ಗದಗ(ನ.19): ಬಡ್ಡಿ ವ್ಯವಹಾರಗಾರರ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಅಡವಿಸೋಮಾಪುರ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ಸಂಗವ್ವ ಮೆಣಸಿನಕಾಯಿ (45) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಮಹಿಳೆಯಾಗಿದ್ದಾಳೆ. 

ಸಂಗವ್ವ ಮೆಣಸಿನಕಾಯಿ ಶ್ರೀಶೈಲಪ್ಪ ಚಕ್ರಣ್ಣವರ್ ಎಂಬಾತನಿಂದ ಮೋಸ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಸಂಗವ್ವನ ಪತಿ ಈರಪ್ಪನಿಗೆ ಶ್ರೀಶೈಲಪ್ಪ ಚಕ್ರಣ್ಣವರ್ ಎಂಬಾತ ಸುಮಾರು 5 ಲಕ್ಷ ಬಡ್ಡಿ ಸಾಲ ಕೊಟ್ಟಿದ್ದ, ಬಡ್ಡಿ ಸಾಲಕ್ಕೆ ಹೊಲವನ್ನು ಕಬ್ಜಾ ಪಡೆದಿದ್ದರು. ಕಬ್ಜಾ ಪಡೆದಾಗ ಸಹಿ ಮಾಡಿಸಿಕೊಳ್ಳಲಾಗಿತ್ತು. ಸಹಿ ಮಾಡಿಸಿಕೊಂಡು 3 ಎಕರೆ ಜಮೀನನ್ನು ಬೇರೆಯವರಿಗೆ ಮಾರಿದ್ದರು ಎಂದು ಆರೋಪಿಸಲಾಗಿದೆ. 

‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎನ್ನುತ್ತಲೇ ಬೆಂಕಿ ಹಚ್ಚಿಕೊಂಡ ಭಕ್ತ ಸಾವು!

ಪಹಣಿ ಪತ್ರದಲ್ಲಿ ಬೇರೆಯವರ ಹೆಸರು ದಾಖಲಾಗಿತ್ತು. ಬಡ್ಡಿ ವ್ಯವಹಾರಕ್ಕೆ ಮೋಸ ಮಾಡಿ ಜಮೀನನ್ನು ಬೇರೆಯವರಿಗೆ ಮಾರಿದ್ದರಿಂದ ಬೇಸತ್ತಿದ್ದ ಈರಪ್ಪನ ಪತ್ನಿ ಸಂಗವ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಸಂಗವ್ವಳನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.