ಎಲೆಕ್ಟ್ರಿಕ್ ಕಾರಿಗೆ 1.5 ಲಕ್ಷ ಸಬ್ಸಿಡಿ: ನೂತನ ನೀತಿ ಬಿಡುಗಡೆ!
* ಮುಂದಿನ ನಾಲ್ಕು ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗೆ ಇಳಿಸುವ ಗುರಿ
* ಗುಜರಾತ್ನಲ್ಲಿ ಎಲೆಕ್ಟ್ರಿಕ್ ಕಾರಿಗೆ 1.5 ಲಕ್ಷ ಸಬ್ಸಿಡಿ
* ನೂತನ ಎಲೆಕ್ಟ್ರಿಕ್ ವಾಹನ ನೀತಿ ಬಿಡುಗಡೆ
ನವದೆಹಲಿ(ಜೂ.23): ಮುಂದಿನ ನಾಲ್ಕು ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗೆ ಇಳಿಸುವ ಗುರಿಯೊಂದಿಗೆ ಗುಜರಾತ್ ಸರ್ಕಾರ ನೂತನ ಎಲೆಕ್ಟ್ರಿಕ್ ವಾಹನ ನೀತಿಯೊಂದನ್ನು ಮಂಗಳವಾರ ಬಿಡುಗಡೆ ಮಾಡಿದೆ. ಪ್ರತಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಗುಜರಾತ್ ಸರ್ಕಾರ 1.5 ಲಕ್ಷ ರು. ಸಬ್ಸಿಡಿಯನ್ನು ನೀಡಲಿದೆ. ಅಲ್ಲದೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿಗೆ 20 ಸಾವಿರ ರು.ವರೆಗೂ ಸಬ್ಸಿಡಿ ಲಭ್ಯವಾಗಲಿದೆ. ಮೂರು ಚಕ್ರದ ವಾಹನಗಳಿಗೆ 50 ಸಾವಿರ ರು. ಸಬ್ಸಿಡಿ ದೊರೆಯಲಿದೆ.
ಈ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲಿ 250 ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಶನ್ಗಳನ್ನು ನಿರ್ಮಿಸಲಾಗುತ್ತದೆ. ಗುಜರಾತ್ ಆರ್ಟಿಒನಲ್ಲಿ ನೋಂದಣಿ ಆಗುವ ಎಲೆಕ್ಟ್ರಿಕ್ ವಾಹನಗಳಿಗೆ ನೋಂದಣಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳಿಗೆ ಪ್ರತಿ ಕೊಲೋವ್ಯಾಟ್ಗೆ ಗುಜರಾತ್ ಸರ್ಕಾರ ದುಪ್ಪಟ್ಟು ಸಬ್ಸಿಡಿ ನೀಡಲಿದೆ.
ಮುಂದಿನ 4 ವರ್ಷಗಳಲ್ಲಿ ಗುಜರಾತಿನಲ್ಲಿ 1.10 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳು, 70 ಸಾವಿರ ಎಲೆಕ್ಟ್ರಿಕ್ ಆಟೋರಿಕ್ಷಾಗಳು ಮತ್ತು 20 ಸಾವಿರ ಎಲೆಕ್ಟ್ರಿಕ್ ಕಾರುಗಳು ಸಂಚರಿಸಲಿವೆ ಎಂದು ಅಂದಾಜಿಸಲಾಗಿದೆ.