ವಿಜಯಪುರ(ಮೇ.31): ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ವೃದ್ಧನೊಬ್ಬನನ್ನು ಕೊಲೆ ಮಾಡಿದ ಘಟನೆ ನಗರದ ಸಾಯಿ ಪಾರ್ಕ್ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಜಲ ನಗರ ನಿವಾಸಿ ಉಸ್ಮಾನಪಾಶಾ ಇನಾಮದಾರ (71) ಕೊಲೆಗೀಡಾದ ವೃದ್ಧ. 

ಮುಶ್ರೀಫ್‌ ಕಾಲೋನಿಯ ಜಿಲಾನಿಪಾಶಾ ಜಾಗೀರದಾರ (45), ನದೀಂ ಜಾಗೀರದಾರ (40) ಖಾದ್ರಿ ಜಾಗೀರದಾರ (38) ಎಂಬಾತರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿತರು ಕೊಲೆಯಾದ ವೃದ್ಧನ ಅಕ್ಕನ ಮಕ್ಕಳಾಗಿದ್ದಾರೆ. ಆರೋಪಿಗಳ ಸಹೋದರ ಜಮೀಲ್‌ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಗಿತ್ತು. ಕೊಲೆಗೀಡಾದ ವೃದ್ಧ ಜಮೀಲ್‌ ಪರವಾಗಿ ಮಾತನಾಡಿದ್ದಕ್ಕೆ ಜಮೀಲ್‌ನ ಸಹೋದರರು ವೃದ್ಧನನ್ನು ಶುಕ್ರವಾರ ರಾತ್ರಿ ಸಾಯಿಪಾರ್ಕ್ ಬಡಾವಣೆಯ ಹಿಟ್ಟಿನಗಿರಣಿ ಎದುರು ಬಂದು ಕಾರಿನಲ್ಲಿ ಎಳೆದುಕೊಂಡು ಹೋಗಿ ಕೊಲೆ ಮಾಡಿ ನಗರ ಹೊರ ವಲಯದ ಬಾರಾಕುಟ್ರಿ ತಾಂಡಾದ ಹತ್ತಿರ ರಸ್ತೆ ಬದಿಗೆ ಶವವನ್ನು ಎಸೆದು ಹೋಗಿದ್ದಾರೆ ಎಂದು ಕೊಲೆಗೀಡಾದ ವೃದ್ಧನ ಪುತ್ರ ಮಹ್ಮದಯುನಿಸ್‌ ಜಲ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಮದುವೆಗೆ ನಿರಾಕರಣೆ: ಯುವತಿಯ ಮೇಲೆ ಪಾಗಲ್‌ ಪ್ರೇಮಿಯಿಂದ ಮಚ್ಚಿನಿಂದ ಹಲ್ಲೆ

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಿನಾರಾಯಣ, ಸಿಪಿಐ ಬಸವರಾಜ ಮುಕಾರ್ತಿಹಾಳ, ಪಿಎಸ್‌ಐ ರಾಯಗೊಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ. ಈ ಕುರಿತು ಜಲ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.