ಅಕ್ರಮ ಸಂಬಂಧ: ನಾದಿನಿ ಕತ್ತು ಹಿಸುಕಿ ಹತ್ಯೆಗೈದ ಭಾವ..!
ನಾದಿನಿ ಕೊಲೆ ಮಾಡಿದ ಭಾವ| ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಗುಂಡೇನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ-4 ರ ಸಮೀಪದಲ್ಲಿ ನಡೆದ ಘಟನೆ| ಈ ಸಂಬಂಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ದಾಬಸ್‌ಪೇಟೆ(ಜೂ.27): ಸ್ವಂತ ಭಾವನಿಂದಲೇ ನಾದಿನಿಯ ಕೊಲೆಯಾಗಿರುವ ದುರ್ಘಟನೆ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಗುಂಡೇನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ-4 ರ ಸಮೀಪದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬಿಜ್ಜನಬೆಳ್ಳ ಗ್ರಾಮದ ಗರುಡಪ್ಪ ಎಂಬುವವರ ಮಗಳಾದ ದೀಪಾ (22) ಕೊಲೆಯಾದ ಯುವತಿ. ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಆರೋಪಿ ಬಂಧನ:
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ನರಸಾಪುರದ ಗಂಗರಾಮಯ್ಯನವರ ಮಗ ಗಿರೀಶ್ (38) ಕೊಲೆ ಮಾಡಿದ ಆರೋಪಿ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಘಟನೆಯ ವಿವರ:
ಕೊಲೆಯಾದ ದೀಪಾಳ ಅಪ್ಪನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಮೊದಲನೆಯವಳು ಲಕ್ಷ್ಮಿ ಎಂಬಾಕೆಯನ್ನು ಗಿರೀಶ್ ಮದುವೆಯಾಗಿದ್ದು, ಇವರು ಆಂಧರಹಳ್ಳಿಯಲ್ಲಿ ವಾಸವಾಗಿದ್ದರು. ಇವರ ಮನೆಯಲ್ಲಿ ಕಳೆದ ಎಂಟು ವರ್ಷಗಳಿಂದ ದೀಪಾ ವಾಸವಾಗಿದ್ದು, ಈಕೆ ಮೆಡಿಕಲ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ಯಾದಗಿರಿ: ಹಾಡಹಗಲೇ ಜಿಲ್ಲಾ ಪಂಚಾಯ್ತಿ ಸದಸ್ಯನ ಕೊಲೆಗೆ ಯತ್ನ, ಬೆಚ್ಚಿಬಿದ್ದ ಜನತೆ
ಅನೈತಿಕ ಸಂಬಂಧ:
ದೀಪಾಳ ಅಕ್ಕ ಲಕ್ಷ್ಮೀಯ ಪತಿ ಗಿರೀಶ್ ಹಾಗೂ ದೀಪಾಳಿಗೂ ಕಳೆದ ಮೂರು ವರ್ಷಗಳಿಂದ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ದೀಪಾಳಿಗೆ ಜೂ.14ರಂದು ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೀಪಾಳಿಗೆ ಮದುವೆಯಾದರೆ ತನಗೆ ಸಿಗುವುದಿಲ್ಲ.
ಜೂ.10ರಂದು ಬೆಳಗ್ಗೆ ಸುಮಾರು 5.30ರಲ್ಲಿ ದೀಪಾ ಹಾಗೂ ಗಿರೀಶ್ ಬೇರೆ ಬೇರೆ ದ್ವಿಚಕ್ರ ವಾಹನದಲ್ಲಿ ಊರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಇಬ್ಬರಿಗೂ ಜಗಳವಾಗಿದೆ. ಸೋಂಪುರ ಹೋಬಳಿಯ ಗುಂಡೇನಹಳ್ಳಿ ಸಮೀಪ ಬೈಕ್ ನಿಲ್ಲಿಸಿ ಜಗಳವಾಡುತ್ತಿದ್ದಾಗ ಗಿರೀಶ್ ದೀಪಾಳ ಮುಖಕ್ಕೆ ಹೊಡೆದಿದ್ದಾನೆ. ತಕ್ಷಣ ಆಕೆ ಮೂರ್ಚೆ ಬಿದ್ದಿದ್ದಾಳೆ. ನಂತರ ಅವಳ ಕತ್ತಿಗೆ ವೇಲ್ ಹಾಕಿ ಕತ್ತು ಹಿಸುಕಿ ಸಾಯಿಸಿ ರಸ್ತೆ ಪಕ್ಷದಲ್ಲೇ ಇದ್ದ ಹಳ್ಳಕ್ಕೆ ಎಸೆದು ಹೋಗಿದ್ದಾನೆ.
ನಂಬಿಸುವ ನಾಟಕ
ನಂತರ ಮನೆಗೆ ಹೋದ ಮೇಲೆ ಅವಳು ಬೈಕ್‌ನಲ್ಲಿ ವೇಗವಾಗಿ ಮುಂದೆ ಬಂದಳು ಎಂದು ನಾಟಕವಾಡಿದ್ದಾನೆ. ತನಗೆ ಏನೂ ಗೊತ್ತಿಲ್ಲವೆಂದೂ ನಾಟಕವಾಡಿ ಮನೆಯವರನ್ನು ನಂಬಿಸಿದ್ದಾನೆ. ನಂತರ ಮನೆಯವರು ಈತನ ಮಾತನ್ನು ನಂಬಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೂ ಪತ್ತೆಯಾಗಿಲ್ಲ. ಕೊಲೆ ಮಾಡಿದ ಎರಡು ದಿನಕ್ಕೆ ಕೊಲೆ ಮಾಡಿದ ಸ್ಥಳಕ್ಕೆ ಬಂದು ಮೃತ ದೇಹ ನೋಡಿ ಭಯಗೊಂಡು ನಂತರ ಸ್ನೇಹಿತರಿಗೆ ಹಾಗೂ ಮನೆಯವರಿಗೆ ಈ ವಿಷಯ ತಿಳಿಸಿದ್ದಾನೆ.
ದೂರು ದಾಖಲು:
ಇದರಿಂದ ಭಯಗೊಂಡ ಆರೋಪಿ ಗಿರೀಶ್ ಹಾಗೂ ದೀಪಾಳ ತಂದೆ ಜೂ.25ರಂದು ದಾಬಸ್‌ಪೇಟೆ ಪೊಲೀಸ್ ಠಾಣೆಗೆ ಬಂದು ತನ್ನ ನಾದಿನಿ ಜೂ.10ರಿಂದ ಕಾಣುತ್ತಿಲ್ಲ. ಆಕೆಯನ್ನು ಸೋಂಪುರ ಹೋಬಳಿಯ ಗುಂಡೇನಹಳ್ಳಿ ದುಷ್ಕರ್ಮಿಗಳು ಕೊಲೆ ಮಾಡಿ ಹಳ್ಳಕ್ಕೆ ಎಸೆದು ಹೋಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.
ಕೊಲೆ ಮಾಡಿದೆನೆಂದು ಒಪ್ಪಿಗೆ:
ಡಿವೈಎಸ್‌ಪಿ, ಸಬ್‌ಇನ್ಸ್‌ಪೆಕ್ಟರ್ ಸೇರಿದಂತೆ ದಾಬಸ್‌ಪೇಟೆ ಪೊಲೀಸರು ಅನುಮಾನಗೊಂಡು ಆತನನ್ನು ವಿಚಾರಣೆ ನಡೆಸಿದಾಗ, ಆತ ತಾನೇ ಕೊಲೆ ಮಾಡಿರುವುದಾಗಿ ಸತ್ಯ ಒಪ್ಪಿಕೊಂಡಿದ್ದಾನೆ. ಆತನಿಗೆ ಕೊಲೆಗೆ ಸಹಕರಿಸಿದ ಮೂವರನ್ನು ದಾಬಸ್‌ಪೇಟೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಪ್ಪಿಸಿದ್ದಾರೆ.
ಸದ್ಯ ಮೃತ ದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿವಣ್ಣ ನೇತೃತ್ವದಲ್ಲಿ ತನಿಖಾ ಕಾರ್ಯ ಆರಂಭವಾಗಿದ್ದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಬೆಂ.ಗಾ ಪೊಲೀಸರ ಭೇಟಿ:
ಜಿಲ್ಲಾ ಎಸ್.ಪಿ. ರವಿ ಡಿ.ಚನ್ನಣ್ಣನವರ್, ಡಿವೈಎಸ್‌ಪಿ ಮೋಹನ್‌ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಶಿವಣ್ಣ, ಪಿಎಸ್‌ಐ ವಸಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.