ಲೈಸೆನ್ಸ್ ಇಲ್ಲದೆ ಬೈಕ್ ಸರ್ವೀಸ್ ಟ್ಯಾಕ್ಸಿ ಆರಂಭಿಸಬಹುದು ಎಂದುಕೊಂಡಿದ್ದೀರಾ? ಆರ್ಟಿಕಲ್ 226ರಲ್ಲಿ ಹೇಳಿರುವ ನಿಯಮಾವಳಿಯನ್ನು ಗೌರವಿಸಿ, ಇದರಲ್ಲಿ ಏನಿದೆ ಎಂದು ನಾವು ಹೇಳಬೇಕಾ? ಇನ್ನು ಒಂದು ತಪ್ಪು ಮಾಡಿದರೂ ನಿಮ್ಮ ಸೇವೆಯನ್ನು ಖಾಯಂ ಆಗಿ ನಿರ್ಬಂಧಿಸುತ್ತೇವೆ. ಮೊದಲು ನೀವು ಅನುಮತಿ ಪಡೆಯಿರಿ. ಇಲ್ಲದಿದ್ದರೆ ನಾವು ಖಾಯಂ ಆಗಿ ನಿರ್ಬಂಧಿಸುತ್ತೇವೆ ಎಂದು ಜಸ್ಟೀಸ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ರ‍್ಯಾಪಿಡೋ ಬೈಕ್ ಟಾಕ್ಸಿ ಸೇವೆಗೆ ಜಾಡಿಸಿದ ಹೈಕೋರ್ಟ್, ಮಹಾರಾಷ್ಟ್ರ ಸರ್ಕಾರದ ವಿರುದ್ಧವೂ ಗರಂ ಆಗಿದೆ. ಸರ್ಕಾರ ಬೈಕ್ ಟ್ಯಾಕ್ಸಿ ಕುರಿತು ಸರಿಯಾದ ನಿಯಮ ರೂಪಿಸಲು ಹಿಂದೇಟು ಹಾಕುತ್ತಿರುವ ಕುರಿತು ಚಾಟಿ ಬೀಸಿದೆ. ಮಹಾರಾಷ್ಟ್ರದಲ್ಲಿ ಬೈಕ್ ಟ್ಯಾಕ್ಸಿಗೆ ಯಾವುದೇ ನಿಯಮವಿಲ್ಲ. ಹೀಗಾಗಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗೆ ಸರ್ಕಾರ ಅನುಮತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಹೈಕೋರ್ಟ್ ಮೆಟ್ಟಿಲೇರಿತ್ತು 

ಬೈಕ್ ಟ್ಯಾಕ್ಸಿ ಕುರಿತು ಅನಿಶ್ಚಿತತೆ ಮುಂದುವರಿಸುವುದು ಸೂಕ್ತವಲ್ಲ. ಸಾಧಕ ಬಾಧಕಗಳನ್ನು ಚರ್ಚಿಸಿ ಬೈಕ್ ಟ್ಯಾಕ್ಸಿ ಕುರಿತು ನಿಯಮ ರೂಪಿಸಿ. ಬೇಕು ಅಥವಾ ಬೇಡ ಅನ್ನೋದನ್ನಾದರು ನಿರ್ಧರಿಸಿ. ಈ ಕುರಿತು ಅನಿಶ್ಚಿತತೆ ಮುಂದುವರಿಸುವುದು ಸೂಕ್ತವಲ್ಲ ಎಂದು ಹೈಕೋರ್ಟ್, ಸರ್ಕಾರಕ್ಕೆ ಚಾಟಿ ಬೀಸಿದೆ. 

ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ವಿರುದ್ದ ಹಲವು ದೂರುಗಳು ದಾಖಲಾಗಿತ್ತು. ಈ ಕುರಿತು ಡಿಸೆಂಬರ್ 29 ರಂದು ಸಭೆ ಸೇರಿದ್ದ ಮಹಾರಾಷ್ಟ್ರ ಸರ್ಕಾರ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಲು ನಿರಾಕರಿಸಿತ್ತು. ಸದ್ಯ ಮಹಾರಾಷ್ಟ್ರದಲ್ಲಿ ಬೈಕ್ ಟ್ಯಾಕ್ಸಿಗೆ ಸರಿಯಾದ ನಿಯಮವಿಲ್ಲ. ಈ ಕುರಿತು ಯಾವುದೇ ಉಲ್ಲೇಖವಿಲ್ಲ. ಸರಿಯಾದ ನೀತಿ ಇಲ್ಲದ ಕಾರಣ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿತ್ತು. 

ಓಲಾ ಉಬರ್ ಗೆ ಬಿಗ್ ರಿಲೀಫ್, ಸಾರಿಗೆ ಇಲಾಖೆ ನೀಡಿದ್ದ ಆದೇಶಕ್ಕೆ ಕೋರ್ಟ್ ಮಧ್ಯಂತರ ತಡೆ

ಜನವರಿ 2 ರಂದು ಹೈಕೋರ್ಟ್, ಬೈಕ್ ಟ್ಯಾಕ್ಸಿ ಸೇವೆಯಿಂದ ಆಗುವ ಲಾಭ ಹಾಗೂ ನಷ್ಟಗಳು, ಸಾಧಕ ಬಾಧಕ ಕುರಿತು ಚರ್ಚಿಸಲು ಸರ್ಕಾರಕ್ಕೆ ಸೂಚಿಸಿತ್ತು. ಇದೇ ವೇಳೆ ಉತ್ತಮವಾಗಿದ್ದರೆ, ನೀತಿ ರೂಪಿಸಲು ಯಾವುದೇ ತಡೆ ಇಲ್ಲ ಎಂದು ಸಲಹೆ ನೀಡಿತ್ತು. ಈ ಕುರಿತು ಇದುವರೆಗೂ ಮಹಾರಾಷ್ಟ್ರ ಸರ್ಕಾರ ನೀತಿ ರೂಪಿಸುಲು ವಿಫಲವಾಗಿದೆ. ಹೀಗಾಗಿ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.

ಸರ್ಕಾರ ನೀತಿ ರೂಪಿಸುವವರೆಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ರಸ್ತೆಗೆ ಇಳಿಯುವಂತಿಲ್ಲ. ಇದೀಗ ಚೆಂಡು ಸರ್ಕಾರದ ಅಂಗಳದಲ್ಲಿದೆ. ಜನವರಿ 20ರೊಳಗೆ ಬೈಕ್ ಟ್ಯಾಕ್ಸಿ ಕುರಿತ ನೀತಿ ರೂಪಿಸುವುದಾಗಿ ಸರ್ಕಾರ ಹೇಳಿದೆ. ಹೀಗಾಗಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಜನವರಿ 20ರ ವರೆಗೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಂಡಿದೆ.

Follow Us:
Download App:
  • android
  • ios