ದಾವಣಗೆರೆ [ಅ.26] : ಮಹಿಳೆಯರಿಗೆ ತುರುಬು ಬಿಚ್ಚುವುದು ಗೊತ್ತು, ತುರುಬು ಕಟ್ಟುವುದೂ ಗೊತ್ತಿದೆ ಎಂಬುದನ್ನು ಸಚಿವ ಕೆ.ಎಸ್‌.ಈಶ್ವರಪ್ಪ ಅರ್ಥ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್‌ ಶಾಸಕ, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುರುಬಿನ ವಿಚಾರ ಪ್ರಸ್ತಾಪಿಸುವ ಮೂಲಕ ಈಶ್ವರಪ್ಪ ಮಹಿಳೆಯರಿಗೆ ಅವಮಾನಿಸಿದ್ದು, ಸಚಿವರಿಗೆ ಸ್ವಾಭಿಮಾನವಿದ್ದರೆ ತಮ್ಮ ಬೆನ್ನನ್ನು ತಾವು ನೋಡಿಕೊಳ್ಳಲಿ ಎಂದರು. ಹಿಂದೆ ಉಪ ಮುಖ್ಯಮಂತ್ರಿಯಾಗಿದ್ದ ಈಶ್ವರಪ್ಪ ಈಗ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದಲೇ ಗೊತ್ತಾಗುತ್ತದೆ. ಈಶ್ವರಪ್ಪ ಯೋಗ್ಯತೆ ಎಲ್ಲಿಗೆ ಬಂದಿದೆಯೆಂಬುದು. ಇಂತಹವರಿಗೆ ಕಾಂಗ್ರೆಸ್‌ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ಹೇಳಿದರು.

ಡಿಸಿಎಂ ಸವದಿ ಹೇಳಿಕೆ, ಬಿಜೆಪಿ ಬಣ್ಣ ಬಯಲು :  ಅನರ್ಹ ಶಾಸಕರಿಗೂ, ಬಿಜೆಪಿಗೂ ಸಂಬಂಧವಿಲ್ಲವೆಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ. ಇದರಿಂದ ಬಿಜೆಪಿಯವರು ಹತ್ತಿದ ಏಣಿಯನ್ನೇ ಒದೆಯುವಂತಹ ಮನಸ್ಥಿತಿ ಹೊಂದಿದವರು ಎಂಬುದು ಸ್ಪಷ್ಟವಾಗುತ್ತದೆ. ಹತ್ತಿದ ಏಣಿ ಒದೆಯುವುದು ಬಿಜೆಪಿ ಹಿಂದಿನಿಂದಲೂ ಮಾಡಿಕೊಂಡೇ ಬಂದಿದೆ ಎಂದು ಟೀಕಿಸಿದರು.

ಸ್ವತಂತ್ರ ಅಭ್ಯರ್ಥಿಯಾಗಿ ಹಿಂದೆ ಗೆದ್ದು, ಬಿಜೆಪಿ ಬೆಂಬಲಿಸಿದ್ದ ಮಾಜಿ ಸಚಿವ ಗೂಳಿಹಟ್ಟಿಶೇಖರ ಸ್ಥಿತಿ ಆ ಪಕ್ಷದಲ್ಲಿ ಇಂದು ಏನಾಗಿದೆಯೆಂಬುದನ್ನು ನಾಡಿನ ಜನತೆಯೂ ಗಮ

ನಿಸುತ್ತಿದ್ದಾರೆ. ಈಗಿನ ಬಿಜೆಪಿ ಸರ್ಕಾರ ಅನೈತಿಕವಾಗಿದ್ದು, ಅನರ್ಹ ಶಾಸಕರಿಗೆ ನಾವು ಸಾಕಷ್ಟುತಿಳಿ ಹೇಳಿದರೂ ಅರ್ಥ ಮಾಡಿಕೊಳ್ಳಲಿಲ್ಲ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿಯನ್ನು ನಂಬಿಕೊಂಡು ಹೋಗಿದ್ದ ಅನರ್ಹ ಶಾಸಕರಿಗೆ ಈಗಷ್ಟೇ ಜ್ಞಾನೋದಯವಾಗಿದೆ. ಬಿಜೆಪಿ ನಾಯಕರನ್ನು ನಂಬಿಕೊಂಡು ಹೋಗಿದ್ದಂತಹ ಅನರ್ಹ ಶಾಸಕರ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಇದೇ ಕಾರಣಕ್ಕೆ ಹೀಗೆ ಹೇಳಿರಬಹುದು. ಬಿಜೆಪಿಯವರ ಇಂತಹ ವರ್ತನೆಯೂ ಇದೇ ಹೊಸದೇನೂ ಅಲ್ಲವಲ್ಲ ಎಂದು ಅವರು ಕುಟುಕಿದರು.