ಬೆಂಗಳೂರು(ಮಾ.13): ಅಕ್ಕನ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ತಂಗಿಯನ್ನು ನಂದಿನಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಲಗ್ಗೆರೆಯ ಚೌಡೇಶ್ವರಿ ನಗರ ನಿವಾಸಿ ಶಶಿಕಲಾ(35) ಬಂಧಿತೆ. ಆರೋಪಿಯಿಂದ 9 ಲಕ್ಷ ಮೌಲ್ಯದ 220 ಗ್ರಾಂನ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಶಶಿಕಲಾ ಸಹೋದರಿ ಮೀನಾ ವಾಸಿಸುತ್ತಿದ್ದ ಕಟ್ಟಡದ ಮೊದಲ ಮಹಡಿಯಲ್ಲಿ ನೆಲೆಸಿದ್ದರು. ಮೀನಾಗೆ ಕಿವಿ ಕೇಳಿಸುವುದಿಲ್ಲ ಹಾಗೂ ಮಾತನಾಡಲು ಬರುವುದಿಲ್ಲ. ಪ್ರತಿದಿನ ಚಿನ್ನಾಭರಣವಿದ್ದ ಬೀರುವಿನ ಕೀಯನ್ನು ತಲೆದಿಂಬಿನಡಿ ಇಟ್ಟು ಮಲಗುತ್ತಿದ್ದರು. ಇದನ್ನು ಗಮನಿಸಿದ್ದ ಶಶಿಕಲಾ ಇತ್ತೀಚೆಗೆ ಅಕ್ಕ ಮೀನಾ ಅವರಿಗೆ ತಿಳಿಯದಂತೆ ಕೀ ತೆಗೆದುಕೊಂಡು ಬೀರುವಿನಲ್ಲಿದ್ದ 220 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಳು. ಮೀನಾ ಪುತ್ರ ವಿಜಯ್‌ಕುಮಾರ್‌ ಮಾ.3ರಂದು ತಮ್ಮ ಅಜ್ಜಿಯ ಮನೆಗೆ ಹೋಗಲು ವಡವೆಗಳನ್ನು ಹಾಕಿಕೊಳ್ಳಲು ಬೀರು ತೆಗೆದು ನೋಡಿದಾಗ ಅದರಲ್ಲಿ ಚಿನ್ನಾಭರಣ ಇರಲಿಲ್ಲ. ಹೀಗಾಗಿ ಮಾ.9ರಂದು ನಂದಿನಿ ಲೇಔಟ್‌ ಪೊಲೀಸ್‌ ಠಾಣೆಗೆ ಹಾಜರಾಗಿ ಈ ಕುರಿತು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಅನುಮಾನದ ಮೇರೆಗೆ ಶಶಿಕಲಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಅಪಘಾತ ನಾಟಕವಾಡಿ ಚಾಲಕರ ಪರ್ಸ್‌ ಎಗರಿಸುತ್ತಿದ್ದ ಖದೀಮ

ಆರೋಪಿಗೆ ವಿವಾಹವಾಗಿದ್ದು, ಕೌಟುಂಬಿಕ ಕಲಹದಿಂದ ಪತಿಯಿಂದ ದೂರು ಇದ್ದರು. ಹಲವರ ಬಳಿ ಶಶಿಕಲಾ ಸಾಲ ಮಾಡಿಕೊಂಡಿದ್ದರು. ಕದ್ದ ಚಿನ್ನಾಭರಣವನ್ನು ಅಡವಿಟ್ಟು ಬಂದ ಹಣದಲ್ಲಿ ಸ್ನೇಹಿತರೊಂದಿಗೆ ಹೊರ ರಾಜ್ಯಕ್ಕೆ ಪ್ರವಾಸ ಹೋಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.