ಮಂಗಳೂರು[ಅ.30]:  ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ, ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಅವರ ಸಾವಿನ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಪತ್ರವನ್ನು ಸಿದ್ಧಾರ್ಥ ಅವರೇ ಬರೆದಿದ್ದು, ಅದರಲ್ಲಿದ್ದ ಸಹಿ ಕೂಡ ಅವರದ್ದೇ ಎನ್ನುವುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. 

ನೇತ್ರಾವತಿ ಸೇತುವೆ ಬಳಿ ಆಗಮಿಸುವ ಮುನ್ನ ಪತ್ರ ಪೋಸ್ಟ್ ಮಾಡಿದ್ದ ಸಿದ್ಧಾರ್ಥ

ಸಾಲದಾತರ ಒತ್ತಡ ಮತ್ತು ಐಟಿ ಇಲಾಖೆಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದ ಕುರಿತು ಸಿದ್ಧಾರ್ಥ ಆ ಪತ್ರದಲ್ಲಿ ಅಳಲು ತೋಡಿಕೊಂಡಿದ್ದರು. ಸಿದ್ಧಾರ್ಥ ಸಾವಿನ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದ ಈ ಪತ್ರದ ಸತ್ಯಾಸತ್ಯತೆ ಬಗ್ಗೆ ಅನುಮಾನಗಳಿದ್ದವು. ಆದರೆ ಇದೀಗ ಆ ಪತ್ರವನ್ನು ಸಿದ್ಧಾರ್ಥ ಅವರೇ ಬರೆದಿದ್ದಾರೆ. ಅದರಲ್ಲಿದ್ದ ಸಹಿ ಕೂಡ ಅವರದ್ದೇ ಆಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ನೀಡಿದೆ. ಈ ನಡುವೆ, ಜು.29ರಂದು ನೇತ್ರಾವತಿ ನದಿಗೆ ಹಾರಿದ ಸಿದ್ಧಾರ್ಥ ಪ್ರಕರಣ ಕುರಿತು ಶೇ.10 ರಷ್ಟು  ತನಿಖೆ ಮಾತ್ರ ಬಾಕಿ ಇದೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ.ಪಿ.ಎಸ್‌.ಹರ್ಷ ತಿಳಿಸಿದ್ದಾರೆ.

ಶೀಘ್ರ ಅಂತಿಮ ವರದಿ ಸಲ್ಲಿಕೆ: 

ಸಿದ್ಧಾರ್ಥ ಸಾವಿನ ಕುರಿತ ತನಿಖೆ ಪ್ರಗತಿಯಲ್ಲಿದ್ದು, ಕೇವಲ ಶೇ.10 ರಷ್ಟು ಮಾತ್ರ ತನಿಖೆಗೆ ಬಾಕಿಯಿದೆ. ಸಿದ್ಧಾರ್ಥ ಅವರ ಕಚೇರಿಯಿಂದ ಕೋರಿರುವ ಕೆಲವು ದಾಖಲೆಗಳನ್ನು ಪರಿಶೀಲಿಸಿದ ನಂತರ ಶೀಘ್ರದಲ್ಲೇ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ.ಪಿ.ಎಸ್‌.ಹರ್ಷ ತಿಳಿಸಿದ್ದಾರೆ.

ಮಾರ್ಗ ಮಧ್ಯೆ ಸಿದ್ಧಾರ್ಥ ಪೋಸ್ಟ್ ಮಾಡಿದ ಪತ್ರದಲ್ಲಿದ್ದ ವಿಳಾಸ!?

60 ವರ್ಷ ವಯಸ್ಸಿನ ವಿ.ಜಿ.ಸಿದ್ಧಾರ್ಥ ಜುಲೈ 29ರಂದು ರಾತ್ರಿ ನೇತ್ರಾವತಿ ಸೇತುವೆ ಮೇಲೆ ಕೆಲಕಾಲ ನಡೆದುಕೊಂಡು ಹೋಗಿ ಬಳಿಕ ನಾಪತ್ತೆಯಾಗಿದ್ದರು. ಜುಲೈ 31ರಂದು ಬೆಳಗ್ಗೆ ಸೇತುವೆಯಿಂದ ಕೆಲವೇ ಮೀಟರ್‌ ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಸಾವಿನ ತನಿಖೆಯನ್ನು ಮಂಗಳೂರು ನಗರ ಪೊಲೀಸ್‌ ಅಧಿಕಾರಿಗಳ ತಂಡ ನಿರ್ವಹಿಸುತ್ತಿದೆ.

ಅಕ್ಟೋಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: