ಮಾಗಡಿ(ಜೂ.01): ಮಹಿಳೆಯೊಬ್ಬಳು ಅನುಮಾನಾಸ್ವದಕವಾಗಿ ಸಾವನ್ನಪಿರುವ ಘಟನೆ ಚನ್ನಗೌಡನ ಪಾಳ್ಯದ ಬಳಿ ನಡೆದಿದೆ. ತಾಲೂಕಿನ ಮತ್ತಿಕೆರೆ ಗ್ರಾಪಂ ವ್ಯಾಪ್ತಿಯ ಚನ್ನಗೌಡನಪಾಳ್ಯದ ನಿವಾಸಿ ಮುರುಳಿ ಎಂಬುವವರ ಪತ್ನಿ ರಮ್ಯಾ (27) ಮೃತರು.

ಶನಿವಾರ ತಮ್ಮ ಜಮೀನಿನ ಬಳಿ ಹಸುಗಳನ್ನು ಮೇಯಿಸಲು ತೆರಳಿದ್ದು ಸಂಜೆಯಾದರೂ ಸಹ ರಮ್ಯಾ ಮನೆಗೆ ಹಿಂದಿ​ರು​ಗಿ​ರ​ಲಿಲ್ಲ. ಈ ಹಿನ್ನೆ​ಲೆ​ಯಲ್ಲಿ ಹೊಲ ಸೇರಿದಂತೆ ಸಂಬಂಧಿಕರ ಮನೆಗಳಲ್ಲಿ ರಾತ್ರಿ ಇಡೀ ಪತಿ ಮುರುಳಿ ಹಾಗೂ ಇತರರು ಹುಡುಕಾಡಿದರೂ ರತ್ತೆಯಾಗಿರಲಿಲ್ಲ.

ಮಣ್ಣಿನ ಗುಡ್ಡೆಯಲ್ಲಿ ಶವ

ಭಾನುವಾರ ಬೆಳಗ್ಗೆ ಮುರುಳಿ ಅವರ ಹೊಲದ ಸಮೀಪ ಇರುವ ಮಾವಿನ ತೋಪಿನ ಮಣ್ಣು ಗುಡ್ಡೆಯಲ್ಲಿ ರಮ್ಯಾಳ ನೈಟಿ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ ಮಣ್ಣಿನ ಗುಡ್ಡೆಯಲ್ಲಿ ರಮ್ಯಾಳ ಶವ ಪತ್ತೆಯಾಗಿದೆ.

ಮದುವೆ ವಿಚಾರ: ಕಾರಿನಲ್ಲಿ ಕರೆದುಕೊಂಡು ಹೋಗಿ ವೃದ್ಧನ ಹತ್ಯೆ

ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ದಾಕ್ಷಾಯಿಣಿ ಸ್ಥಳಕ್ಕೆ ಭೇಟಿ ನೀಡಿ ಶವ ಮೇಲಕ್ಕೆತ್ತಲು ಅನುಮತಿ ನೀಡಿದ ನಂತರ ಮಣ್ಣಿನ ಗುಡ್ಡೆಯಿಂದ ಹೊರ ತೆಗೆದ ಸಮಯದಲ್ಲಿ ರಮ್ಯಾಳ ಮುಖಕ್ಕೆ ಟವಲ್‌ ನಿಂದ ಮುಚ್ಚಿ ಕುತ್ತಿಗೆಯನ್ನು ತಂತಿಯಿಂದ ಬಿಗಿದು ಕೊಲೆ ಮಾಡಿರುವುದು ಕಂಡು ಬಂದಿದೆ.

ಆಸ್ತಿಗಾಗಿ ಪತ್ನಿಗೆ ಕಿರುಕುಳ

ಮೃತಳು ನೆಲಮಂಗಲ ತಾಲೂಕಿನ ಭಟ್ಟರಹಳ್ಳಿ ಗ್ರಾಮದವಳಾಗಿದ್ದು ಕಳೆದ 7 ವರ್ಷದ ಹಿಂದೆ ಮುರುಳಿಯೊಂದಿಗೆ ವಿವಾಹವಾಗಿತ್ತು. ಈ ದಂಪತಿಗೆ 4 ವರ್ಷದ ಹೆಣ್ಣು, 2 ವರ್ಷದ ಗಂಡು ಮಗುವಿದೆ. ರಮ್ಯಳ ತಾಯಿ ಗಂಗಲಕ್ಷಮ್ಮರಿಗೆ ನಾಲ್ಕು ಹೆಣ್ಣು ಮಕ್ಕಳಿದ್ದು ಭಟ್ಟರಹಳ್ಳಿ ಗ್ರಾಮದಲ್ಲಿ ಜಮೀನು ಇದೆ. ಇವರಿಗೆ ಗಂಡು ಮಕ್ಕಳು ಹಾಗೂ ಪತಿ ಇಲ್ಲದ ಕಾರಣ ಮುರುಳಿ ತನ್ನ ಪತ್ನಿ ರಮ್ಯಳಿಗೆ ಜಮೀನು ಪಡೆಯುವಂತೆ ಸಾಕಷ್ಟು ಬಾರಿ ಕಿರುಕುಳ ನೀಡುತ್ತಿದ್ದು ಈ ಬಗ್ಗೆ ಹಲವು ಸಲ ನ್ಯಾಯ ಪಂಚಾಯ್ತಿ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ.

ಆರೋಪಿ ಪತಿಯ ಬಂಧನ

ತಾಯಿ ಮನೆಯಿಂದ ವರದಕ್ಷಿಣೆ ಹಾಗೂ ಜಮೀನನ್ನು ತೆಗೆದುಕೊಂಡು ಬರುವಂತೆ ಮುರುಳಿ ನನ್ನ ಮಗಳಿಗೆ ಭಾರಿ ಚಿತ್ರಹಿಂಸೆ ನೀಡುತ್ತಿದ್ದನು. ನನ್ನ ಮಗಳನ್ನು ಮುರುಳಿಯೆ ಕೊಲೆ ಮಾಡಿದ್ದಾನೆ ಎಂದು ರಮ್ಯಾ ತಾಯಿ ಗಂಗಲಕ್ಷ್ಮಮ್ಮ ಪೊಲೀಸ್‌ ಠಾಣೆಯಲ್ಲಿ ದೂರು ದಾಖ​ಲಿ​ಸಿದ್ದು, ಪೊಲೀಸರು ಮುರುಳಿಯನ್ನು ವಶಕ್ಕೆ ಪಡೆದಿದ್ದಾರೆ.

ಮರಣೋತ್ತರ ಪರಿಕ್ಷೆಗಾಗಿ ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ತಹಸೀಲ್ದಾರ್‌ ಬಿ.ಜಿ.ಶ್ರೀನಿವಾಸ್‌ ಪ್ರಸಾದ್‌, ಡಿವೈಎಸ್ಪಿ ಓಂಪ್ರಕಾಶ್‌, ಪಿಎಸ್‌ಐ ವೆಂಕಟೇಶ್‌, ಎಎಸ್‌ಐ ಮಲ್ಲೇಶ್‌, ಮಂಜುನಾಥ್‌, ರಾಜಣ್ಣ ಹಾಜ​ರಿ​ದ್ದರು.