ಬೆಂಗಳೂರು(ನ.01):  ತನ್ನ ಅಕ್ಕನನ್ನು ಅಲಕ್ಷ್ಯ ಮಾಡಿ ಎರಡನೇ ಪತ್ನಿ ಜತೆ ಭಾವ ಸಂಸಾರ ನಡೆಸುತ್ತಾನೆ ಎಂದು ಕೋಪಗೊಂಡ ಬಾಮೈದ, ಭಾವನ ಎರಡನೇ ಪತ್ನಿಯನ್ನು ಭೀಕರವಾಗಿ ಕೊಂದಿರುವ ಘಟನೆ ಕೆ.ಆರ್‌.ಪುರ ಸಮೀಪ ಶನಿವಾರ ನಡೆದಿದೆ.

ಮೇಡಹಳ್ಳಿ ಹತ್ತಿರದ ಮಂಜುನಾಥ ನಗರದ ನಿವಾಸಿ ಶೈಲಶ್ರೀ (28) ಹತ್ಯೆಯಾದ ದುರ್ದೈವಿ. ಈ ಪ್ರಕರಣದ ಸಂಬಂಧ ಆರೋಪಿ ಶ್ರೀಕಂಠನನ್ನು ಪೊಲೀಸರು ಬಂಧಿಸಿದ್ದಾರೆ. ಮೇಡಹಳ್ಳಿಯ ಹರ್ಷ, ಸಣ್ಣ ಮಟ್ಟದಲ್ಲಿ ಫೈನಾನ್ಸ್‌ ವ್ಯವಹಾರ ನಡೆಸುತ್ತಾನೆ. 4 ವರ್ಷಗಳ ಹಿಂದೆ ಚೈತ್ರಾ ಜತೆ ಮದುವೆಯಾದ ಆತ, ಆನಂತರ ನಾಲ್ಕೇ ತಿಂಗಳಲ್ಲಿ ತನ್ನ ಆಪ್ತ ಗೆಳೆಯನ ಸೋದರಿ ಶೈಲಶ್ರೀ ಜತೆ ಮತ್ತೊಂದು ಬಾರಿಗೆ ಸಪ್ತಪದಿ ತುಳಿದ. ಎರಡನೇ ವಿವಾಹದ ವಿಚಾರ ತಿಳಿದ ಬಳಿಕ ಚೈತ್ರಾ ಮತ್ತು ಹರ್ಷ ಮಧ್ಯೆ ಭಿನ್ನಾಭಿಪ್ರಾಯ ಮೂಡಿದ್ದವು. ಆದರೆ ಕುಟುಂಬದ ಹಿರಿಯರು ರಾಜಿ ಸಂಧಾನ ಮೂಲಕ ಸಮಸ್ಯೆ ಬಗೆಹರಿಸಿದ್ದರು. ಈ ಇಬ್ಬರು ಪತ್ನಿಯರಿಂದಲೂ ಸಂತಾನ ಪಡೆದ ಹರ್ಷ, ಇತ್ತೀಚಿನ ದಿನಗಳಲ್ಲಿ ಎರಡನೇ ಪತ್ನಿ ಮನೆಯಲ್ಲಿ ನೆಲೆಗೊಂಡಿದ್ದ. ಇದೂ ಚೈತ್ರಾ ಹಾಗೂ ಆಕೆಯ ಕುಟುಂಬದವರಲ್ಲಿ ಕೋಪಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮತ್ತೆ ಹರಿಯಿತು ನೆತ್ತರು: ಚಾಕುವಿನಿಂದ ಇರಿದು ನಿವೃತ್ತ ಪ್ರೊಫೆಸರ್‌ ಬರ್ಬರ ಕೊಲೆ

ತನ್ನ ಅಕ್ಕಳಿಗೆ ಭಾವನಿಂದ ಅನ್ಯಾಯವಾಗಿದೆ. ಇದಕ್ಕೆ ಶೈಲಶ್ರೀಯೇ ಕಾರಣವಾಗಿದ್ದಾಳೆ ಎಂದೂ ಶ್ರೀಕಂಠ ಕೆರಳಿದ್ದ. ಶನಿವಾರ ಶೈಲಶ್ರೀ ಮನೆಗೆ ತೆರಳಿದ್ದಾನೆ. ಆದರೆ ಆ ವೇಳೆ ಹರ್ಷ ಮನೆಯಿಂದ ಹೊರ ಹೋಗಿದ್ದ. ಶೈಲಶ್ರೀ ಮೇಲೆ ಬಾಯಿಗೆ ಬಂದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಶ್ರೀಕಂಠ ಗಲಾಟೆ ಮಾಡಿದ್ದಾನೆ. ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಕುತ್ತಿಗೆ ವೈರ್‌ನಿಂದ ಬಿಗಿದು ಶೈಲಳನ್ನು ಆರೋಪಿ ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಕೃತ್ಯ ನಡೆದ ಕೆಲವೇ ತಾಸುಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಕೆ.ಆರ್‌.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.