Karnataka crime : ದೇವರಮನೆಗುಡ್ಡದಲ್ಲಿ ಬಂಟ್ವಾಳ ಮೂಲದ ಯುವಕನ ಶವ ಪತ್ತೆ
ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ದೇವರಮನೆ ಗುಡ್ಡದಲ್ಲಿ ಯುವಕನೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಬಂಟ್ವಾಳ ತಾಲೂಕು ಇರಾ ಗ್ರಾಮದ ಕಾಪಿಕಾಡ್ ನಿವಾಸಿ ಯುವಕನ ಮೃತದೇಹ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.
ಬಂಟ್ವಾಳ (ಜೂ.11): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ದೇವರಮನೆ ಗುಡ್ಡದಲ್ಲಿ ಯುವಕನೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಬಂಟ್ವಾಳ ತಾಲೂಕು ಇರಾ ಗ್ರಾಮದ ಕಾಪಿಕಾಡ್ ನಿವಾಸಿ ಯುವಕನ ಮೃತದೇಹ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರುಮನೆಯಲ್ಲಿ ಈ ಘಟನೆ ನಡೆದಿದ್ದು, ದೇವರುಮನೆ ಗುಡ್ಡದ ರಸ್ತೆ ತಿರುವಿನಲ್ಲಿ ಮೃತದೇಹ ಪತ್ತೆಯಾಗಿದೆ. ಇರಾ ಗ್ರಾಮದ ಕಾಪಿಕಾಡು ನಿವಾಸಿ ದಿವಂಗತ ಅಬ್ಬಾಸ್ ಎಂಬವರ ಪುತ್ರ ಸವಾದ್ (35) ಎಂಬಾತನ ಮೃತದೇಹ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಬಣಕಲ್ ಪೊಲೀಸರು ಪರಿಶೀಲಿಸಿದರು. ಅಲ್ಲದೆ ಸವಾದ್ ಕುಟುಂಬಸ್ಥರು ಹಾಗೂ ಊರವರು ಸ್ಥಳಕ್ಕೆ ತೆರಳಿದ್ದು ಮೃತದೇಹ ಸವಾದ್ ಅವರದ್ದೇ ಎಂದು ಗುರುತಿಸಿದ್ದಾರೆ.
ಏಳು ದಿನಗಳ ಹಿಂದೆ ಕಾಣೆಯಾಗಿದ್ದ ಕೃಷಿಕ; ಅರಣ್ಯಪ್ರದೇಶದಲ್ಲಿ ಮೃತದೇಹ ಪತ್ತೆ!
ಗಾಂಜಾ ವ್ಯವಹಾರದ ಕಾರಣಕ್ಕಾಗಿ ತಂಡದ ಯುವಕರ ಮಧ್ಯೆ ಯಾವುದೋ ಮನಸ್ತಾಪ ಉಂಟಾಗಿ ಈತನನ್ನು ಎಲ್ಲಿಯೋ ಕೊಲೆ ನಡೆಸಿ ಬಳಿಕ ಮೃತದೇಹದ ಗುರುತು ಸಿಗದಂತೆ ಮಾಡಿ ದೇವರಗುಡ್ಡದಲ್ಲಿ ಕೊಂಡು ಹೋಗಿ ಎಸೆದಿರುವ ಸಾಧ್ಯತೆ ಬಗ್ಗೆ ಶಂಕಿಸಲಾಗಿದೆ.
ಮೃತ ಸವಾದ್ ಪುದು ಗ್ರಾಮದ ಯುವತಿಯನ್ನು ವಿವಾಹವಾಗಿದ್ದು, ಒಂದು ಮಗುವಿದೆ ಎನ್ನಲಾಗಿದ್ದು, ಈತನ ಗಾಂಜಾ ವ್ಯಸನದಿಂದಾಗಿಯೇ ಪತ್ನಿಯೂ ದೂರವಾಗಿದ್ದಳು ಎಂದು ತಿಳಿದು ಬಂದಿದೆ.
ಅಪರಿಚಿತ ಶವ ಪತ್ತೆ
ಶ್ರೀರಂಗಪಟ್ಟಣ: ತಾಲೂಕಿನ ಪಂಪ್‌ಹೌಸ್ ಸರ್ಕಲ… ಬಳಿ ಇರುವ ಬಸ್ ನಿಲ್ದಾಣದ ಹಿಂಭಾಗ ಸುಮಾರು 40 ವರ್ಷದ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ ಬಲಗೈ ತೋಳಿನ ಮೇಲೆ ಗೂಳಿ ಚಿತ್ರವಿದೆ. ಸುಮಾರು 5 ಅಡಿ ಎತ್ತರವಿದ್ದು, ಕಪ್ಪು ಬಣ್ಣ ಹೊಂದಿದ್ದು, ಕೋಲು ಮುಖ, ಕರಚಲು ಗಡ್ಡವಿದ್ದು, ಕಪ್ಪು ಬಣ್ಣದ ಪ್ಯಾಚ್ ಧರಿಸಿದ್ದು, ಮೇಲ್ನೋಟಕ್ಕೆ ಬಿಕ್ಷುಕನಂತೆ ಕಂಡು ಬಂದಿದ್ದಾನೆ. ಶವವನ್ನು ಮೈಸೂರು ಕೆ.ಆರ್.ಆಸ್ಪತ್ರೆ ಶವಗಾರದಲ್ಲಿರಿಸಲಾಗಿದೆ. ಸಂಬಂಧಿಕರಿದ್ದಲ್ಲಿ ಕೆಆರ್‌ಎಸ್ ಪೊಲೀಸ್ ಠಾಣೆ ದೂ-08236-200600 ಅಥವಾ ಮೊ-9480804856 ಸಂಪರ್ಕಿಸಬಹುದು.
ಗೃಹಣಿ ನಾಪತ್ತೆ ದೂರು ದಾಖಲು
ಶ್ರೀರಂಗಪಟ್ಟಣ: ತಾಲೂಕಿನ ಹುಲಿಕೆರೆ ಗ್ರಾಮದ ಗೃಹಿಣಿ ನಾಪತ್ತೆಯಾಗಿರುವ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಸೀನ್ ತಾಜ… (40) ಕಳೆದ ಜೂ.4 ರಂದು ರಾತ್ರಿ ಮನೆಯಿಂದ ಹೊರ ಹೋದವರು ಮರಳಿ ಮನೆ ಬಂದಿಲ್ಲ. ಇವರನ್ನು ಹುಡುಕಿಕೊಡುವಂತೆ ಪತಿ ಇಮ್ರಾನ್‌ಖಾನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತಾಸೀನ್ ತಾಜ್ 5 ಅಡಿ, ಬಿಳಿಬಣ್ಣ ಬಣ್ಣ, ಕೆಂಪು ಬಣ್ಣದ ಚೂಡಿದಾರ್ ಮತ್ತು ಬುರ್ಖಾ ಧರಿಸಿದ್ದು ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೆ.ಆರ್. ಸಾಗರ ಪೊಲೀಸ್ ಠಾಣೆ ದೂ-08236-200600 ಅಥವಾ ಮೊ-9480804856 ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.