ಲವ್ವರ್‌ಗಾಗಿ ಗಂಡನ ಕೊಲೆಗೆ ಪತ್ನಿಯಿಂದಲೇ ಸುಫಾರಿ; ಪ್ರಾಣ ಉಳಿಸಿದ್ದು ಕುಡಿತದ ಚಟ
Extramarital Affair News: ಬಾಯ್‌ಫ್ರೆಂಡ್ ಜೊತೆಗೆ ಹೊಸ ಜೀವನ ಆರಂಭಿಸುವ ಆಸೆಯೊಂದಿಗೆ ಗಂಡನ ಕೊಲೆಗೆ ಸುಫಾರಿ ಕೊಟ್ಟಿದ್ದ ಹೆಂಡತಿ ಪೊಲೀಸರ ಅತಿಥಿಯಾಗಿದ್ದಾಳೆ. ಅತ್ತ ಗಂಡನ ಕೊಲೆಯಾಗಿದೆ ಎಂದು ತಿಳಿದ ಬಾಯ್‌ಫ್ರೆಂಡ್ ಪೊಲೀಸ್ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವರದಿ: ರಮೇಶ್ ಕೆ.ಎಚ್
ಪ್ರಿಯಕರನ ಜೊತೆ ಸೇರಿ ಗಂಡನನ್ನ ಹತ್ಯೆ ಮಾಡಲು ಸುಫಾರಿ ಕೊಟ್ಟ ಪತ್ನಿ ಸೇರಿ ಐವರನ್ನ ಬೆಂಗಳೂರಿನ ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಮದುವೆಗಿಂತಲೂ ಮೊದಲಿನಿಂದಲೂ ಸ್ನೇಹ ಹೊಂದಿದ್ದ ಪಲ್ಲವಿ ಬಾಯ್‌ಫ್ರೆಂಡ್ ಜೊತೆ ಸೇರಿ ಗಂಡ ನವೀನ್‌ನನ್ನು ಕೊಲೆ ಮಾಡಲು ನಡೆಸಿದ್ದ ಪ್ಲಾನ್ ಉಲ್ಟಾ ಹೊಡೆದಿದ್ದು, ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ್ರೆ, ಆಕೆ ಜೈಲುಪಾಲಾಗಿದ್ದಾಳೆ.
ನವೀನ್ ಪ್ರಾಣ ಉಳಿಸಿದ್ದು ಎಣ್ಣೆ:
ಪಲ್ಲವಿ (ಹೆಸರು ಬದಲಿಸಲಾಗಿದೆ) ಕಳೆದ 8 ವರ್ಷಗಳ ಹಿಂದೆ ಕ್ಯಾಬ್ ಡ್ರೈವರ್ ಆಗಿದ್ದ ನವೀನ್ (ಹೆಸರು ಬದಲಿಸಲಾಗಿದೆ) ಎಂಬಾತನನ್ನ ಮದುವೆಯಾಗಿದ್ದು, ಇವರಿಬ್ಬರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದ್ರೆ ಇತ್ತೀಚಿಗೆ ತೀರಾ ಹತ್ತಿವಾಗಿದ್ದ ಲವ್ವರ್ ಹಿಮಂತ್ ಜೊತೆ ಸೇರಿ ಪಲ್ಲವಿ ಗಂಡನನ್ನ ಮುಗಿಸಿ ಒಂದಾಗಲು ಸ್ಕೆಚ್ ರೂಪಿಸಿದ್ರು. ನವೀನ್‌ನನ್ನು ತಮಿಳುನಾಡಿಗೆ ಕರೆದೊಯ್ದು ಕೊಲೆ ಮಾಡಲು ಪ್ಲಾನ್ ಮಾಡಲಾಗಿತ್ತು. ಹರೀಶ್, ನಾಗರಾಜ್ ಎಂಬುವರಿಗೆ ಹಣ ಕೊಟ್ಟು ನವೀನ್‌ನನ್ನು ಕಿಡ್ನಾಪ್ ಮಾಡಲಾಗುತ್ತೆ. ನವೀನ್ ಕ್ಯಾಬ್ ಡ್ರೈವರ್ ಆಗಿದ್ರಿಂದ ಆತನ ಕಾರಿನಲ್ಲೇ ತಮಿಳುನಾಡು ಟ್ರಿಪ್ ಪ್ಲಾನ್ ಮಾಡಿದ್ರು ಹಂತಕರು. ತಮಿಳುನಾಡಿಗೆ ಕರೆದೊಯ್ದು, ಕಂಠಪೂರ್ತಿ ಕುಡಿಸಿ ಕೊಲೆ ಮಾಡುವ ಪ್ಲಾನ್ ಅವರದಾಗಿತ್ತು. ತಮಿಳುನಾಡಿನಲ್ಲಿ ಮದ್ಯಪಾನ ಮಾಡುವ ವೇಳೆಯಲ್ಲಿ ನಡೆದ ಸಂಭಾಷಣೆ ವೇಳೆ ಹತ್ಯೆಗೆ ಪ್ಲಾನ್ ಮಾಡಿದ್ದ ಹರೀಶ್, ನಾಗರಾಜ್ ಅವರಿಗೆ ನವೀನ್ ಮೇಲೆ ಅನುಕಂಪ ಉಂಟಾಗಿತ್ತು.
ನವೀನ್ ಮೇಲೆ ಅನುಕಂಪ ಬಂದಿದ್ದರಿಂದ ಕೊಲೆ ಮಾಡುವ ಬದಲು ಕುಡಿದ ಮತ್ತಿನಲ್ಲಿ ಬಿದ್ದಿದ್ದ ವೇಳೆ ಆತನ ಮೇಲೆ ಟೊಮೋಟೋ ಸಾಸ್ ಎರಚಿ ಪೋಟೋ ತೆಗೆದಿದ್ರು. ಇದೇ ಪೋಟೋಗಳನ್ನ ಹಿಮಂತ್ ಹಾಗೂ ಪಲ್ಲವಿಗೆ ಕಳಿಸಿ ಕೊಲೆ ಮಾಡಿದ್ದಾಗಿ ಹೇಳಿ ಕೆಲ ದಿನಗಳ ನಂತರ ವಾಪಾಸ್ಸಾಗ್ತಾರೆ. ಕೊಲೆ ಮಾಡುವಾಗ ಇಲ್ಲದ ಭಯ ಕೊಲೆ ಆದ ನಂತರ ಹಿಮಂತ್ ಕಾಡಲಾರಂಭಿಸುತ್ತೆ. ಭಯದಲ್ಲೇ ಹಿಮಂತ್ ಆತ್ಮಹತ್ಯೆ ಮಾಡಿಕೊಳ್ತಾನೆ.
ಇದನ್ನೂ ಓದಿ: ಪ್ರಿಯಕರನೊಂದಿಗೆ ಸೌದಿಗೆ ಹಾರಿದ ಮೂರು ಮಕ್ಕಳ ತಾಯಿ; ಮಕ್ಕಳಿಗೆ ವಿಷ ಕೊಟ್ಟು ಗಂಡ ಆತ್ಮಹತ್ಯೆ
ನವೀನ್ ಕಾಣದೇ ಇದ್ದಾಗ ನವೀನ್ ಸಹೋದರ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಆದ್ರೆ ಕೆಲ ದಿನಗಳ ನಂತರ ನವೀನ್ ವಾಪಸ್ ಬಂದಾಗ ಪೊಲೀಸ್ ಕರೆಸಿ ಹೇಳಿಕೆ ಪಡೆಯಲು ಮುಂದಾಗಿದ್ರು. ಪೊಲೀಸ್ ವಿಚಾರಣೆ ಯಾರು ತಮಿಳುನಾಡಿಗೆ ಕರೆದೊಯ್ದಿದ್ರು ಎಂಬ ವಿಚಾರ ತನಿಖೆಗೆ ಮುಂದಾದಾಗ ಆತನ ಪತ್ನಿ ಹಾಗೂ ಪ್ರಿಯಕರ ಸೇರಿ ಕೊಲೆಗೆ ಸ್ಕೆಚ್ ಹಾಕಿದ್ರು ಎಂಬ ವಿಚಾರ ಬೆಳಕಿಗೆ ಬಂದಿತ್ತು.
ಕೊಲೆಗೆ ಸ್ಕೆಚ್ ಹಾಕಿದ್ದ ಪಲ್ಲವಿ ಹಾಗೂ ಕೊಲೆಗೆ ಯತ್ನ ಮಾಡಿದ್ದ ಅಮ್ಮಜಮ್ಮ, ಮುಗಿಲನ್, ಹರೀಶ್ ನನ್ನ ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗೂ ಪೊಲೀಸರು ಬಲೆ ಬೀಸಿದ್ದಾರೆ. ಗಂಡನನ್ನ ಕೊಂದು ಪ್ರಿಯಕರ ಜೊತೆ ಹಾಯಾಗಿ ಇರಬಹುದು ಎಂದು ಕೊಂಡ ಪಲ್ಲವಿ ಜೈಲು ಸೇರಿದ್ದಾಳೆ. ಅತ್ತ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ್ರೆ ಗಂಡನ ನಂಬಿಕೆ ಕೂಡ ಹಾಳಾಯ್ತು. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆಯೇ ಈ ಕೇಸಲ್ಲೂ ಎರಡು ಮಕ್ಕಳು ಇದೀಗ ಸಂಕಷ್ಠಕ್ಕೆ ಸಿಲುಕಿವೆ.
ಇದನ್ನೂ ಓದಿ: 10 ವರ್ಷ ವಯಸ್ಸು ಕಡಿಮೆ ಹೇಳಿ ಮದುವೆ: ‘ಬಾ ನಲ್ಲೆ ಮಧುಚಂದ್ರಕೆ’ ರೀತಿ ಪತ್ನಿ ಕೊಲೆ!
ತನ್ನ ಅಪಹರಣ ಮಾಡಲಾಗಿದೆ, ಕೆಲ ಹೊತ್ತಿನಲ್ಲಿ ನನ್ನ ಕೊಲೆ ಮಾಡುವ ಪ್ಲಾನ್ ಇದೆ ಎಂಬುದೂ ತಿಳಿದಿರಲಿಲ್ಲ ಗಂಡ ನವೀನ್‌ಗೆ. ಅದಾದ ನಂತರ ಕುಡಿದು ಮಲಗಿದವ ಎಚ್ಚರಾದಾಗ ತನ್ನೊಬ್ಬನನ್ನೇ ಬಿಟ್ಟು ಹೋದರು ಎಂದು ಬೈದುಕೊಂಡಿದ್ದನಷ್ಟೇ. ಆದರೆ ತನಗೆ ಪ್ರಾಣ ಭಿಕ್ಷೆ ಕೊಟ್ಟು ಹೋಗಿದ್ದಾರೆ ಎಂಬ ಅರಿವು ಅವನಿಗಿರಲಿಲ್ಲ. ಬೆಂಗಳೂರಿಗೆ ವಾಪಸ್ ಬಂದು ಪೊಲೀಸ್ ಠಾಣೆಗೆ ಕರೆದಾಗಲೂ ಆತನ ಕೊಲೆಗೆ ಹೆಂಡತಿ ಸುಪಾರಿ ಕೊಟ್ಟಿದ್ದಾಳೆ ಎಂಬುದು ತಿಳಿದಿರಲಿಲ್ಲ. ಈ ಎಲ್ಲಾ ವೃತ್ತಾಂತಗಳು ಆತನ ಸುತ್ತವೇ ನಡೆಯುತ್ತಿದ್ದರೂ ಅಮಾಯಕ ನವೀನ್‌ಗೆ ಗೊತ್ತೇ ಇರಲಿಲ್ಲ. ಇದೀಗ ಎಲ್ಲವನ್ನೂ ತಿಳಿದ ನಂತರ ಹೌಹಾರಿದ್ದಾನೆ.