ಬೆಂಗಳೂರು(ಜ.11): ಮಹಾನ್‌ ವಂಚಕ ಯುವರಾಜ ಅಲಿಯಾಸ್‌ ಸ್ವಾಮಿಯ ವಂಚನೆ ಪ್ರಕರಣಗಳು ದಿನಕ್ಕೊಂದು ಬಟಾಬಯಲಾಗುತ್ತಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಕೇಂದ್ರೀಯ ರೇಷ್ಮೆ ಮಂಡಳಿ ಅಧ್ಯಕ್ಷ ಹುದ್ದೆ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ 30 ಲಕ್ಷ ವಂಚಿಸಿರುವುದು ಬೆಳಕಿಗೆ ಬಂದಿದೆ.

ಗಿರಿನಗರ ನಿವಾಸಿ ಎಂ.ಸಿ. ಇನಿತ್‌ಕುಮಾರ್‌ (40) ವಂಚನೆಗೊಳಗಾದ ಉದ್ಯಮಿ. ಇನಿತ್‌ ಕುಮಾರ್‌ ಅವರು ಕೊಟ್ಟ ದೂರಿನ ಮೇರೆಗೆ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಏನಿದು ಪ್ರಕರಣ?:

ಉದ್ಯಮಿ ಇನಿತ್‌ ಕುಮಾರ್‌ ಅವರಿಗೆ ಅವರ ಸ್ನೇಹಿತ ಸುರೇಶ್‌ ಎಂಬುವರು ನಾಲ್ಕು ತಿಂಗಳ ಹಿಂದೆ ತಾಜ್‌ ವೆಸ್ಟ್‌ಎಂಡ್‌ ಹೋಟೆಲ್‌ನಲ್ಲಿ ಆರೋಪಿಯನ್ನು ಪರಿಚಯ ಮಾಡಿಸಿದ್ದರು. ಈ ವೇಳೆ ಆರೋಪಿ ಯುವರಾಜ್‌ ‘ನಾನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಅವರ ಅಣ್ಣನ ಮಗ. ನನಗೆ ಹಲವು ರಾಜಕೀಯ ನಾಯಕರ ಪರಿಚಯವಿದೆ. ನೀವು ಯುವಕರಿದ್ದೀರಿ, ರಾಜಕೀಯಕ್ಕೆ ಬರಬೇಕು. ನನಗೆ ಗೊತ್ತಿರುವವರಿಂದ ನಿಮಗೆ ರಾಜಕೀಯ ಭವಿಷ್ಯ ಕೊಡಿಸುತ್ತೇನೆ’ ಎಂದು ರಾಷ್ಟ್ರೀಯ ನಾಯಕರೊಂದಿಗೆ ಇರುವ ಫೋಟೋಗಳನ್ನು ತೋರಿಸಿದ್ದ.

ಬಳಿಕ ಕೇಂದ್ರೀಯ ರೇಷ್ಮೆ ಮಂಡಳಿ ಅಧ್ಯಕ್ಷ ಹುದ್ದೆ ಖಾಲಿ ಇದ್ದು, ಆ ಹುದ್ದೆಯನ್ನು ನಿಮಗೆ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದ. ಈ ಹುದ್ದೆ ಪಡೆಯಲು ಮೂರು ಕೋಟಿ ರು. ಆಗುತ್ತದೆ ಎಂದು ಹೇಳಿದ್ದ. ನಮ್ಮಿಂದ ಅಷ್ಟು ಹಣ ಭರಿಸಲು ಸಾಧ್ಯವಾಗಲ್ಲ ಎಂದು ಇನಿತ್‌ ಸುಮ್ಮನಾಗಿದ್ದರು. ಮೂರು ದಿನಗಳ ಬಳಿಕ ದೂರುದಾರರಿಗೆ ಕರೆ ಮಾಡಿ ಎರಡು ಕೋಟಿಗೆ ಬೇಡಿಕೆ ಇಟ್ಟಿದ್ದ. ಇದಕ್ಕೆ ಒಪ್ಪದಿದ್ದಾಗ ಮಧ್ಯವರ್ತಿ ಸುರೇಶ್‌ ಮೂಲಕ ಮೊದಲು 50 ಲಕ್ಷ ರುಪಾಯಿ ಕೊಡಿ. ರೇಷ್ಮೆ ಮಂಡಳಿ ಅಧ್ಯಕ್ಷ ಹುದ್ದೆ ಸಿಕ್ಕ ಬಳಿಕ ಉಳಿದ ಹಣ ನೀಡುವಿರಂತೆ ಎಂದು ಒಪ್ಪಿಸಿದ್ದ.

ಮಾತುಕತೆಯ ಮರುದಿನವೇ ಇನಿತ್‌ಗೆ ಕರೆ ಮಾಡಿದ್ದ ಯುವರಾಜ್‌, ಕೇಂದ್ರ ಸಚಿವರ ಬಳಿ ಮಾತನಾಡಿದ್ದೇನೆ. ಶೀಘ್ರವೇ ನಿಮ್ಮ ಬಯೋಡೇಟಾ ಕಳುಹಿಸಿ ಎಂದಿದ್ದ. ಬಯೋಡೇಟಾ ಪಡೆದ ಬಳಿಕ ಪುನಃ ಕರೆ ಮಾಡಿದ್ದ ಆರೋಪಿ, ನಿಮ್ಮ ಹೆಸರು ಓಕೆ ಆಗಿದೆ. ನೀವು ತುರ್ತಾಗಿ 30 ಲಕ್ಷ ಕೊಡಿ ಎಂದು ತಿಳಿಸಿದ್ದ. ಇನಿತ್‌ ಮತ್ತು ಸ್ನೇಹಿತ ಸುರೇಶ್‌ ಜತೆ ತಾಜ್‌ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಯುವರಾಜನನ್ನು ಭೇಟಿಯಾಗಿ ಎರಡು ಲಕ್ಷ ಮುಂಗಡ ಹಣ ನೀಡಿದ್ದರು. ಬಳಿಕ ಹಂತ-ಹಂತವಾಗಿ 28 ಲಕ್ಷ ಹಾಕಿಸಿಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರವಿರಾಜ್‌ಗೆ ಸಿಸಿಬಿ ಗ್ರಿಲ್; ಹೊರಬಿತ್ತಾ ರಾಧಿಕಾ ಬಗ್ಗೆ ಎಕ್ಸ್‌ಕ್ಲೂಸಿವ್ ವಿಚಾರ..?

ಹಣ ಕೇಳಿದ್ರೆ, ಕೊಲೆ ಆಗುತ್ತೀಯಾ!

15 ದಿನಕ್ಕೆ ಸರ್ಕಾರದಿಂದ ಆದೇಶ ಪ್ರತಿ ಬರುತ್ತದೆ ಎಂದು ಯುವರಾಜ ಹೇಳಿದ್ದ. ಆದರೆ ಆದೇಶ ಪ್ರತಿ ಬರಲೇ ಇಲ್ಲ. ಯುವರಾಜ್‌ನನ್ನು ಇನಿತ್‌ ಸಂಪರ್ಕ ಮಾಡಿದಾಗ ಸಬೂಬು ಹೇಳುತ್ತಿದ್ದ. ಕೆಲಸ ಆಗುವುದಿಲ್ಲ ಎಂದು ತಿಳಿದು ಇನಿತ್‌ ಹಣ ಕೇಳಿದಾಗ, ‘ನಿನ್ನ ಬಳಿ ಹಣ ಪಡೆದಿರುವುದು ಹುದ್ದೆ ಕೊಡಿಸಲು ಅಲ್ಲ, ಮೋಸ ಮಾಡುವುದೇ ನನ್ನ ಉದ್ದೇಶ. ಇನ್ನೊಮ್ಮೆ ಹಣ ಕೇಳಿದರೆ ಕೊಲೆ ಮಾಡಿಸುತ್ತೇನೆ’ ಎಂದು ಯುವರಾಜ ಬೆದರಿಕೆವೊಡ್ಡಿದ್ದ. ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ ಬಳಿಕ ಈತ ಹಲವು ಮಂದಿಗೆ ವಂಚನೆ ಮಾಡಿರುವುದು ತಿಳಿಯಿತು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ವಿಮಾನ ಪ್ರಯಾ​ಣಕ್ಕೆ 8 ಕೋಟಿ ರು. ವೆಚ್ಚ!

ಯುವ​ರಾ​ಜ್‌ ವಿಮಾನದಲ್ಲಿ ಪ್ರಯಾ​ಣ ಮಾಡಿದ್ದಕ್ಕೆ ವೆಚ್ಚ ಮಾಡಿರುವುದು ಬರೋಬ್ಬರಿ 8 ಕೋಟಿ ರು. ಎಂಬ ಅಚ್ಚರಿಯ ವಿಷಯ ಸಿಸಿಬಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಕೇಂದ್ರ ಮತ್ತು ರಾಜ್ಯದ ಪ್ರಭಾವಿ ನಾಯ​ಕರು, ಸಚಿ​ವರು, ಬೆಂಗ​ಳೂರಿನಿಂದ ದೆಹ​ಲಿಗೆ ಹೋಗು​ವುದು ಅಥವಾ ದೆಹ​ಲಿ​ಯಿಂದ ಬೆಂಗ​ಳೂ​ರಿಗೆ ಬರುವ ಬಗ್ಗೆ ವಂಚಕ ಮಾಹಿ​ತಿ​ ಸಂಗ್ರ​ಹಿ​ಸು​ತ್ತಿದ್ದ. ಲಕ್ಷಾಂತರ ಹಣ ವ್ಯಯಿಸಿ ರಾಜಕೀಯ ನಾಯಕರ ಪಕ್ಕ​ದಲ್ಲೇ ಆಸನ ಕಾಯ್ದಿ​ರಿ​ಸು​ತ್ತಿದ್ದ. ಬಳಿಕ ಅವರ ಜತೆ ತಾನು ಸಂಘ-ಪರಿ​ವಾ​ರ​ದ ಕಾರ್ಯ​ಕ​ರ್ತ ಎಂದು ಕೆಲ ಫೋಟೋ​ಗ​ಳನ್ನು ತೆಗೆ​ಸಿ​ಕೊಂಡು ಮಾತಿ​ಗಿ​ಳಿ​ಯು​ತ್ತಿದ್ದ. ವಿಐಪಿ, ವಿವಿ​ಐ​ಪಿ​ಗಳ ಪಕ್ಕದ ಆಸ​ನ​ವನ್ನೇ ಕಾಯ್ದಿ​ರಿ​ಸ​ಲು ಇದು​ವ​ರೆಗೂ ಕೇವಲ ವಿಮಾ​ನ​ ಪ್ರ​ಯಾ​ಣಕ್ಕಾಗಿಯೇ ವಂಚಕ ಯುವರಾಜ 8 ಕೋಟಿ ವೆಚ್ಚ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ರಾಧಿ​ಕಾ ಕುಮಾ​ರ​ಸ್ವಾ​ಮಿ ಸಹೋ​ದರನ ವಿಚಾ​ರ​ಣೆ

ಭಾನು​ವಾ​ರ ಕೂಡ ನಟಿ ರಾಧಿಕಾ ಕುಮಾ​ರ​ಸ್ವಾಮಿ ಅವರ ಸಹೋ​ದರ ರವಿ​ರಾಜ್‌ ಮತ್ತು ಮಧ್ಯವರ್ತಿ ಯಾದವ್‌ನನ್ನು ಸಿಸಿಬಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸುಮಾರು ಆರು ತಾಸು ಇಬ್ಬ​ರನ್ನೂ ಪ್ರತ್ಯೇ​ಕ​ವಾಗಿ ವಿಚಾ​ರಣೆ ನಡೆ​ಸಿ​ದ್ದಾ​ರೆ. ರಾಧಿಕಾ ಕುಮಾರಸ್ವಾಮಿ ಮತ್ತು ಯುವರಾಜ್‌ನ ಮಧ್ಯಸ್ಥಿಕೆಯಲ್ಲಿ ಹಣಕಾಸಿನ ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲದೆ, ಯುವರಾಜ್‌ ಚಿತ್ರರಂಗದ ಹಲವರ ಜತೆ ವ್ಯವಹಾರ ನಡೆಸಿರುವ ಶಂಕೆ ಇದೆ. ಅಗತ್ಯ ಬಿದ್ದರೆ ನೋಟಿಸ್‌ ನೀಡಿ ಚಿತ್ರರಂಗದ ಕೆಲವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.