Asianet Suvarna News Asianet Suvarna News

ರಾಜ್ಯದ ಕರಾವಳಿಗೆ ಈಗ 3ನೇ ಚಂಡಮಾರುತದ ಭೀತಿ !

ರಾಜ್ಯದ ಕರಾವಳಿಗೆ ಒಂದರ ಮೇಲೊಂದು ಅವಘಡ ಎದುರಾಗುತ್ತಿದೆ. ಕ್ಯಾರ್ ಆಯ್ತು, ಮಹಾ ಆಯ್ತು ಇದೀಗ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ. 

IMD issues another cyclone alert For Karnataka Coastal
Author
Bengaluru, First Published Nov 4, 2019, 8:03 AM IST

ಮಂಗಳೂರು [ನ.04]:  ಅರಬ್ಬಿ ಸಮುದ್ರದಲ್ಲಿ ಕೆಲ ದಿನಗಳ ಹಿಂದೆ ‘ಕ್ಯಾರ್‌’ ಹಾಗೂ ‘ಮಹಾ’ ಚಂಡಮಾರುತಗಳ ಅಬ್ಬರ ಇತ್ತು. ಇದೀಗ ಹಿಂದು ಮಹಾಸಾಗರದಲ್ಲಿ ಮತ್ತೊಂದು ಚಂಡಮಾರುತ ರೂಪುಗೊಳ್ಳುವ ಅಪಾಯ ಎದುರಾಗಿದೆ. ಅರಬ್ಬೀ ಸಮುದ್ರದಲ್ಲಿ ಎರಡು ಚಂಡಮಾರುತಗಳು ಒಟ್ಟೊಟ್ಟಿಗೆ ಕಾಣಿಸಿಕೊಂಡ ಅತ್ಯಂತ ಅಪರೂಪದ ಘಟನೆ ಜರುಗಿದೆ. 54 ವರ್ಷಗಳ ಹಿಂದೆ ಅಂದರೆ 1965ರಲ್ಲಿ ಇಂತಹ ವಿದ್ಯಮಾನ ಜರುಗಿತ್ತು. ಇದಾದ ನಂತರ ಕ್ಯಾರ್‌ ಹಾಗೂ ಮಹಾ ಚಂಡಮಾರುತಗಳು ಈ ವರ್ಷ ಒಟ್ಟೊಟ್ಟಿಗೆ ರೂಪುಗೊಂಡು ತಲ್ಲಣಗೊಳಿಸಿವೆ.

ಹೀಗೆ ಒಂದಾದ ಹಿಂದೆ ಒಂದರಂತೆ ಚಂಡಮಾರುತಗಳು ನಿರ್ಮಾಣವಾಗುವ ಮೂಲಕ ಅರಬ್ಬಿ ಸಮುದ್ರವು ಚಂಡಮಾರುತಗಳ ತಾಣವಾಗಿ ಪರಿವರ್ತನೆಯಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಬಂಗಾಳ ಕೊಲ್ಲಿಗೆ ಹೋಲಿಸಿದರೆ ತುಸು ಮಟ್ಟಿಗೆ ಶಾಂತ ಸಮುದ್ರವೆನಿಸಿದ್ದ ಅರಬ್ಬಿ ಸಮುದ್ರದಲ್ಲಿ ಇತ್ತೀಚೆಗೆ ಚಂಡಮಾರುತಗಳ ನಿರ್ಮಾಣ ಸಂಖ್ಯೆ ಹೆಚ್ಚುತ್ತಿದೆ. ಹೀಗೇಕೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಕಂಡುಕೊಳ್ಳಬೇಕಿದೆ ಎಂದು ಹೇಳುತ್ತಾರೆ ಹವಾಮಾನ ಇಲಾಖೆಯ ನಿರ್ದೇಶಕಿ ಗೀತಾ ಅಗ್ನಿಹೋತ್ರಿ.

ಸಾಮಾನ್ಯವಾಗಿ ಮೇ ಮತ್ತು ಅಕ್ಟೋಬರ್‌ ತಿಂಗಳಿನಲ್ಲಿ ಹೆಚ್ಚು ಚಂಡಮಾರುತಗಳು ಉಂಟಾಗುತ್ತವೆ. ಚಂಡಮಾರುತ ನಿರ್ಮಾಣಗೊಳ್ಳಲು ಬೇಕಾದ ವಾತಾವರಣ ಹಾಗೂ ಉಷ್ಣತೆಯೂ ಬಂಗಾಳ ಕೊಲ್ಲಿಯಲ್ಲಿದೆ. ಈ ಸಮುದ್ರವು ಪೆಸಿಫಿಕ್‌ ಸಾಗರಕ್ಕೆ ಸಾಮೀಪ್ಯ ಹೊಂದಿದೆ. ಹೀಗಾಗಿ ಪೆಸಿಫಿಕ್‌ ಸಾಗರದಲ್ಲಿ ರೂಪುಗೊಳ್ಳುವ ಮಾರುತಗಳ ಪ್ರಭಾವ ಬಂಗಾಳ ಕೊಲ್ಲಿಯಲ್ಲಿ ಹೆಚ್ಚು. ಇನ್ನು ಚಂಡಮಾರುತ ನಿರ್ಮಾಣಗೊಳ್ಳಲು ಸಮುದ್ರ ಬಿಸಿಯಾಗಬೇಕು. ಅಂದರೆ, ಸಮುದ್ರದ ಉಷ್ಣಾಂಶ ಕನಿಷ್ಠ 26 ಡಿಗ್ರಿ ಸೆಲ್ಸಿಯಸ್‌ ಇರಬೇಕು. ಈ ಎಲ್ಲಾ ಲಕ್ಷಣಗಳು ಬಂಗಾಳ ಕೊಲ್ಲಿಯಲ್ಲಿ ಹೆಚ್ಚು. ಇದು ಅರಬ್ಬಿ ಸಮುದ್ರದಲ್ಲಿ ಅಷ್ಟಾಗಿ ಇಲ್ಲ.

ಹಾಗಂತ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ನಿರ್ಮಾಣವಾಗಬಾರದು ಅಥವಾ ನಿರ್ಮಾಣವಾಗಿಲ್ಲ ಎಂದೇನೂ ಇಲ್ಲ. ಹಿಂದು ಮಹಾಸಾಗರದಲ್ಲಿ ರೂಪುಗೊಳ್ಳುವ ಚಂಡಮಾರುತಗಳು ಯಾವ ದಿಸೆಯಲ್ಲಾದರೂ ವ್ಯಾಪಿಸಿ ತಲ್ಲಣ ನಿರ್ಮಾಣ ಮಾಡಬಹುದು. ಬಂಗಾಳಕೊಲ್ಲಿಗೆ ಹೋಲಿಸಿದಾಗ ಅರಬ್ಬಿ ಸಮುದ್ರದಲ್ಲಿ ಸಾಮಾನ್ಯವಾಗಿ ಅಷ್ಟುಚಂಡಮಾರುತ ಇರುವುದಿಲ್ಲ. ಆದರೆ, ಇತ್ತೀಚಿನ ಎರಡು-ಮೂರು ವರ್ಷಗಳಲ್ಲಿ ಅರಬ್ಬಿ ಸಮುದ್ರದಲ್ಲೂ ಚಂಡಮಾರುತ ಕಾಣಿಸಿಕೊಂಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದಕ್ಕೆ ಕಾರಣವನ್ನು ಇನ್ನೂ ಕಂಡುಕೊಳ್ಳಲಾಗಿಲ್ಲ. ಪೆಸಿಫಿಕ್‌ ಸಾಗರದ ಮಾರುತಗಳ ಬೀಸುವಿಕೆಯಲ್ಲಿ ಏನಾದರೂ ಏರುಪೇರಾಗಿದೆಯೇ? ಅರಬ್ಬಿ ಸಮುದ್ರದ ಉಷ್ಣಾಂಶದಲ್ಲಿ ಕ್ರಮೇಣ ಹೆಚ್ಚಳ ಉಂಟಾಗಿದೆಯೇ? ಉಂಟಾಗಿದ್ದರೆ ಇದಕ್ಕೆ ಕಾರಣವೇನು? ಅಥವಾ ಎಲ್‌ನಿನೋ ಪ್ರಭಾವವೇನಾದರೂ ಇದೆಯೇ ಎಂಬ ಬಗ್ಗೆ ಅಧ್ಯಯನ ನಡೆಯಬೇಕಿದೆ. ಸುಮಾರು 30 ವರ್ಷದ ಮಾಹಿತಿಯನ್ನು ಇಟ್ಟುಕೊಂಡು ಅಧ್ಯಯನ ನಡೆಸಿದರೆ ಆಗ ಅರಬ್ಬಿ ಸಮುದ್ರದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯ? ಇದು ಸಂಶೋಧನೆ ನಡೆಸಲು ಯೋಗ್ಯ ವಿಷಯ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಅಧ್ಯಯನ ನಡೆದಿಲ್ಲ ಎಂದು ಗೀತಾ ಅಗ್ನಿಹೋತ್ರಿ ವಿವರಿಸುತ್ತಾರೆ.

ಇನ್ನು ಅರಬ್ಬಿ ಸಮುದ್ರದಲ್ಲಿ ಈ ವರ್ಷ ಉಂಟಾಗಿರುವ ಚಂಡಮಾರುತಗಳು ಮುಂದಿನ ವರ್ಷವೂ ಉಂಟಾಗುತ್ತದೆ ಅಥವಾ ಇನ್ನು ಈ ಸಮುದ್ರದಲ್ಲಿ ಚಂಡಮಾರುತ ಹೆಚ್ಚಾಗುತ್ತದೆ ಎಂದು ಹೇಳಲು ಆಗುವುದಿಲ್ಲ. ಈ ಬಾರಿ ಎರಡೆರಡು ಚಂಡಮಾರುತ ಏಕಕಾಲದಲ್ಲಿ ನಿರ್ಮಾಣವಾಗಿರುವುದು ಅತ್ಯಂತ ಅಪರೂಪದ ಪ್ರಸಂಗ. ಇದು ಮತ್ತೆ ನಡೆಯುತ್ತದೆ ಎನ್ನಲು ಆಗುವುದಿಲ್ಲ ಎಂದು ಅವರು ಹೇಳುತ್ತಾರೆ.

‘ಮಹಾ’ ವಾಪಸ್‌ ಗುಜರಾತ್‌ ಕಡೆಗೆ:

ಈ ನಡುವೆ ಅರಬ್ಬಿ ಸಮುದ್ರದ ಉತ್ತರ ಭಾಗದಲ್ಲಿರುವ ‘ಮಹಾ’ ಚಂಡಮಾರುತ ಮತ್ತೆ ವಾಪಸ್‌ ಗುಜರಾತ್‌ ಹಾಗೂ ಮಹಾರಾಷ್ಟ್ರ ಭೂ ಭಾಗದ ಕಡೆಗೆ ಬರಲಿದೆ. ಇದರಿಂದ ಆ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ರಾಜ್ಯದ ಉತ್ತರ ಒಳನಾಡಿನ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಉಳಿದಂತೆ ರಾಜ್ಯದ ಹಾವೇರಿ, ಬೀದರ್‌, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಧಾರಾವಾಡ ಸೇರಿದಂತೆ ಕೆಲವೆಡೆ ಭಾನುವಾರ ಸಾಧಾರಣದಿಂದ ಕೂಡಿದ ಗುಡುಗು ಸಹಿತ ಮಳೆಯಾದ ವರದಿಯಾಗಿದೆ. ಬೆಂಗಳೂರು ನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಮಂಡ್ಯ ಸೇರಿದಂತೆ ಕೆಲವೆಡೆ ಮೋಡಕವಿದ ವಾತಾವರಣ ಉಂಟಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.

Follow Us:
Download App:
  • android
  • ios