ಬೆಂಗಳೂರು(ನ.02): ಆನ್‌ಲೈನ್‌ ತರಗತಿ ಸಲುವಾಗಿ ಪೋಷಕರು ನೀಡಿದ್ದ ಮೊಬೈಲ್‌ ಬಳಸಿ ಇನ್‌ಸ್ಟಾಗ್ರಾಂನಲ್ಲಿ ತನ್ನ ಫೋಟೋ ಹಾಗೂ ವಿಡಿಯೋಗಳನ್ನು ಆಪ್‌ಲೋಡ್‌ ಮಾಡಿದ ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳು ದುಷ್ಕರ್ಮಿಗಳಿಂದ ಕಿರುಕುಳಕ್ಕೊಳಗಾಗಿರುವ ಘಟನೆ ಸಂಜಯನಗರದಲ್ಲಿ ನಡೆದಿದೆ.

ಈ ಬಗ್ಗೆ ಸಂಜಯನಗರ ಠಾಣೆ ಪೊಲೀಸರಿಗೆ ಸಂತ್ರಸ್ತೆ ವಿದ್ಯಾರ್ಥಿನಿಯ ಪೋಷಕರು ದೂರು ನೀಡಿದ್ದರು. ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿತ ಯುವಕರನ್ನು ಪತ್ತೆ ಹಚ್ಚಿ ಠಾಣೆ ಕರೆತಂದಿದ್ದಾರೆ. ಬಳಿಕ ಈ ರೀತಿ ಕಿಡಿಗೇಡಿಗಳಿಗೆ ಕೃತ್ಯ ನಡೆಸದಂತೆ ಮುಚ್ಚಳಿಕೆ ಬರೆಸಿಕೊಂಡು ಅವರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೊಟ್ಟೆ ಸರಿಯಾಗಿ ಬೆಂದಿಲ್ಲ; ಹೊಟೇಲ್ ಮಾಲಿಕನಿಗೆ ಚಾಕು ಇರಿದ!

ಸಂಜಯನಗರದಲ್ಲಿ ನೆಲೆಸಿರುವ ಬಾಲಕಿ, ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆನ್‌ಲೈನ್‌ನಲ್ಲಿ ಪಾಠ ಕೇಳಲು ಆಕೆಗೆ ತಂದೆ ಮೊಬೈಲ್‌ ಕೊಡಿಸಿದ್ದರು. ಆದರೆ ವಿದ್ಯಾರ್ಥಿನಿ, ಆ ಮೊಬೈಲ್‌ ಬಳಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆ ತೆರೆದಿದ್ದಾಳೆ. ಬಳಿಕ ತನ್ನ ಫೋಟೋ, ಡ್ಯಾನ್ಸ್‌ ವಿಡಿಯೋ ಅಪ್‌ಲೋಡ್‌ ಮಾಡಿದ್ದಳು. ಇವುಗಳನ್ನು ಗಮನಿಸಿದ ಸ್ಥಳೀಯ ಮೂವರು ಯುವಕರು, ಬಾಲಕಿಯ ಭಾವಚಿತ್ರ ಹಾಗೂ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ನಂತರ ಬಾಲಕಿಗೆ ಕರೆ ಮಾಡಿ ನಾವು ಹೇಳಿದಂತೆ ಕೇಳದಿದ್ದರೆ ವಿಡಿಯೋ ತಿರುಚಿ ಮಾನ ಕಳೆಯುತ್ತೇವೆ ಎಂದು ಬೆದರಿಸಿ ಕಿರುಕುಳ ನೀಡಲಾರಂಭಿಸಿದ್ದಾರೆ. ಕೊನೆಗೆ ಅ.30ರಂದು ಮನೆಯಿಂದ ಹೊರ ಬಂದು ತಾವು ಹೇಳಿದ ಜಾಗಕ್ಕೆ ಬರುವಂತೆ ತಾಕೀತು ಮಾಡಿದ್ದರು. ಆಗ ವಿಷಯ ತಿಳಿದ ಸಂತ್ರಸ್ತೆ ತಂದೆ, ತಮ್ಮ ಮನೆ ಬಳಿಗೆ ಬಂದ ಯುವಕರನ್ನು ಬೆನ್ನಹಟ್ಟಿಒಬ್ಬಾತನನ್ನು ಹಿಡಿದಿದ್ದಾರೆ.

ಬಳಿಕ ಸಂಜನಯಗರ ಪೊಲೀಸರಿಗೆ ಅವರು ಒಪ್ಪಿಸಿದ್ದಾರೆ. ಅಷ್ಟರಲ್ಲಿ ಓಡಿಹೋಗಿದ್ದ ಮೂವರು ಯುವಕರನ್ನು ಪತ್ತೆ ಹಚ್ಚಿ ಪೊಲೀಸರು ಕರೆ ತಂದಿದ್ದಾರೆ. ಬಳಿಕ ತಮ್ಮ ಮಕ್ಕಳನ್ನು ಪೊಲೀಸರು ಸೆರೆ ಹಿಡಿದಿರುವ ಮಾಹಿತಿ ತಿಳಿದು ಆರೋಪಿತ ಯುವಕರ ಪೋಷಕರು ಠಾಣೆಗೆ ಧಾವಿಸಿದ್ದಾರೆ. ಕೊನೆಗೆ ಯುವಕರು ಮತ್ತು ಅವರ ಪಾಲಕರು ತಪ್ಪೊಪ್ಪಿಗೆ ಮುಚ್ಚಳಿಕೆ ಬರೆದುಕೊಟ್ಟು ರಾಜೀ ಮಾಡಿಕೊಂಡಿದ್ದಾರೆ ಎಂದು ಸಂಜಯನಗರ ಪೊಲೀಸರು ತಿಳಿಸಿದ್ದಾರೆ.