ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು: ಅನಾಥವಾಯ್ತು ಒಂದು ವರ್ಷದ ಹೆಣ್ಣು ಮಗು!
ಮನೆಯ ಮೇಲೆ ಹಾದು ಹೋಗಿರುವ 11ಕೆವಿ ವಿದ್ಯುತ್ ತಂತಿ ತಗುಲಿ ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊತ್ತೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ತ್ರಿವೇಣಿ (24) ಎಂದು ಗುರುತಿಸಲಾಗಿದೆ.
ಪಾವಗಡ (ಸೆ.15): ಮನೆಯ ಮೇಲೆ ಹಾದು ಹೋಗಿರುವ 11ಕೆವಿ ವಿದ್ಯುತ್ ತಂತಿ ತಗುಲಿ ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊತ್ತೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ತ್ರಿವೇಣಿ (24) ಎಂದು ಗುರುತಿಸಲಾಗಿದೆ. ಇತ್ತೀಚಿಗೆ ಹೊಸ ಮನೆ ಕಟ್ಟಿಸಿದ್ದು, ಸಾಮಾನುಗಳನ್ನು ಹೊಂದಿಸುವ ಸಮಯದಲ್ಲಿ ಮನೆಯ ಮೇಲೆ ಕಬ್ಬಿಣದ ಸಾಮಾನುಗಳನ್ನು ಎತ್ತಿ ಬೇರೆ ಕಡೆ ಇಡುವ ಸಮಯದಲ್ಲಿ ಮನೆಯ ಮೇಲೆ ಹಾದು ಹೋಗಿರುವ 11 ಕೆವಿ ಸಾಮರ್ಥ್ಯದ ವಿದ್ಯುತ್ ತಗುಲಿ ಈ ಅವಘಡ ಸಂಭವಿಸಿದೆ. ಮೃತರಿಗೆ ಒಂದು ವರ್ಷದ ಹೆಣ್ಣು ಮಗು ಇದ್ದು ಊರಿನಲ್ಲಿ ಈ ಹೃದಯ ವಿದ್ರಾವಕ ಘಟನೆ ಕಂಡು ನೀರವ ಮೌನ ಆವರಿಸಿದೆ.
ಘಟನೆ ಕುರಿತಂತೆ ಬೆಸ್ಕಾಂ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳದಿರುವುದೇ ಘಟನೆ ಕಾರಣ ಎಂದು ದೂರಿದರು. ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಮಂಗಳವಾಡ ವಿಭಾಗದ ಬೆಸ್ಕಾಂ ಜೆಇ ಇಲಾಖೆ ಅನುಮತಿ ಪಡೆಯದೇ 11ಕೆವಿ ಲೈನ್ ಕೆಳಗಡೆ ಮನೆಕಟ್ಟಿದ್ದು ಮಹಡಿ ಮೇಲೆ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಲೈನ್ ತೆರವುಗೊಳಿಸಿ ಬೇರೆ ಕಡೆಯಿಂದ ಲೈನ್ ಎಳೆಯಲು ಕಳೆದ ಎರಡು ವರ್ಷದ ಹಿಂದೆ ಹೆಚ್ಚುವರಿ ಬೆಸ್ಕಾಂ ವಿಭಾಗದ ಇಲಾಖೆಗೆ ಎಟಿಮೆಟ್ ಪತ್ರದ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಈ ಸಂಬಂಧ ಇಲಾಖೆಯಿಂದ ಎಟಿಮೆಟ್ ಮಂಜೂರಾತಿ ವಿಳಂಬವಾಗಿದ್ದು ಮೇಲಧಿಕಾರಿಗಳ ಆದೇಶದ ಮೇರೆಗೆ ಲೈನ್ ಸ್ಥಳಾಂತರಕ್ಕೆ ಕ್ರಮವಹಿಸಲಾಗಿದೆ. ಮನೆ ಕಟ್ಟುವ ವೇಳೆ ವಿದ್ಯುತ್ ತಂತಿ ಹಾದು ಹೋಗಿದೆ. ಇದರ ಕೆಳಗೆ ಮನೆ ನಿರ್ಮಾಣ ಸರಿಯಿಲ್ಲ ಎಂದು ನಮ್ಮ ಇಲಾಖೆಯ ಲೈನ್ ಮ್ಯಾನ್ ಸೂಚಿಸಿದ್ದರು. ಆದರೂ ಸಹ ಗ್ರಾಮಸ್ಥರು ಕೇಳದೆ ಮನೆ ನಿರ್ಮಾಣ ಮಾಡಿದ್ದರು. ವಿದ್ಯುತ್ ಅವಘಡದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಘಟನೆ ಅತ್ಯಂತ ನೋವು ತಂದಿದೆ ಎಂದು ತಿಳಿಸಿದ್ದಾರೆ.
ಸರ್ಕಾರಕ್ಕೆ ಹೊರೆಯಾದರೂ ಶಿಕ್ಷಕರ ಬೇಡಿಕೆ ಈಡೇರಿಕೆ: ಸಚಿವ ಕೆ.ಎನ್.ರಾಜಣ್ಣ
ಶಾಸಕರ ಭೇಟಿ, ಸಾಂತ್ವನ: ಘಟನೆ ವಿಷಯ ಮಾಹಿತಿ ತಿಳಿಯುತ್ತಿದ್ದಂತೆ ಪಾವಗಡ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಶಾಸಕ ಎಚ್.ವಿ.ವೆಂಕಟೇಶ್ ಭೇಟಿ ನೀಡಿ, ಮೃತ ತ್ರಿವೇಣಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಘಟನೆ ಬಗ್ಗೆ ಕಂಬನಿ ಮಿಡಿದರು. ಮೃತ ತ್ರಿವೇಣಿ ಅವರ ಪುಟ್ಟ ಕಂದಮ್ಮನ ಎತ್ತಿಕೊಂಡು ಭಾವುಕರಾದರು. ನಂತರ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಘಟನೆ ಕುರಿತು ಸಮಗ್ರ ಮಾಹಿತಿ ಪಡೆದರು. ಆದಷ್ಟು ಬೇಗ ದಾಖಲೆ ಸಲ್ಲಿಸುವ ಮೂಲಕ ಮೃತ ಕುಟುಂಬಸ್ಥರಿಗೆ ಪರಿಹಾರ ಕೊಡಿಸುವಂತೆ ಸೂಚಿಸಿದರು. ಹಾಗೆಯೇ ವೈಯಕ್ತಿಕವಾಗಿ ಎಲ್ಲಾ ರೀತಿಯ,ಸಹಕಾರ,ನೆರವು ನೀಡುವ ಭರವಸೆ ವ್ಯಕ್ತಪಡಿಸಿದರು.