ಬೆಂಗಳೂರು: ಚಾಲಕನ ದುರ್ವರ್ತನೆಗೆ ಹೆದರಿ ಆಟೋದಿಂದ ಜಿಗಿದ ಮಹಿಳೆ!
ನಿಮ್ಮ ಪತ್ನಿಗೆ ಆದ ಅನಾನುಕೂಲಕ್ಕೆ ಕ್ಷಮೆ ಕೋರುವುದಾಗಿ ತಿಳಿಸಿದ್ದಾರೆ. ಆ ಆಟೋ ಚಾಲಕನನ್ನು ನಮ್ಮ ಆ್ಯಪ್‌ನಿಂದ ಅಮಾನತು ಮಾಡುವುದಾಗಿ ಭರವಸೆ ನೀಡಿದ ನಮ್ಮ ಯಾತ್ರಿ ಆ್ಯಪ್
ಬೆಂಗಳೂರು(ಜ.04): 'ನಮ್ಮ ಯಾತ್ರಿ ಆ್ಯಪ್' ಮುಖಾಂತರ ಬುಕ್ ಮಾಡಿದ್ದ ಆಟೋದ ಚಾಲಕ ಮದ್ಯದ ಅಮಲಿನಲ್ಲಿ ತಪ್ಪಾದ ಜಾಗಕ್ಕೆ ಕರೆದೊಯ್ಯುವಾಗ ಆತಂಕಗೊಂಡ ಮಹಿಳೆ ಮಾರ್ಗ ಮಧ್ಯೆ ಚಲಿಸುತ್ತಿದ್ದ ಆಟೋದಿಂದ ಜಿಗಿದು ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಗುರುವಾರ ರಾತ್ರಿ ಸುಮಾರು 9 ಗಂಟೆಗೆ ಹೆಬ್ಬಾಳದ ವೀರಣ್ಣಪಾಳ್ಯ ಬಳಿ ಈ ಘಟನೆ ನಡೆದಿದೆ.
ಈ ಸಂಬಂಧ ಮಹಿಳೆಯ ಪತಿ ಅಜಾರ್ ಖಾನ್ ಎಂಬುವವರು ತಮ್ಮ 'ಎಕ್ಸ್' ಖಾತೆಯಲ್ಲಿ ಘಟನೆ ಕುರಿತು ಬರೆದುಕೊಂಡಿದ್ದು, ಜತೆಗೆ ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. 'ನನ್ನ ಪತ್ನಿ ಗುರುವಾರ ರಾತ್ರಿ ಹೊರಮಾವುನಿಂದ ಥಣಿಸಂದ್ರಕ್ಕೆ ನಮ್ಮ ಯಾತ್ರಿ ಆ್ಯಪ್ ಮುಖಾಂತರ ಆಟೋ ಬುಕ್ ಮಾಡಿದ್ದರು. ಆದರೆ, ಪಾನಮತ್ತ ಆಟೋ ಚಾಲಕ ನನ್ನ ಪತ್ನಿ ಪ್ರಯಾಣಿಸುವಾಗ ಸರಿಯಾದ ಲೊಕೇಶನ್‌ಗೆ ಬರುವ ಬದಲು ತಪ್ಪಾದ ಲೊಕೇಶನ್ ಕಡೆಗೆ ಆಟೋ ಚಲಾಯಿಸಿದ್ದಾನೆ. ಈ ವೇಳೆ ಆಕೆ ಆಟೋ ನಿಲ್ಲಿಸುವಂತೆ ಹಲವು ಬಾರಿ ಸೂಚಿಸಿದರೂ ನಿಲ್ಲಿಸದೆ ತಪ್ಪು ಮಾರ್ಗದಲ್ಲೇ ಚಲಾಯಿಸಲು ಮುಂದಾಗಿದ್ದಾನೆ. ಆಗ ನನ್ನ ಪತ್ನಿ ಚಲಿಸುತ್ತಿದ್ದ ಆಟೋದಿಂದ ಜಿಗಿದು ಪಾರಾಗಿದ್ದಾರೆಂದು ಬರೆದುಕೊಂಡಿದ್ದಾರೆ.
ಇದಕ್ಕೆ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ನಗರ ಪೊಲೀಸರು, ನಿಮ್ಮ ಸಂಪರ್ಕ ಸಂಖ್ಯೆ ಹಾಗೂ ಆಟೋ ವಿವರ ನೀಡುವಂತೆ ಅಜಾರ್ ಖಾನ್‌ನನ್ನು ಕೇಳಿದ್ದಾರೆ. ಆಟೋ ಹಾಗೂ ಚಾಲಕನ ಮಾಹಿತಿ ಸಂಗ್ರಹಿಸಿರುವ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಕ್ಷಮೆ ಕೇಳಿದ ನಮ್ಮ ಯಾತ್ರಿ ಆ್ಯಪ್:
ನಮ್ಮ ಯಾತ್ರಿ ಆ್ಯಪ್‌ನವರು ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿ, ನಿಮ್ಮ ಪತ್ನಿಗೆ ಆದ ಅನಾನುಕೂಲಕ್ಕೆ ಕ್ಷಮೆ ಕೋರುವುದಾಗಿ ತಿಳಿಸಿದ್ದಾರೆ. ಆ ಆಟೋ ಚಾಲಕನನ್ನು ನಮ್ಮ ಆ್ಯಪ್‌ನಿಂದ ಅಮಾನತು ಮಾಡುವುದಾಗಿ ಭರವಸೆ ನೀಡಿದ್ದಾರೆ.
ನೆಟ್ಟಿಗರ ಆಕ್ರೋಶ
ಘಟನೆ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪ ಡಿಸಿದ್ದಾರೆ. ನಗರದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಮ್ಮ ಯಾತ್ರೆ ಆ್ಯಪ್ ಬಗ್ಗೆಯೂ ಕಿಡಿಕಾರಿದ್ದಾರೆ. ಆ ಪಾನಮತ್ತ ಆಟೋ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಲವು ನೆಟ್ಟಿಗರು ಎಕ್ಸ್ ಖಾತೆಯಲ್ಲಿ ನಗರ ಪೊಲೀಸರನ್ನು ಆಗ್ರಹಿಸಿದ್ದಾರೆ.