ದಾವಣಗೆರೆ [ನ.06]: ಬಿಜೆಪಿಗೆ ಸಂಪೂರ್ಣವಾದ ಬಹುಮತ ಇದೆ. ಶಾಸಕರ ಬೆಂಬಲವೂ ಸಹ ಇದ್ದು ಬಾಹ್ಯ ಬೆಂಬಲದ ಅವಶ್ಯಕತೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. 

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೊರಟೂರು ಗ್ರಾಮದ ಗ್ರಾಮ ಪಂಚಾಯತ್ ಕಟ್ಟಟದ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಈಶ್ವರಪ್ಪ ತಮಗೆ ಬೆಂಬಲದ ಅವಶ್ಯಕತೆ ಇಲ್ಲವೆಂದಿದ್ದಾರೆ. 

ಕೇಂದ್ರದಲ್ಲಿಯೂ ಕೂಡ ಬಹುಮತವಿದ್ದರೂ ಅನೇಕ ಪಕ್ಷಗಳು ಬೆಂಬಲ ನೀಡಿದ್ದವು. ಅದರಂತೆ ಇಲ್ಲಿಯೂ ಬೆಂಬಲ ನೀಡಿದರೆ ಬೇಡ ಎನ್ನುವುದಿಲ್ಲ ಎಂದು ಪರೋಕ್ಷವಾಗಿ ಜೆಡಿಎಸ್ ಬೆಂಬಲಕ್ಕೆ ಆಹ್ವಾನ ಕೊಟ್ಟಿದ್ದಾರೆ. 

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದರು ಎಂದೂ ಕೂಡ ಈ ವೇಳೆ ಈಶ್ವರಪ್ಪ ಪ್ರಸ್ತಾಪಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಕಳೆದ ಬಾರಿ ಮೈತ್ರಿಯಲ್ಲಿ ಸರ್ಕಾರ ರಚಿಸಿದ್ದ ಕಾಂಗ್ರೆಸ್ ಜೆಡಿಎಸ್ ಸ್ನೇಹ ಉಳಿಯಲಿಲ್ಲ. ಅದರ ಫಲವನ್ನು ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದರು. ಆದರೆ ಬಿಜೆಪಿಗೆ ಪೂರ್ಣ ಬಹುಮತ ಬಾರದಿದ್ದರೂ ಕೂಡ ಬಿಜೆಪಿಯೇ ಆಡಳಿತ ನಡೆಸಬೇಕು ಎನ್ನುವ ವಾತಾವರಣ ಸೃಷ್ಟಿಯಾಗಿದೆ ಎಂದರು. 

ಇನ್ನು ಸದ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಜೊತೆಗೆ ಜೆಡಿಎಸ್ ಸೇರಿದಂತೆ ಹಲವು ಪಕ್ಷಗಳು ಸೇರುತ್ತಿವೆ. ಬಿಜೆಪಿ ರಾಜ್ಯದಲ್ಲಿ ಸಧೃಡವಾಗಿ ಬೆಳೆಯುತ್ತಿದೆ. ಒಂದು ವೇಳೆ ರಾಜ್ಯದಲ್ಲಿ ಚುನಾವಣೆ ಬಂದರೆ ಬಿಜೆಪಿಗೆ ಪೂರ್ಣ ಬಹುಮತ ಬರಲಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು.