ಬೆಂಗಳೂರು(ಮಾ.05): ದುಷ್ಕರ್ಮಿಗಳು ಮನೆಗೆ ನುಗ್ಗಿ ಏಕಾಂಗಿಯಾಗಿದ್ದ ವೃದ್ಧೆಯನ್ನು ಕೊಂದು ಚಿನ್ನಾಭರಣ ದೋಚಿರುವ ಘಟನ ಅಶೋಕ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಆನೇಪಾಳ್ಯದಲ್ಲಿ ಗುರುವಾರ ನಡೆದಿದೆ.

ಆನೇಪಾಳ್ಯದ ನಿವಾಸಿ ದಿಲ್ಷಾನ್‌ ಭಾನು (62) ಕೊಲೆಯಾದ ದುರ್ದೈವಿ. ಕೆಲಸದ ನಿಮಿತ್ತ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಹೋಗಿದ್ದ ಮೃತರ ಪುತ್ರ ಮಧ್ಯಾಹ್ನ 2 ಗಂಟೆಗೆ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಪ್ಪಳ; 2 ಅಫೇರ್... ಸರಸಕ್ಕೆ ಅಡ್ಡಿಯಾದ ಮಗನನ್ನೆ ಹತ್ಯೆ ಮಾಡಿಸಿದ ಮಹಾತಾಯಿ!

ಆನೇಪಾಳ್ಯದಲ್ಲಿ ತಮ್ಮ ಪುತ್ರನ ಕುಟುಂಬದ ಜತೆ ಭಾನು ನೆಲೆಸಿದ್ದರು. ಟೆಂಪೋ ಚಾಲಕನಾಗಿರುವ ಅವರ ಮಗ, ಹಿರಿಸಾವೆಗೆ ತೆಂಗಿನ ಕಾಯಿ ಸಾಗಾಣಿಕೆಗೆ ತೆರಳಿದ್ದರು. ಅವರ ಸೊಸೆ ಮತ್ತು ಮೊಮ್ಮಕ್ಕಳು, ಕೊರಟೆಗೆರೆ ತಾಲೂಕಿನಲ್ಲಿರುವ ತವರು ಮನೆಗೆ ಹೋಗಿದ್ದರು. ಈ ಸಮಯ ನೋಡಿಕೊಂಡ ದುಷ್ಕರ್ಮಿಗಳು, ಭಾನು ಅವರ ಮನೆಗೆ ಗುರುವಾರ ಬೆಳಗ್ಗೆ ಬಂದಿದ್ದಾರೆ. ಬಳಿಕ ಉಸಿರುಗಟ್ಟಿಸಿ ಅವರನ್ನು ಹತ್ಯೆಗೈದು ಬಳಿಕ ಮನೆಯಲ್ಲಿದ್ದ ಚಿನ್ನದ ಬಳೆ, ಓಲೆ ಸೇರಿದಂತೆ ಇತರೆ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಹಿರಿಸಾವೆಯಿಂದ ಮರಳಿದ ಮೃತ ಪುತ್ರ, ಮನೆಯಲ್ಲಿ ಪ್ರಜ್ಞಾಹೀನಾರಾಗಿ ಬಿದ್ದಿದ್ದ ತಾಯಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು, ಭಾನು ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.