10 ವರ್ಷ ವಯಸ್ಸು ಕಡಿಮೆ ಹೇಳಿ ಮದುವೆ: ‘ಬಾ ನಲ್ಲೆ ಮಧುಚಂದ್ರಕೆ’ ರೀತಿ ಪತ್ನಿ ಕೊಲೆ!
Crime News Today: ಆಕೆಯ ವಯಸ್ಸು 38 ಆದರೆ ಕಡಿಮೆ ವಯಸ್ಸೆಂದು ಸುಳ್ಳು ಹೇಳಿ ಮದುವೆಯಾಗಿದ್ದಳು. ಇದೇ ಕಾರಣಕ್ಕೆ ಇಬ್ಬರ ನಡುವೆ ಹಲವು ಬಾರಿ ಗಲಾಟೆಗಳಾಗಿತ್ತು. ಕಡೆಗೊಂದು ದಿನ ಪ್ರವಾಸಕ್ಕೆಂದು ಶಿರಾಡಿಘಾಟಿಗೆ ಕರೆದೊಯ್ದ ಗಂಡ ಹೆಂಡತಿಯನ್ನು ಕೊಲೆ ಮಾಡಿದ್ದಾನೆ.
ಬೆಂಗಳೂರು: ‘ಬಾ ನಲ್ಲೇ ಮಧು ಚಂದ್ರಕೆ’ ಸಿನಿಮಾ ಶೈಲಿಯಲ್ಲಿ ಪತ್ನಿಯನ್ನು ಪ್ರವಾಸಕ್ಕೆ ಕರೆದೊಯ್ದು ದುಪಟ್ಟಾದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಬಳಿಕ ಪತ್ನಿ ಕಾಣೆಯಾಗಿದ್ದಾಳೆ ಎಂದು ನಾಟಕ ಮಾಡಿದ್ದ ಪತಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಡಿವಾಳದ ಮಾರುತಿ ನಗರ ನಿವಾಸಿ ಪೃಥ್ವಿರಾಜ್ (30) ಬಂಧಿತ. ಕೊಲೆಗೆ ಸಹಕರಿಸಿದ್ದ ಈತನ ಸ್ನೇಹಿತ ಬಿಹಾರ ಮೂಲದ ಸಮೀರ್‌ಕುಮಾರ್ ಎಂಬಾತ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ. ಆರೋಪಿ ಪೃಥ್ವಿರಾಜ್ ತನ್ನ ಪತ್ನಿ ಜ್ಯೋತಿಕುಮಾರಿ (38) ಎಂಬಾಕೆಯನ್ನು ಆ.2ರಂದು ಕೊಲೆ ಮಾಡಿದ ಬಳಿಕ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದಾಗ ದೂರುದಾರ ಪೃಥ್ವಿರಾಜ್ ತನ್ನ ಸ್ನೇಹಿತನ ಜತೆ ಸೇರಿಕೊಂಡು ಪತ್ನಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರ ಮೂಲದ ಪೃಥ್ವಿರಾಜ್, 10 ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದ. ಎಲೆಕ್ಟ್ರಾನಿಕ್ ವಸ್ತುಗಳ ಡೀಲರ್ ಆಗಿದ್ದ ಈತ ಕಳೆದ ನಾಲ್ಕು ತಿಂಗಳಿಂದ ಮಾರುತಿ ನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಆರೋಪಿಯ ಪಾಲಕರು 2021ರ ನವೆಂಬರ್‌ನಲ್ಲಿ ಬಿಕಾಂ ಪದವೀಧರೆ ಜ್ಯೋತಿಕುಮಾರಿ ಜತೆಗೆ ವಿವಾಹ ಮಾಡಿದ್ದ. ವಿವಾಹದ ವೇಳೆ ಜ್ಯೋತಿಕುಮಾರಿ ವಯಸ್ಸು 28 ವರ್ಷ ಎಂದು ಹೇಳಿದ್ದರು. ಕೆಲ ದಿನಗಳ ಬಳಿಕ ಆಕೆಯ ನಿಜವಾದ ವಯಸ್ಸು 38 ಎಂದು ಆರೋಪಿಗೆ ಗೊತ್ತಾಗಿತ್ತು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆಯಾಗುತಿತ್ತು. ದಂಪತಿ ನಡುವೆ ಹೊಂದಾಣಿಕೆ ಸರಿ ಇರಲಿಲ್ಲ. ಈ ನಡುವೆ ಜ್ಯೋತಿಕುಮಾರಿ ಪತಿಯನ್ನು ಹಿಯಾಳಿಸುತ್ತಿದ್ದಳು ಎನ್ನಲಾಗಿದೆ.
ಯುಪಿಎಸ್ಸಿ ಪರೀಕ್ಷೆಗೆ ತಯಾರಿ:
ಈ ನಡುವೆ ಜ್ಯೋತಿಕುಮಾರಿ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು. ಎರಡು ಬಾರಿ ದೆಹಲಿಗೂ ಹೋಗಿ ಬಂದಿದ್ದಳು. ಈ ವೇಳೆ ಯುವಕನೊಬ್ಬನ ಪರಿಚಯವಾಗಿ ಇಬ್ಬರ ನಡುವೆ ಮೊಬೈಲ್ ಚಾಟಿಂಗ್ ನಡೆಯುತಿತ್ತು. ಈ ವಿಚಾರ ಪತಿ ಪೃಥ್ವಿರಾಜ್‌ಗೂ ಗೊತ್ತಾಗಿ ಪ್ರಶ್ನೆ ಮಾಡಿದ್ದ. ಈ ವಿಚಾರವಾಗಿಯೂ ಇಬ್ಬರ ನಡುವೆ ಗಲಾಟೆಯಾಗಿ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಪತ್ನಿಯ ಬಗ್ಗೆ ರೋಸಿ ಹೋಗಿದ್ದ ಪೃಥ್ವಿರಾಜ್ ಆಕೆಯನ್ನು ಹೇಗಾದರೂ ಮಾಡಿ ಕೊಲೆ ಮಾಡಲು ಸಂಚು ರೂಪಿಸಿದ್ದ. ಇದಕ್ಕೆ ತನ್ನ ಸ್ನೇಹಿತ ಸಮೀರ್‌ನ ಸಹಾಯ ಕೇಳಿದ್ದ.
2 ಬಾರಿ ಹತ್ಯೆ ವಿಫಲ:
ಪ್ರವಾಸಕ್ಕೆ ಹೋಗಲು ಜ್ಯೋತಿಕುಮಾರಿಯ ಮನವೊಲಿಸಿದ್ದ ಆರೋಪಿ ಪೃಥ್ವಿರಾಜ್, ಆ.1ರಂದು ಜೂಮ್ ಕಾರ್ ಬುಕ್ ಮಾಡಿದ್ದ. ಚಾಲಕನೆಂದು ಸ್ನೇಹಿತ ಸಮೀರ್‌ನನ್ನು ಜತೆಯಲ್ಲಿ ಕರೆದುಕೊಂಡಿದ್ದ. ಬಳಿಕ ಮೂವರು ಉಡುಪಿಯ ಮಲ್ಪೆ ಬೀಚ್‌ಗೆ ಹೋಗಿದ್ದರು. ಅಲ್ಲೇ ರೂಮ್ ಬಾಡಿಗೆಗೆ ಪಡೆದು ದಂಪತಿ ಉಳಿದುಕೊಂಡಿದ್ದರು. ಹೋಟೆಲ್‌ನಲ್ಲಿ ಪತ್ನಿಯನ್ನು ಸಾಯಿಸಲು ಯೋಜಿಸಿದ್ದರೂ ಸಾಧ್ಯವಾಗಲಿಲ್ಲ. ಬೀಚ್‌ಗೆ ಹೋದಾಗ ಸಮುದ್ರದಲ್ಲಿ ಮುಳುಗಿಸಿ ಕೊಲೆ ಮಾಡಲು ಆರೋಪಿ ಉದ್ದೇಶಿಸಿದ್ದ. ಆದರೆ, ಬೀಚ್‌ನಲ್ಲಿ ಸಮುದ್ರದ ಅಲೆಗಳ ಅಬ್ಬರ ಜೋರಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಮುದ್ರದಲ್ಲಿ ಮುಂದೆ ಹೋಗದಂತೆ ಸೂಚನಾ ಫಲಕ ಅಳವಡಿಸಲಾಗಿತ್ತು. ಹೀಗಾಗಿ ಆ ಕೊಲೆ ಯೋಜನೆಯೂ ಸಹ ವಿಫಲವಾಗಿತ್ತು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಶಿರಾಡಿಘಾಟ್‌ನಲ್ಲಿ ಉಸಿರುಗಟ್ಟಿಸಿ ಕೊಲೆ:
ಆರೋಪಿಯು ಆ.2ರಂದು ಮಲ್ಪೆಯಿಂದ ಬೆಂಗಳೂರಿಗೆ ವಾಪಸ್ ಬರುವಾಗ ಮಾರ್ಗ ಮಧ್ಯೆ ಶಿರಾಡಿ ಘಾಟ್‌ನ ರಾಜಘಟ್ಟದ ಬಳಿ ಕಾರು ನಿಲ್ಲಿಸಿದ್ದ. ಕಾರಿನ ಮುಂಭಾಗದ ಆಸನದಲ್ಲಿ ಕುಳಿತಿದ್ದ ಜ್ಯೋತಿಕುಮಾರಿಯನ್ನು ಆಕೆಯ ದುಪಟ್ಟದಿಂದ ಕುತ್ತಿಗೆ ಬಿಗಿದು ಸ್ನೇಹಿತ ಸಮೀರ್ ಸಹಾಯದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನು ಅರಣ್ಯ ಪ್ರದೇಶದಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಿ ಬೆಂಗಳೂರಿಗೆ ಬಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿನಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ: ವಾಟ್ಸಾಪ್ ಮೂಲಕ ಅಶ್ಲೀಲ ಮೆಸೇಜ್ ಕಳಿಸಿದ ಕಾಮುಕ
ಪತ್ನಿ ಕಾಣೆಯಾಗಿದ್ದಾಳೆ!
ಆರೋಪಿ ಪೃಥ್ವಿರಾಜ್ ಆ.5ರಂದು ಮಡಿವಾಳ ಠಾಣೆಗೆ ಬಂದು ಪತ್ನಿ ಜ್ಯೋತಿಕುಮಾರಿ ಕಾಣೆಯಾಗಿದ್ದು, ಹುಡುಕಿ ಕೊಡುವಂತೆ ದೂರು ನೀಡಿದ್ದ. ಈ ದೂರು ಆಧರಿಸಿ ತನಿಖೆ ಆರಂಭಿಸಿದ್ದ ಪೊಲೀಸರು, ಪೃಥ್ವಿರಾಜ್‌ನನ್ನು ಕರೆದು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿಯು ಗೊಂದಲದ ಹೇಳಿಕೆ ನೀಡುತ್ತಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಮಾಡಿದಾಗ ಪತ್ನಿಯನ್ನು ಪ್ರವಾಸಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯ ಮನೆ ಬಳಿ ಕೊನೆಯದಾಗಿ ದಂಪತಿ ಜತೆಯಲ್ಲಿ ಹೊರಗೆ ಹೋಗುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಅನೈತಿಕ ಸಂಬಂಧದ ಶಂಕೆ; ಗಂಡನ ಮರ್ಮಾಂಗದ ಮೇಲೆ ಬಿಸಿ ನೀರು ಸುರಿದ ಹೆಂಡತಿ
ಮೊಬೈಲ್ ಮನೆಯಲ್ಲೇ ಬಿಟ್ಟಿದ್ದ:
ಆರೋಪಿ ಪೃಥ್ವಿರಾಜ್, ಪೊಲೀಸರ ದಿಕ್ಕು ತಪ್ಪಿಸುವ ಉದ್ದೇಶದಿಂದ ತನ್ನ ಹಳೆಯ ಮೊಬೈಲ್, ಸಿಮ್ ಕಾರ್ಡ್ ಮನೆಯಲ್ಲೇ ಬಿಟ್ಟಿದ್ದ. ಬಳಿಕ ಹೊಸ ಬೆಸಿಕ್ ಮೊಬೈಲ್ ಹಾಗೂ ಸಿಮ್ ಖರೀದಿಸಿದ್ದ. ಈ ಮೊಬೈಲ್ ನಂಬರ್ ಬಳಸಿ ಜೂಮ್ ಕಾರ್ ಬಾಡಿಗೆಗೆ ಪಡೆದಿದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.