ವೈದ್ಯರ ನಿರ್ಲಕ್ಷ್ಯ, ಪ್ರವಾಸಕ್ಕೆಂದು ಬಂದ ಮಹಿಳೆ ಇಂಜೆಕ್ಷನ್ ಪಡೆದು ಸಾವು!
ಗೋವಾ ಹಾಗೂ ಉತ್ತರಕನ್ನಡ ಪ್ರವಾಸಕ್ಕಾಗಿ ಬಂದ ಮಹಿಳೆ ಪ್ಯಾರಲಿಸೀಸ್ ಚಿಕಿತ್ಸೆ ಪಡೆಯುತ್ತಿದ್ದ ತಂದೆಯನ್ನು ನೋಡಲು ಬಂದು ವೈದ್ಯರ ಸಲಹೆಯಂತೆ ಚುಚ್ಚುಮದ್ದು ತೆಗೆದುಕೊಂಡು ಸಾವನ್ನಪ್ಪಿರುವ ದಾರುಣ ಘಟನೆ ಕಾರವಾರದಲ್ಲಿ ನಡೆದಿದೆ
ವರದಿ: ಭರತ್ ರಾಜ್ ಕಲ್ಲಡ್ಕ ಏಷ್ಯಾನೆಟ್ ಸುವರ್ಣ ನ್ಯೂಸ್
ಕಾರವಾರ (ಜೂ.19): ಆಕೆ ಕುಟುಂಬದ ಜೊತೆ ಪ್ರವಾಸಕ್ಕಾಗಿ ಬಂದ ಮಹಿಳೆ. ಪ್ರವಾಸದ ಜೊತೆ ತಂದೆಗೆ ಚಿಕಿತ್ಸೆ ಕೊಡುತ್ತಿದ್ದ ಆಸ್ಪತ್ರೆಗೆ ಸಹ ಭೇಟಿ ನೀಡಿದ್ದಳು. ಪ್ಯಾರಲಿಸೀಸ್ ಹಿನ್ನೆಲೆಯಲ್ಲಿ ಮುಂಜಾಗೃತೆ ವಹಿಸಲು ತಾನು ಕೂಡಾ ಇಂಜೆಕ್ಷನ್ ತೆಗೆದುಕೊಳ್ಳಲು ಮುಂದಾಗಿದ್ದಳು. ಆದರೆ, ಆಕೆಯ ತಪ್ಪು ನಿರ್ಧಾರವೇ ಜೀವವನ್ನು ತೆಗೆದುಕೊಳ್ಳುವಂತೆ ಮಾಡಿತ್ತು. ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದಾಗಿ ಇಂಜೆಕ್ಷನ್ ಪಡೆದ ಮರುಕ್ಷಣವೇ ಮಹಿಳೆ ನೆಲಕ್ಕೆ ಕುಸಿದು ಸಾವನ್ನಪ್ಪಿದ್ದಾಳೆ. ಅಷ್ಟಕ್ಕೂ ಈ ಘಟನೆ ನಡೆದಿರೋದಾದ್ರೂ ಎಲ್ಲಿ ಅಂತೀರಾ?
ಒಂದೆಡೆ ಆಸ್ಪತ್ರೆಯಲ್ಲಿ ಮೃತದೇಹದ ಮುಂದೆ ರೋದಿಸುತ್ತಿರುವ ಕುಟುಂಬ, ಇನ್ನೊಂದೆಡೆ ತಾಯಿಯ ಮುಖವನ್ನು ತೋರಿಸದೇ ಮಗುವಿನ ಜೊತೆ ಆಸ್ಪತ್ರೆ ಹೊರಗೆ ಪರದಾಡುತ್ತಿರುವ ತಂದೆ, ಮತ್ತೊಂದೆಡೆ ಆಸ್ಪತ್ರೆಯಲ್ಲಿ ಅತ್ತಿಂದಿತ್ತ ದೌಡಾಯಿಸುತ್ತಿರುವ ಪೊಲೀಸರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ. ಕಾರವಾರದ ಆಸ್ಪತ್ರೆಯೊಂದರ ವೈದ್ಯರ ನಿರ್ಲಕ್ಷಕ್ಕೆ ಮಹಿಳೆಯೋರ್ವಳು ದಾರುಣವಾಗಿ ಮೃತಪಟ್ಟಿದ್ದಾರೆ.
Mangaluru: ಒಂದೇ ಕಾಲೇಜಿನ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಆತ್ಮಹತ್ಯೆ
ಮೂಲತಃ ಕೊಪ್ಪಳದ ಸ್ವಪ್ನ ರಾಯ್ಕರ್(32) ಎನ್ನುವ ಮಹಿಳೆ ಕುಟುಂಬದ ಜೊತೆ ಗೋವಾ ಹಾಗೂ ಉತ್ತರಕನ್ನಡ ಜಿಲ್ಲೆಯ ಪ್ರವಾಸಕ್ಕಾಗಿ ಸೋಮವಾರ ಆಗಮಿಸಿದ್ದರು. ಗೋವಾದಲ್ಲಿ ದೇವಸ್ಥಾನವೊಂದಕ್ಕೆ ಭೇಟಿ ನೀಡಿ ನಂತರ ಆಕೆಯ ತಂದೆ ಪ್ಯಾರಲಿಸೀಸ್ ಚಿಕಿತ್ಸೆ ಪಡೆಯುತ್ತಿದ್ದ ಕಾರವಾರ ತಾಲೂಕಿನ ಹಳಗ ಗ್ರಾಮದ ಸೈಂಟ್ ಮೇರಿಸ್ ಆಸ್ಪತ್ರೆಗೆ ಭೇಟಿ ನೀಡಿದ್ದಳು. ಆಸ್ಪತ್ರೆಯಲ್ಲಿ ಪ್ಯಾರಲಿಸೀಸ್ ಬರದಂತೆ ಮುಂಚೆಯೇ ಚುಚ್ಚು ಮದ್ದು ತೆಗೆದುಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದರು ಎನ್ನಲಾಗಿದೆ. ವೈದ್ಯರ ಸೂಚನೆಯಂತೆ ಚುಚ್ಚುಮದ್ದು ಪಡೆದ ಮರುಕ್ಷಣವೇ ಮಹಿಳೆ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.
ಮಹಿಳೆ ಕುಸಿದು ಬೀಳುತ್ತಿದ್ದಂತೇ ತಕ್ಷಣ ಆಸ್ಪತ್ರೆಯವರೇ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಮಹಿಳೆಯನ್ನು ರವಾನೆ ಮಾಡಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲೇ ಮಹಿಳೆ ಮೃತಪಟ್ಟಿದ್ದು, ವೈದ್ಯರು ಮೃತರಾಗಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಇನ್ನು ಸೈಂಟ್ ಮೇರಿಸ್ ಆಸ್ಪತ್ರೆಯಲ್ಲಿ ಹಲವು ವರ್ಷದಿಂದ ಪ್ಯಾರಲಿಸೀಸ್ ಗೆ ಚುಚ್ಚುಮದ್ದು ಕೊಡುತ್ತಿದ್ದು, ಈ ಆಸ್ಪತ್ರೆ ಮೇಲೆ ಹಿಂದಿನಿಂದಲೂ ವಿವಿಧ ಆರೋಪಗಳಿತ್ತು. ಆಸ್ಪತ್ರೆಯಲ್ಲಿ ಯಾವ ಇಂಜೆಕ್ಷನ್ ಕೊಡುತ್ತಾರೆ, ಯಾವ ಔಷಧಿ ಕೊಡುತ್ತಾರೆ ಎಂದು ರೋಗಿಗಳಿಗೆ ಮಾಹಿತಿಯೇ ನೀಡುವುದಿಲ್ಲ. ಇದು ಸರಿಯಾದ ಕ್ರಮವಲ್ಲ ಎಂದು ಹಲವರು ಈ ಹಿಂದೆ ವಿರೋಧಿಸಿದ್ದರು.
ವಿಶ್ವದಲ್ಲಿಯೇ ಅತೀ ಅಪರೂಪ ಪ್ರಕರಣ, 30 ವರ್ಷದ ವ್ಯಕ್ತಿಗೆ 13 ತಿಂಗಳ ಮೃತ ಮಗುವಿನ ಕಿಡ್ನಿ ಕಸಿ
ಆದರೆ, ಆರೋಗ್ಯವಾಗಿದ್ದ ಮಹಿಳೆ ಇಂದು ಇಂಜೆಕ್ಷನ್ ತೆಗೆದುಕೊಂಡ ಮರುಕ್ಷಣವೇ ಮೃತಪಟ್ಟಿದ್ದರಿಂದ ಇಡೀ ಕುಟುಂಬವೇ ಆತಂಕಕ್ಕೆ ಒಳಗಾಗಿತ್ತು. ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರದಂನ ಮುಗಿಲು ಮುಟ್ಟಿದ್ದರೆ ಇತ್ತ ಮೃತ ತಾಯಿಗೆ ತನ್ನ ಪುಟ್ಟ ಮಗುವಿನ ಮುಖವನ್ನು ತೋರಿಸದೇ ತಂದೆ ಆಸ್ಪತ್ರೆ ಹೊರಗೆ ಪರದಾಟ ನಡೆಸುತ್ತಿದ್ದ ದೃಶ್ಯ ಎಲ್ಲರ ಕಣ್ಣಲ್ಲಿ ನೀರು ತರಿಸುವಂತಿತ್ತು. ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯ ಸಾವಿಗೆ ಕಾರಣವಾದ ಆಸ್ಪತ್ರೆ ಮೇಲೆ ಕ್ರಮ ಕೈಗೊಳ್ಳಲೇ ಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಯಾವುದೇ ಕಾಯಿಲೆ ಇಲ್ಲದಿದ್ದರೂ ಸುಮ್ಮನೇ ಚುಚ್ಚುಮದ್ದು ತೆಗೆದುಕೊಳ್ಳಲು ಹೋಗಿ ಮಹಿಳೆ ಮೃತಪಟ್ಟಿದ್ದು ನಿಜಕ್ಕೂ ದುರಂತವೇ. ಮಹಿಳೆಯ ಸಾವಿಗೆ ಕಾರಣವಾದ ಆಸ್ಪತ್ರೆ ವಿರುದ್ಧ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.