*   ಕೆಂಗೇರಿ ನಿವಾಸಿ ಲಕ್ಷ್ಮಿ ಅಲಿಯಾಸ್‌ ವಾಣಿ ಬಂಧಿತ ಆರೋಪಿ*  1.25 ಕೋಟಿ ಹಣ ಸಂಗ್ರಹಿಸಿ ಜನರಿಗೆ ಆರೋಪಿ ವಂಚಿಸಿದ್ದ ವಾಣಿ *  ಕೊರೋನಾ ಕಾಲದಲ್ಲಿ ಸಂಕಷ್ಟ

ಬೆಂಗಳೂರು(ಜೂ.22):  ಚಿಟ್‌ ಫಂಡ್‌ ಹೆಸರಿನಲ್ಲಿ ಹೆಚ್ಚಿನ ಲಾಭದ ಆಸೆ ತೋರಿಸಿ ಜನರಿಂದ ಹಣ ಸಂಗ್ರಹಿಸಿ ವಂಚಿಸಿದ್ದ ಮಹಿಳೆಯನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿ ನಿವಾಸಿ ಲಕ್ಷ್ಮಿ ಅಲಿಯಾಸ್‌ ವಾಣಿ ಬಂಧಿತಳಾಗಿದ್ದು, ಚಿಟ್‌ ಫಂಡ್‌ನಲ್ಲಿ ಹಣ ಹೂಡಿದರೆ ಹೆಚ್ಚಿನ ಆದಾಯ ಸಿಗಲಿದೆ ಎಂದು ಆಮಿಷವೊಡ್ಡಿ ಸುಮಾರು .1.25 ಕೋಟಿ ಹಣ ಸಂಗ್ರಹಿಸಿ ಜನರಿಗೆ ಆರೋಪಿ ವಂಚಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಟ್‌ ಫಂಡ್‌ನಿಂದ ದಿವಾಳಿ

ಎರಡು ವರ್ಷಗಳ ಹಿಂದೆ ರಾಜಾಜಿನಗರದ 4ನೇ ಹಂತದಲ್ಲಿ ವಾರಿಧಿ ಚಿಟ್‌ ಫಂಡ್‌ ಪ್ರೈವೇಟ್‌ ಲಿಮಿಟೆಡ್‌ ಹೆಸರಿನ ಕಂಪನಿ ತೆರೆದಿದ್ದ ಲಕ್ಷ್ಮೇ, ತನ್ನ ಮಕ್ಕಳ ಜತೆ ಕೆಂಗೇರಿಯ ಬೆಮೆಲ್‌ ಲೇಔಟ್‌ನಲ್ಲಿ ನೆಲೆಸಿದ್ದಳು. ಅಲ್ಪಾವಧಿಯಲ್ಲೇ ಲಾಭ ಕೊಡುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿದ ಆರೋಪಿ, ಬಳಿಕ ಆ ಹಣದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದಳು. ಈ ರೀತಿ ಸಂಪಾದಿಸಿದ ಹಣದಲ್ಲಿ ಲಕ್ಷ್ಮೇ ಐಷಾರಾಮಿ ಜೀವನ ಕೂಡ ನಡೆಸುತ್ತಿದ್ದಳು. ಆದರೆ ಸಕಾಲಕ್ಕೆ ಗ್ರಾಹಕರಿಗೆ ಆದಾಯ ಹಂಚಿಕೆ ಮಾಡದೆ ಹೋದಾಗ ಆಕೆಯ ವಿರುದ್ಧ ಗ್ರಾಹಕರು ತಿರುಗಿ ಬಿದ್ದರು. ಆಗ ಬಸವೇಶ್ವರ ನಗರದಲ್ಲಿ ಮನೆ ಖಾಲಿ ಮಾಡಿ ಕೆಂಗೇರಿಗೆ ಆರೋಪಿ ವಾಸ್ತವ್ಯ ಬದಲಾಯಿಸಿದ್ದಳು. ಕೊನೆಗೆ ಹಣ ಖರ್ಚಾದ ಬಳಿಕ ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ದುಬಾರಿ ಬಡ್ಡಿ ಆಸೆ: ಚಿಟ್‌ಫಂಡ್‌ನಿಂದ ನೂರಾರು ಜನರಿಗೆ ಪಂಗನಾಮ..!

ಈ ವಂಚನೆ ಬಗ್ಗೆ ನಂದಿನಿ ಲೇಔಟ್‌ ಹಾಗೂ ರಾಜಾಜಿನಗರ ಠಾಣೆಗೆ ಕೆಲವರು ದೂರು ಸಲ್ಲಿಸಿದರು. ಅಂತೆಯೇ ಆರೋಪಿಯನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊರೋನಾ ಕಾಲದಲ್ಲಿ ಸಂಕಷ್ಟ

ಕೊರೋನಾ ಸೋಂಕಿನ ಹಾವಳಿಗೂ ಮುನ್ನ ಚಿಟ್‌ ಫಂಡ್‌ ವ್ಯವಹಾರ ಚೆನ್ನಾಗಿ ನಡೆದಿತ್ತು. ಆದರೆ ಲಾಕ್‌ಡೌನ್‌ ಸಮಯದಲ್ಲಿ ಚೀಟಿ ಎತ್ತಿದವರು ಹಾಗೂ ಬಡ್ಡಿಗೆ ಹಣ ಪಡೆದವರು ನನಗೆ ವಂಚಿಸಿದರು. ಸಕಾಲಕ್ಕೆ ಅವರು ಹಣ ಕೊಡದೆ ಪರಿಣಾಮ ನಾನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಮನೆ ಮಠ ಮಾರಿಕೊಂಡು ಕೊನೆಗೆ ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡಿ ಜೀವನ ಸಾಗಿಸುವಂತಾಯಿತು ಎಂದು ವಿಚಾರಣೆ ವೇಳೆ ಲಕ್ಷ್ಮೇ ಅಲವತ್ತುಕೊಂಡಿದ್ದಾಳೆ ಎನ್ನಲಾಗಿದೆ.