Asianet Suvarna News Asianet Suvarna News

EV solutions ದೇಶದಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆಗೆ ಜಿಯೋ ಬಿಪಿ, ಟಿವಿಎಸ್ ಮೋಟರ್ ಒಪ್ಪಂದ!

  • ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಾದ ಬೇಡಿಕೆ 
  • ಮೂಲಸೌಕರ್ಯ ಹೆಚ್ಚಿಸಲು ಜಿಯೋ ಬಿಪಿ, ಟಿವಿಎಸ್ ಒಪ್ಪಂದ
  • ಜಿಯೋ ಬಿಬಿ, ಟಿವಿಎಸ್‌ನಿಂದ ಚಾರ್ಜಿಂಗ್ ಸ್ಟೇಷನ್
Jio bp TVS Motor Company to collaborate on creation of robust public EV charging infrastructure ckm
Author
Bengaluru, First Published Apr 5, 2022, 6:29 PM IST

ಮುಂಬೈ(ಏ.05): ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಆದರೆ ಚಾರ್ಜಿಂಗ್ ಸ್ಟೇಷನ್ ಕೊರತೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿದೆ. ಇದೀಗ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿ ಜಿಯೋ ಬಿಪಿ ಮತ್ತು ಟಿವಿಎಸ್ ಮೋಟರ್‌ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ, ಟಿವಿಎಸ್ ಎಲೆಕ್ಟ್ರಿಕ್ ವಾಹನಗಳ ಗ್ರಾಹಕರು ಜಿಯೋ ಬಿಪಿ ಚಾರ್ಜಿಂಗ್‌ ನೆಟ್‌ವರ್ಕ್ ಅನ್ನು ಬಳಸಿಕೊಳ್ಳಬಹುದಾಗಿದೆ. ಜಿಯೋ ಬಿಪಿ ಚಾರ್ಜಿಂಗ್‌ ನೆಟ್‌ವರ್ಕ್‌ ಟಿವಿಎಸ್‌ ಸೇರಿದಂತೆ ಇತರ ಎಲ್ಲ ಕಂಪನಿಯ ವಾಹನಗಳಿಗೂ ಚಾರ್ಜಿಂಗ್ ವ್ಯವಸ್ಥೆಯನ್ನು ಕಲ್ಪಿಸುತ್ತದೆ.

ಪಾಲುದಾರಿಕೆ ಅಡಿಯಲ್ಲಿ ಎಸಿ ಚಾರ್ಜಿಂಗ್ ನೆಟ್ವರ್ಕ್‌ ಮತ್ತು ಡಿಸಿ ಫಾಸ್ಟ್ ಚಾರ್ಜಿಂಗ್‌ ನೆಟ್‌ವರ್ಕ್‌ ಬಳಸಬಹುದಾಗಿದೆ. ಈ ಒಪ್ಪಂದದ ಮೂಲಕ, ಜಿಯೋ ಬಿಪಿ ಮತ್ತು ಟಿವಿಎಸ್ ಕಂಪನಿಗಳು ತಮ್ಮ ಗ್ರಾಹಕರಿಗೆ ವಿಶಾಲವಾದ ಮತ್ತು ವಿಶ್ವಾಸಾರ್ಹವಾದ ಚಾರ್ಜಿಂಗ್‌ ಮೂಲಸೌಕರ್ಯವನ್ನು ಒದಗಿಸುವ ತಮ್ಮ ಬದ್ಧತೆಯನ್ನು ಸಾಬೀತುಪಡಿಸುತ್ತವೆ. ಟಿವಿಎಸ್ ಮತ್ತು ಜಿಯೋ ಬಿಪಿ ಗ್ರಾಹಕರಿಗೆ ಈ ಅನುಕೂಲವನ್ನು ಕಲ್ಪಿಸುವುದರ ಜೊತೆಗೆ, ವಿದ್ಯುದೀಕರಣದಲ್ಲಿ ತಮ್ಮ ಅನುಭವದ ಅನುಕೂಲವನ್ನು ಗ್ರಾಹಕರಿಗೆ ಒದಗಿಸುತ್ತವೆ ಮತ್ತು ಅತ್ಯುತ್ತಮ ಗ್ರಾಹಕ ಅನುಭವವನ್ನು ಒದಗಿಸುವುದಕ್ಕಾಗಿ ವಿಭಿನ್ನ ಗ್ರಾಹಕ ಅನುಭವವನ್ನು ಭಾರತೀಯ ಮಾರುಕಟ್ಟೆಯಲ್ಲಿ ರೂಪಿಸುತ್ತವೆ.

ಅತೀ ದೊಡ್ಡ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್ ಆರಂಭ, ಏಕಕಾಲಕ್ಕೆ 1,00 ವಾಹನ ಚಾರ್ಜ್!

ಜಿಯೋ ಬಿಪಿ ಪಲ್ಸ್‌ ಅಡಿಯಲ್ಲಿ ಜಿಯೋ ಬಿಪಿ ತನ್ನ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್‌ ಮತ್ತು ಸ್ವ್ಯಾಪಿಂಗ್‌ ಸ್ಟೇಷನ್‌ಗಳನ್ನು ನಡೆಸುತ್ತಿದೆ. ಜಿಯೋ ಬಿಪಿ ಪಲ್ಸ್‌ ಆಪ್ ಮೂಲಕ, ಸಮೀಪದಲ್ಲಿರುವ ಸ್ಟೇಷನ್‌ಗಳನ್ನು ಗ್ರಾಹಕರು ಸುಲಭವಾಗಿ ಹುಡುಕಬಹುದು ಮತ್ತು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್‌ ಮಾಡಬಹುದು. ಅಷ್ಟೇ ಅಲ್ಲ, ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ನೆಟ್‌ವರ್ಕ್‌ ಆಗುವ ಧ್ಯೇಯದೊಂದಿಗೆ, ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿನ ಎಲ್ಲ ಕಂಪನಿಗಳಿಗೂ ಪ್ರಯೋಜನವನ್ನು ಜಿಯೋ ಬಿಪಿ ಚಾರ್ಜಿಂಗ್ ವ್ಯವಸ್ಥೆಯು ಒದಗಿಸಲಿದೆ.

ಹೊಸ ಎಲೆಕ್ಟ್ರಿಕ್ ಮೊಬಿಲಿಟಿ ಉತ್ಪನ್ನಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಟಿವಿಎಸ್ ಮೋಟರ್ ಕಂಪನಿ ಮಹತ್ವದ ಪ್ರಯತ್ನಗಳನ್ನು ಮಾಡಿದೆ. ತನ್ನ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್‌ ಐಕ್ಯೂಬ್ ಅನ್ನು ಬಿಡುಗಡೆ ಮಾಡಿದಾಗಿನಿಂದ 12,000 ಕ್ಕೂ ಹೆಚ್ಚು ವಾಹನವನ್ನು ಮಾರಾಟ ಮಾಡಿದೆ. ಐಕ್ಯೂಬ್‌ ಸ್ಮಾರ್ಟ್‌ ಆದ ವಾಹನವಾಗಿದ್ದು, ಗ್ರಾಹಕರ ದೈನಂದಿನ ಓಡಾಟದ ಅಗತ್ಯವನ್ನು ಪೂರೈಸುತ್ತದೆ. ಇವಿ ಉದ್ಯಮದಲ್ಲಿ 1 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಗುರಿಯನ್ನು ಕಂಪನಿ ಹೊಂದಿದೆ. 2 ರಿಂದ 25 ಕಿ.ವ್ಯಾ ಶ್ರೇಣಿಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಕಂಪನಿ ಬಿಡುಗಡೆ ಮಾಡಲಿದೆ. ಹಲವು ವಾಹನಗಳು ಮುಂದಿನ 24 ತಿಂಗಳುಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ.

ಇನ್ನುಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಮನೆಯಲ್ಲಿಯೇ ಚಾರ್ಜ್ ಮಾಡಿ!

ಇದರಿಂದ ಇನ್ನಷ್ಟು ಜನರು ಎಲೆಕ್ಟ್ರಿಕ್‌ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಬಳಸುವುದಕ್ಕೆ ಪ್ರೇರೇಪಣೆಯಾಗುತ್ತದೆ. ಚಾರ್ಜಿಂಗ್ ಸ್ಟೇಷನ್‌ಗಳ ಸಂಖ್ಯೆ ಹೆಚ್ಚಳವಾಗುವುದರಿಂದ ಎರಡೂ ಕಂಪನಿಗಳು ತಮ್ಮ ಕಾರ್ಬನ್‌ ಹೆಜ್ಜೆಗುರುತನ್ನು ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ.ದೇಶದ ನಗರಗಳು, ಪಟ್ಟಣಗಳು, ಹೈವೇ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಜಿಯೋಬಿಪಿ, ಟಿವಿಎಸ್ ಮೋಟಾರ್ ಚಾರ್ಜಿಂಗ್ ಸ್ಟೇಶನ್ ತಲೆ ಎತ್ತಲಿದೆ. ಫಾಸ್ಟ್ ಚಾರ್ಜಿಂಗ್ ಸ್ಟೇಶನ್ ಮೂಲಕ ಗ್ರಾಹಕರಿಗೆ ಅತೀ ಕಡಿಮೆ ಸಮಯದಲ್ಲಿ ಚಾರ್ಜಿಂಗ್ ಮಾಡಿಕೊಳ್ಳುವ ಸೌಲಭ್ಯ ಒದಗಿಸಲಿದೆ.

Follow Us:
Download App:
  • android
  • ios