ಕಳೆದ ಮೂರು ದಿನದಲ್ಲಿ ದಾವಣಗೆರೆಯಲ್ಲಿ ಒಟ್ಟು ಕೊರೋನಾ ಕೇಸ್‌ 28!

ಗ್ರೀನ್‌ ಝೋನ್‌ನಲ್ಲಿದ್ದ ದಾವಣಗೆರೆ ಕಳೆದ ಮೂರು ದಿನಗಳೊಳಗಾಗಿ ಕೊರೋನಾದಿಂದ ಅಕ್ಷರಶಃ ಬೆಚ್ಚಿ ಬಿದ್ದಿದೆ. ಬರೋಬ್ಬರಿ 3 ದಿನದಲ್ಲಿ ಕಾಟನ್‌ ಸಿಟಿ ಕೊರೋನಾಗೆ ನಲುಗಿ ಹೋಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

From Last 3 days 28 Corona positive case register in Davanagere District

ದಾವಣಗೆರೆ(ಮೇ.04): ನಗರದಲ್ಲಿ ಕಳೆದ 3 ದಿನಗಳಿಂದ 330 ಜನರ ಸ್ಯಾಂಪಲ್‌ ಕಳಿಸಿದ್ದು, ಈ ಪೈಕಿ ‘ಎ’ ಕೆಟಗರಿಯ 37 ಸ್ಯಾಂಪಲ್‌ಗಳಲ್ಲಿ 21 ಪಾಸಿಟಿವ್‌ ಪ್ರಕರಣ ದೃಢಪಡುವುದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 28 ಸೋಂಕು ಪ್ರಕರಣಗಳಾಗಿವೆ. ಉಳಿದ ಸ್ಯಾಂಪಲ್‌ಗಳ ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಹೇಳಿದರು.

ನಗರದ ಡಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಅವರು, ಮೊನ್ನೆ 94 ಜನರ ಸ್ಯಾಂಪಲ್‌, ಶನಿವಾರ 72 ಜನರದ್ದು ಹಾಗೂ ಇಂದು 164 ಸ್ಯಾಂಪಲ್‌ ಕಳಿಸಲಾಗಿತ್ತು. ಮೊನ್ನೆ -ನಿನ್ನೆ ಕಳಿಸಿದ್ದ ‘ಎ’ ಕೆಟಗರಿ ಸ್ಯಾಂಪಲ್‌ ಪೈಕಿ 37 ರನ್‌ ಮಾಡಿದಾಗ 21 ಜನರಲ್ಲಿ ಪಾಸಿಟಿವ್‌ ದೃಢಪಟ್ಟಿದೆ ಎಂದರು. ಹೊಸದಾಗಿ ಸೋಂಕು ದೃಢಪಟ್ಟ21 ಜನರಿಗೆ ಕೋಡ್‌ ನಿಗದಿಯಾಗಿಲ್ಲ. ಬಾಷಾ ನಗರದ ಸೋಂಕಿತ ನರ್ಸ್‌ ಪಿ-533 ಹಾಗೂ ಜಾಲಿ ನಗರದ ಸೋಂಕಿತ ಮೃತ ಪಿ-556 ಪೈಕಿ ಯಾರಿಂದ ಸೋಂಕು ಹರಡಿರಬಹುದೆಂಬುದು, ಯಾವ ಏರಿಯಾದವರು ಎಂಬುದೂ ಕೋಡ್‌ ಫಿಕ್ಸ್‌ ಆದ ನಂತರವೇ ಸ್ಪಷ್ಟವಾಗಲಿದೆ ಎಂದು ಹೇಳಿದರು.

ಸೋಂಕು ದೃಢಪಟ್ಟವರು ಪ್ರಥಮ ಸಂಪರ್ಕದವರೇ, ದ್ವಿತೀಯ ಸಂಪರ್ಕದವರೇ ಎಂಬುದೂ ಕೋಡ್‌ ನಿಗದಿ ನಂತರವೇ ಗೊತ್ತಾಗಲಿದೆ. ಸರ್ವೇಕ್ಷಣಾ ತಂಡ ಪರಿಶೀಲನೆ ನಡೆಸಿದೆ. ನಿನ್ನೆವರೆಗೆ ಸೋಂಕು ದೃಢಪಟ್ಟಿದ್ದ 8 ಸೋಂಕಿತರಲ್ಲಿ ಜಾಲಿ ನಗರದ ಪಿ-556 ಮೃತಪಟ್ಟಿದ್ದರು. ಉಳಿದ 7 ಕೇಸ್‌ ಜೊತೆಗೆ ಈಗಿನ ಹೊಸ 21 ಕೇಸ್‌ ಸೇರಿದಂತೆ ಒಟ್ಟು 28 ಕೋವಿಡ್‌ ಸೋಂಕಿತರು ನಗರದಲ್ಲಿದ್ದಾರೆ ಎಂದು ತಿಳಿಸಿದರು.

ಪಿ-533, ಪಿ-556 ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದವರ ಪರಿಶೀಲಿಸಿ, ಪಾಸಿಟಿವ್‌ ಬಂದವರಿಗೆ ಕೋಡ್‌ ನೀಡಲಾಗುತ್ತದೆ. ಬಾಷಾ ನಗರ, ಜಾಲಿ ನಗರದ ಸೋಂಕಿತರ ಮನೆಗಳನ್ನು ಎಪಿ ಸೆಂಟರ್‌ ಮಾಡಿ, ಕಂಟೈನ್‌ಮೆಂಟ್‌ ನಿಗದಿಪಡಿಸಿದೆ. 2 ಕಂಟೈನ್‌ಮೆಂಟ್‌ ಪ್ರದೇಶ ಸೀಲ್‌ ಡೌನ್‌ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಈಗ ಹೊಸದಾಗಿ ಸೋಂಕಿತರು ಯಾವ ಪ್ರದೇಶದವರು ಎಂಬುದು ಅಂತಿಮ ವರದಿ ಬಂದ ನಂತರವಷ್ಟೇ ಸ್ಪಷ್ಟವಾಗಲಿದೆ. ಸೋಂಕಿತರ ಸಂಬಂಧಿಗಳಾ ಅಥವಾ ನೆರೆಹೊರೆಯವರಾ, ಪರಿಚಯಸ್ಥರಾ ಎಂಬುದಾಗಿ ಕೋಡ್‌ ನಿಗದಿ ಆದ ನಂತರ ಗೊತ್ತಾಗುತ್ತದೆ. ಪ್ರತಿ ಪಾಸಿಟಿವ್‌ ಕೇಸ್‌ಗೂ ನಿರ್ದಿಷ್ಟಕೋಡ್‌ ನೀಡುವ ಕೆಲಸವಾಗುತ್ತಿದೆ ಎಂದು ಹೇಳಿದರು.

ಸಂಸದ ಜಿ.ಎಂ.ಸಿದ್ದೇಶ್ವರ, ಎಂಎಲ್‌ಸಿ ಕೆ.ಅಬ್ದುಲ್‌ ಜಬ್ಬಾರ್‌, ಜಿಲ್ಲಾ ಪೊಲೀಸ್‌ ವರಿಷ್ಠ ಹನುಮಂತರಾಯ, ಜಿಪಂ ಸಿಇಓ ಪದ್ಮಾ ಬಸವಂತಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಎಚ್‌ಓ ಡಾ.ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್‌, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ಕೋವಿಡ್‌-19 ನೋಡಲ್‌ ಅಧಿಕಾರಿ ಪ್ರಮೋದ್‌ ನಾಯಕ ಇತರರು ಇದ್ದರು.

299 ಸ್ಯಾಂಪಲ್‌ ವರದಿ ಬರಬೇಕು: ಡಿಸಿ

ಕಳೆದ 3 ದಿನಗಳ ಅವಧಿಯಲ್ಲಿ ದಾವಣಗೆರೆಯಲ್ಲಿ ಒಟ್ಟು 330 ಜನರ ಸ್ಯಾಂಪಲ್‌ ಸಂಗ್ರಹಿಸಿ, ಲ್ಯಾಬ್‌ಗೆ ಕಳಿಸಿದ್ದೇವೆ. ಶುಕ್ರವಾರ 94 ಜನರ ಸ್ಯಾಂಪಲ್‌, ಶನಿವಾರ 72 ಜನರದ್ದು, ಭಾನುವಾರ 164 ಜನರ ಸ್ಯಾಂಪಲ್‌ ಸಂಗ್ರಹಿಸಿ, ಕಳಿಸಲಾಗಿದೆ. ಎ ಕೆಟಗರಿ ಸ್ಯಾಂಪಲ್‌ಗಳ ಪೈಕಿ 37 ಜನರದ್ದು ರನ್‌ ಮಾಡಿದಾಗ 21 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಇನ್ನೂ ಪೇಷೆಂಟ್‌ ಕೋಡ್‌ ನಿಗದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

ಒಟ್ಟು 330 ಸ್ಯಾಂಪಲ್‌ ಪೈಕಿ 293 ಸ್ಯಾಂಪಲ್‌ ರನ್‌ ಆಗಬೇಕಿದೆ. ಜಿಲ್ಲಾ ಕೇಂದ್ರದಲ್ಲಿ ಅದರಲ್ಲೂ ಬಾಷಾ ನಗರ, ಜಾಲಿ ನಗರದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಜಿಲ್ಲಾ ಕೇಂದ್ರದ ಜನತೆ ಮುನ್ನೆಚ್ಚರಿಕೆ ವಹಿಸಬೇಕಾದ ಅನಿವಾರ್ಯತೆಯೂ ಇದೆ. ಸದ್ಯಕ್ಕೆ ಇಂದಿನ 21 ಕೇಸ್‌ ಸೇರಿ ಒಟ್ಟು 28 ಸೋಂಕಿತ ಪ್ರಕರಣ ಜಿಲ್ಲಾ ಕೇಂದ್ರದಲ್ಲಿ ಆಕ್ಟಿವ್‌ ಇದ್ದು, ಜನರು ಸಹ ಸೋಂಕಿನ ಲಕ್ಷಣಗಳಿದ್ದರೆ ಯಾವುದೇ ಅಳುಕು, ಅಂಜಿಕೆ ಇಲ್ಲದೇ, ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಡಿಸಿ ಮನವಿ ಮಾಡಿದರು.
 

Latest Videos
Follow Us:
Download App:
  • android
  • ios