ಗರಿಷ್ಠ 70 ಕಿ.ಮೀ. ವೇಗದ ಮಿತಿ ಮೀರಿದ್ರೆ ಬೀಳುತ್ತೆ ಫೈನ್!
ರಾಷ್ಟ್ರ ರಾಜಧಾನಿಯ ದಿಲ್ಲಿ ನಗರ ವ್ಯಾಪ್ತಿಯಲ್ಲಿ ವಾಹನಗಳ ವೇಗ ಚಾಲನೆಗೆ ಕಡಿವಾಣ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ದಿಲ್ಲಿಯಲ್ಲಿ ನೀವು ಗರಿಷ್ಠ 70 ಕಿ.ಮೀ.ವೇಗವನ್ನು ಮೀರುವಂತಿಲ್ಲ. ಒಂದು ವೇಳೆ, ಈ ನಿಯಮ ಮೀರಿ ಗಾಡಿ ಓಡಿಸಿದರೆ ಹೆಚ್ಚಿನ ಮೊತ್ತದ ದಂಡವನ್ನು ತೆರಬೇಕಾಗುತ್ತದೆ.
ಅತಿ ವೇಗದ ವಾಹನ ಚಲಾವಣೆಯಿಂದ ಅಪಘಾತವೇ ಹೆಚ್ಚು ಎಂಬುದು ಗೊತ್ತಿದ್ದರೂ ಜನರು ವಾಹನಗಳನ್ನು ವೇಗ ಚಲಾಯಿಸಿ, ಅಪಘಾತಕ್ಕೆ ಕಾರಣವಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ವೇಗದ ಮಿತಿಯನ್ನು ಹೇರಿರುತ್ತವೆ. ಆದರೂ ಜನರು ವೇಗವಾಗಿ ವಾಹನಗಳನ್ನು ಓಡಿಸುವುದು ನಿಲ್ಲಿಸುವುದಿಲ್ಲ. ಈ ಸಮಸ್ಯೆಗೆ ರಾಷ್ಟ್ರ ರಾಜಧಾನಿ ದಿಲ್ಲಿ ಕೂಡ ಹೊರತಾಗಿಲ್ಲ.
ರಸ್ತೆ ಸುರಕ್ಷತೆಗಾಗಿ ದಿಲ್ಲಿಯಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲಾಗಿದೆ. ರಾಜಧಾನಿಯ ನವದೆಹಲಿಯ ವ್ಯಾಪ್ತಿಯ ವಾಹನಗಳ ವೇಗ ಪ್ರತಿ ಗಂಟೆಗೆ 70 ಕಿ.ಮೀ ಮೀರುವ ಹಾಗಿಲ್ಲ. ಈ ನಿಮಯ ಜಾರಿಗೆ ಸಂಬಂಧಿಸಿದ ಅಧಿಸೂಚನೆಯನ್ನು ದಿಲ್ಲಿ ಟ್ರಾಫಿಕ್ ಪೊಲೀಸರು ಟ್ವಿಟರ್‌ನ ತಮ್ಮ ಖಾತೆಯಲ್ಲಿ ಷೇರ್ ಮಾಡಿದ್ದಾರೆ.
ರೆನೋ ಕ್ವಿಡ್, ಡಸ್ಟರ್, ಕಿಗರ್, ಟ್ರೈಬರ್ ಕಾರು ಖರೀದಿ ಮೇಲೆ ಭರ್ಜರಿ ಜೂನ್ ಆಫರ್ಸ್!
ದಿಲ್ಲಿಯ ಡೆಪ್ಯುಟಿ ಪೊಲೀಸ್ ಕಮಿಷನರ್ ಅವರು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ದಿಲ್ಲಿ ವ್ಯಾಪ್ತಿಯಲ್ಲಿ ಖಾಸಗಿ ನಾಲ್ಕು ಚಕ್ರ ವಾಹನಗಳು ಅಂದರೆ ಕಾರ್‌ಗಳು, ಜೀಪುಗಳು ಮತ್ತು ಕ್ಯಾಬ್‌ಗಳ ಪ್ರತಿ ಗಂಟೆಗೆ 70 ಕಿ.ಮೀ. ವೇಗದ ಮಿತಿಯನ್ನು ಮೀರಿದರೆ ದಂಡ ತೆರಬೇಕಾಗುತ್ತದೆ. ಈ ನಿಯಮವು ದಿಲ್ಲಿ ನಗರ ವ್ಯಾಪ್ತಿಯಲ್ಲಿ ಅನ್ವಯವಾಗುತ್ತದೆ. ಜೊತೆಗೆ, 70 ಕಿ.ಮೀ ವೇಗದಲ್ಲಿ ಚಲಿಸಲು ಅನುಕೂಲವಿರುವ ರಸ್ತೆಗಳ ಪಟ್ಟಿಯನ್ನು ಪೊಲೀಸರು ಮಾಡಿದ್ದಾರೆ.
ಆ ಪಟ್ಟಿಯಲ್ಲಿ ಎನ್ಎಚ್ 48 ಇದ್ದು, ಗುರುಗ್ರಾಮ್ ಮತ್ತು ದಿಲ್ಲಿಯನ್ನು ಸಂಪರ್ಕಿಸುತ್ತದೆ. ದಿಲ್ಲಿ ಮತ್ತು ನೋಯ್ಡಾ ಸಂಪರ್ಕಿಸುವ ಡಿಎನ್‌ಡಿ ಫ್ಲೈಓವರ್, ಸಿಂಘು ಬಾರ್ಡ್‌ರನಲ್ಲಿ ಹರಿಯಾಣ ಮತ್ತು ದಿಲ್ಲಿಗೆ ಸಂಪರ್ಕ ಕಲ್ಪಿಸುವ ಎನ್‌ಎಚ್ 44, ನೋಯ್ಡಾ ಟೋಲ್ ರೋಡ್, ಮಿಲೆನಿಯಮ್ ಪಾರ್ಕ್‌ನಿಂದ ಘಾಜಿಯಾಬಾದ್ ಗಡಿಗೆ ಸಂಪರ್ಕ ಕಲ್ಪಿಸುವ ಎನ್ ಎಚ್ 9 ಹೆದ್ದಾರಿ, ಐಜಿಐ ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ಮಹಿಪಾಲ್ಪುರ್ ರಸ್ತೆ, ಟಿಕ್ರಿ ಬಾರ್ಡರ್, ರಿಂಗ್ ರೋಡ್ ಬೈಪಾಸ್‌ಗಳಿವೆ.
ನಾಲ್ಕು ಚಕ್ರದ ವಾಹನಗಳಿಗೆ ಗರಿಷ್ಠ ಪ್ರತಿ ಗಂಟೆಗೆ 70 ಕಿ.ಮೀ. ವೇಗದ ಮಿತಿ ಇರುವಂತೆ ದ್ವಿಚಕ್ರವಾಹನ ಸವಾರರಿಗೂ ದಿಲ್ಲಿಯಲ್ಲಿ ಗರಿಷ್ಠ ಪ್ರತಿ ಗಂಟೆಗೆ 60 ಕಿ.ಮೀ. ವೇಗದ ಮಿತಿ ಹೇರಲಾಗಿದೆ. ಹಾಗೆಯೇ, ಕಮರ್ಷಿಯಲ್ ವಾಹನಗಳು ದಿಲ್ಲಿ ವ್ಯಾಪ್ತಿಯಲ್ಲಿ 40 ಕಿ.ಮೀ. ವೇಗದ ಮಿತಿಯನ್ನು ದಾಟುವಂತಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಇದು ಜಗತ್ತಿನ ಅತ್ಯಂತ ದುಬಾರಿ ಪಾರ್ಕಿಂಗ್ ಲಾಟ್. ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ..!
ದಿಲ್ಲಿಯ ಎಲ್ಲ ರೆಸಿಡೆನ್ಷಿಯಲ್ ಪ್ರದೇಶಗಳಲ್ಲಿನ ಕಿರು ರಸ್ತೆಗಳು, ಮಾಲ್‌ಗಳ ರೀತಿಯ ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳು ಮತ್ತು ಸರ್ವಿಸ್ ಲೇನ್‌ಗಳಲ್ಲಿ ಎಲ್ಲ ವಾಹನಗಳಿಗೆ 30 ಕಿ.ಮೀ. ವೇಗದ ಮಿತಿಯನ್ನು ಹಾಕಲಾಗಿದೆ. ಈ ಮಿತಿಯನ್ನು ಯಾರು ದಾಟುವಂತಿಲ್ಲ.
ದಿಲ್ಲಿಯಲ್ಲಿ ವೇಗದ ಮಿತಿಯನ್ನು ಮೀರುವವರ ಮೇಲೆ ಸರ್ಕಾರವು ಗರಿಷ್ಠ ಮೊತ್ತದ ದಂಡವನ್ನು ವಿಧಿಸಲಿದ್ದು, ಸಾರ್ವಜನಿಕ ಸಾರಿಗೆ ಮತ್ತು ಗೂಡ್ಸ್ ಸಾರಿಗೆ ವಾಹನಗಳು ಅಂದರೆ ತ್ರಿ ಚಕ್ರವಾಹನಗಳು, ಬಸ್ಸುಗಳು, ಟ್ರಕ್‌ಗಳ ವೇಗದ ಮಿತಿಯನ್ನು ಗಂಟೆಗೆ 40 ಕಿ.ಮೀ.ಗೆ ಇಳಿಸಲಾಗಿದೆ.
ಈ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರಿಗೆ ಈಗಾಗಲೇ ದಂಡವನ್ನು ಹೇರಲಾಗುತ್ತಿತ್ತು. ಅದನ್ನೀಗ ಹೆಚ್ಚು ಮಾಡಲಾಗುತ್ತಿದೆ. ಮಿತಿ ಮೀರಿದ ವೇಗದಲ್ಲಿ ವಾಹನಗಳನ್ನು ಚಲಾಯಿಸಿದರೆ, ವಾಹನಗಳನ್ನಾಧರಿಸಿ ದಂಡದ ಮೊತ್ತ 2000 ರೂಪಾಯಿ ಮತ್ತು 4000 ರೂಪಾಯಿ ಮಧ್ಯ ಇರಲಿದೆ. ಸಾರ್ವಜನಿಕ ರಸ್ತೆಗಳಲ್ಲಿ ರೇಸಿಂಗ್ ಅಥವಾ ವೇಗದಲ್ಲಿ ವಾಹನಗಳನ್ನು ಓಡಿಸಿದರೆ 5000 ರೂಪಾಯಿ ದಂಡವನ್ನು ಕಟ್ಟಬೇಕಾಗುತ್ತದೆ. ಹಾಗಾಗಿ, ದಿಲ್ಲಿಯ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ವೇಗದ ಮಿತಿಯನ್ನು ಮೀರದಿದ್ದರೆ ಒಳ್ಳೆಯದು.
ಇರಾಕ್‌ನಲ್ಲಿ ಶೋರೂಮ್ ತೆರೆದ ಟಿವಿಎಸ್ ಮೋಟಾರ್
ದಿಲ್ಲಿ ಮತ್ತು ಬೆಂಗಳೂರನಂಥ ಮಹಾನಗರಗಳಲ್ಲಿ ಮಿತಿ ಮೀರಿದ ವಾಹನಗಳ ವೇಗದಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು, ಪ್ರಯಾಣಿಕರ ದೃಷ್ಟಿಯಿಂದಲೂ ಸುರಕ್ಷಿತವೇಗದಲ್ಲಿ ವಾಹನಗಳನ್ನು ಚಲಾಯಿಸುವುದು ಒಳ್ಳೆಯದು. ಇಲ್ಲದಿದ್ದರೆ ಪ್ರಾಣಿ ಹಾನಿಯನ್ನು ತಪ್ಪಿಸಲಾಗುವುದಿಲ್ಲ.