Bajaj Qute ದಿ ಲಾಸ್ಟ್ ಸಿಟಿ ಹಾಲಿವುಡ್ ಚಿತ್ರದಲ್ಲಿ ಬಜಾಜ್ ಕ್ಯೂಟ್ ವಾಹನ ಬಳಕೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ!
ಹಾಲಿವುಡ್ ಚಿತ್ರದಲ್ಲಿ ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ಎಂಟ್ರಿ
ಬಜಾಜ್ ಕ್ಯೂಟ್ ವಾಹನದ ಸುತ್ತು ಸುತ್ತುವ ಕತೆಯ ಚಿತ್ರ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಜಾಜ್ ವಾಹನದ ಮಿಂಚಿನ ಓಟ
ನವದೆಹಲಿ(ಡಿ.31): ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ ಅತೀ ಸಣ್ಣ ವಾಹನ. ಹೆಚ್ಚು ಸುದ್ದು ಮಾಡದಿದ್ದರೂ ಬಹುತೇಕ ಎಲ್ಲಾ ನಗರಗಳಲ್ಲಿ ಅಲ್ಲೊಂದು ಇಲ್ಲೊಂದು ಬಟಾಟ್ ಕ್ಯೂಟ್ ವಾಹನ ಕಾಣಸಿಗುತ್ತದೆ. ಇದೀಗ ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ಅಂತಾರಾಷ್ಟ್ರಿಯ ಮಟ್ಟದಲ್ಲಿ ಮಿಂಚಲು ರೆಡಿಯಾಗಿದೆ. ಹೌದು, ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ಹಾಲಿವುಡ್ ಎಂಟ್ರಿಕೊಡುತ್ತಿದೆ. 2022ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ದಿ ಲಾಸ್ಟ್ ಸಿಟಿ ಹಾಲಿವುಡ್ ಚಿತ್ರದಲ್ಲಿ ಬಜಾಜ್ ಕ್ಯೂಟ್ ವಾಹನ ಕಾಣಿಸಿಕೊಂಡಿದೆ.
ವಿಶೇಷ ಅಂದರೆ ಈ ಹಾಲಿವುಡ್ ಚಿತ್ರದಲ್ಲಿ ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್ ವಾಹನದ ಸುತ್ತ ಕತೆ ಸುತ್ತಲಿದೆ. ಖ್ಯಾತ ನಟಿ ಸಾಂದ್ರಾ ಬುಲ್ಲಾಕ್ ಈ ಬಜಾಜ್ ಕ್ಯೂಟ್ ವಾಹನದಲ್ಲಿ ಪ್ರಯಾಣಸುತ್ತಾರೆ. ಈ ವೇಳೆ ಕಡಿದಾದ ರಸ್ತೆಯಲ್ಲಿ ಸಂಚರಿಸುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಕ್ಯೂಟ್ ವಾಹನ ಪ್ರಪಾತಕ್ಕೆ ಉರುಳಿಬೀಳುತ್ತದೆ. ಉರುಳಿ ಬಿದ್ದ ಕ್ಯೂಟ್ ವಾಹನದ ಒಳಗಿನಿಂದ ಸಾಂದ್ರಾ ಡೋರ್ ಒಪನ್ ಮಾಡಲು ಯತ್ನಿಸುವ ಟ್ರೈಲರ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ಈ ಚಿತ್ರದಲ್ಲಿ ಬಜಾಜ್ ಕ್ಯೂಟ್ ವಾಹನದ ಸುತ್ತ ಕತೆ ಹೆಣೆಯಲಾಗಿದೆ. ಇನ್ನು ಬಜಾಜ್ ಲೋಗೋ ಕಾಣದ ರೀತಿಯಲ್ಲಿ ಮುಚ್ಚಲಾಗಿದೆ. ಈ ಮೂಲಕ ಇದು ಪಾವತಿಸಿ ಪ್ರೋಮೋಶನ್ ಅಲ್ಲ ಅನ್ನೋದು ಸ್ಪಷ್ಟ. ಹಾಲಿವುಡ್ ದಿ ಲಾಸ್ಟ್ ಸಿಟಿ ಚಿತ್ರ ನಿರ್ದೇಶಕ ಆ್ಯರೋನ್ ನೀ ಹಾಗೂ ಆ್ಯಡಮ್ ನೀ ಚಿತ್ರಕ್ಕೆ ಸರಿಹೊಂದು ವಾಹನಕ್ಕಾಗಿ ಹಲವು ಸಂಶೋಧನೆ ಮಾಡಿದ್ದಾರೆ. ಕೊನೆಗೆ ಬಜಾಜ್ ಕ್ಯೂಟ್ ವಾಹನವನ್ನು ಆಯ್ಕೆ ಮಾಡಲಾಗಿದೆ
ಭಾರತ ವಾಹನ ಹಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲ್ಲ. ಈ ಹಿಂದೆಯೂ ಹಲವು ವಾಹನಗಳು ಕಾಣಿಸಿಕೊಂಡಿದೆ. ಆದರೆ ಇದೇ ಮೊದಲ ಬಾರಿಗೆ ಭಾರತದ ವಾಹನದ ಸುತ್ತು ಸುತ್ತುವ ಕತೆ ಇರುವ ಮೊದಲ ಚಿತ್ರ ಇದಾಗಿದೆ.
ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್:
ಬಜಾಜ್ ಕ್ವಾಡ್ರಿಸೈಕಲ್ ಅತೀ ಸಣ್ಣ ವಾಹನ, ಇದರ ಬೆಲೆ 2.63 ಲಕ್ಷ ರೂಪಾಯಿ(ಎಕ್ಸ್ ಶೋರೂಂ). ಇದರ ಎಂಜಿನ್ 216 ಸಿಸಿ, ವಾಟರ್ ಕೂಲ್ಡ್ 4 ವೇಲ್ವ್ ಮೋಟಾರ್ ಜೊತೆಗೆ ಫ್ಯುಯೆಲ್ ಇಂಜೆಕ್ಟ್ ಟೆಕ್ನಾಲಜಿ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಹೊಂದಿದೆ. ಇದರ ಮತ್ತೊಂದು ವಿಶೇಷ ಅಂದರೆ ಇದು ಪೆಟ್ರೋಲ್, CNG ಹಾಗೂ ಎಲ್‌ಪಿಜಿಯಲ್ಲಿ ಎಂಜಿನ್ ಕಾರ್ಯನಿರ್ವಹಿಸುತ್ತದೆ. ಪೆಟ್ರೋಲ್ ಎಂಜಿನ್ ಬಜಾಜ್ ಕ್ಯೂಟ್ ವಾಹನ 13 bhp ಪವರ್ ಹಾಗೂ 18.9 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದ ಎಂಜಿನ್ ಆಗಿದೆ. ಸಿಎನ್‌ಜಿ ವೇರಿಯೆಂಟ್ ವಾಹನ 216ಸಿಸಿ ಎಂಜಿನ್ ಹೊಂದಿದ್ದು, 19.83 bhp ಗರಿಷ್ಠ ಪವರ್ ಹಾಗೂ 16.1 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು LPG ಎಂಜಿನ್ ವಾಹನ 12 bhp ಪವರ್ ಹಾಗೂ 18.03 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಎಂಜಿನ್ ವಾಹನ ಒಂದು ಲೀಟರ್ ಪೆಟ್ರೋಲ್‌ಗೆ 35 ಕಿಲೋಮೀಟರ್ ಮೈಲೇಜ್ ನೀಡಲಿದೆ ಇನ್ನು ಸಿಎನ್‌ಜಿ ವಾಹನ 45 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದೀಗ ಈ ಸಣ್ಣ ವಾಹನ ಅತೀ ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದೆ. 2022ರ ಮಾರ್ಚ್ ತಿಂಗಳಲ್ಲಿ ದಿ ಲೊಸ್ಟ್ ಸಿಟಿ ಚಿತ್ರ ಬಿಡುಗಡೆಯಾಗಲಿದ್ದು, ಭಾರತದಲ್ಲಿ ಭಾರಿ ಕುತೂಹಲ ಸೃಷ್ಟಿಸಿದೆ.