ಭಾರತದ ಮೊದಲ ಮಹಿಳಾ ಸರಣಿ ಹಂತಕಿ ಬೆಂಗಳೂರಿನ ಸೈನೈಡ್ ಮಲ್ಲಿಕಾ! 10 ವರ್ಷ ತಪ್ಪಿಸಿಕೊಂಡಿದ್ದು ಹೇಗೆ?
ಸೈನೈಡ್ ಮಲ್ಲಿಕಾ ಎಂದು ಕುಖ್ಯಾತಿ ಪಡೆದಿರುವ ಕೆ.ಡಿ.ಕೆಂಪಮ್ಮ ಭಾರತದ ಮೊದಲ ಮಹಿಳಾ ಸರಣಿ ಕೊಲೆಗಾರ್ತಿಯಾಗಿದ್ದಾಳೆ. ಈಕೆ ಬೆಂಗಳೂರಿನವಳು ಎಂಬುದು ಗಮನಾರ್ಹ. ಈಕೆಯ ಸಂಪೂರ್ಣ ಮರ್ಡರ್ ಮಿಸ್ಟರಿ ಇಲ್ಲಿದೆ.
ಬೆಂಗಳೂರು (ಜು.9): 2007 ರಲ್ಲಿ, ಬೆಂಗಳೂರಿನ ಹೊರವಲಯದಲ್ಲಿ, ಮುಖ್ಯವಾಗಿ ದೇವಾಲಯಗಳಲ್ಲಿ ನಿಗೂಢ ಸಂದರ್ಭಗಳಲ್ಲಿ ಅನೇಕ ಮಹಿಳೆಯರು ಸಾವನ್ನಪ್ಪಿದ್ದು, ಸಾರ್ವಜನಿಕರಲ್ಲಿ ಭೀತಿಯನ್ನು ಉಂಟುಮಾಡಿತ್ತು. ಇದಕ್ಕೆ ಕಾರಣವೇ ಸೈನೈಡ್ ಮಲ್ಲಿಕಾ. ಸೈನೈಡ್ ಮಲ್ಲಿಕಾ ಎಂದು ಕುಖ್ಯಾತಿ ಪಡೆದಿರುವ ಕೆ.ಡಿ.ಕೆಂಪಮ್ಮ ಭಾರತದ ಮೊದಲ ಮಹಿಳಾ ಸರಣಿ ಕೊಲೆಗಾರ್ತಿಯಾಗಿದ್ದಾಳೆ. ಈಕೆ ಬೆಂಗಳೂರಿನವಳು ಎಂಬುದು ಗಮನಾರ್ಹ ವಿಷಯ.
ಈಕೆ ಮಾಡಿದ ಕೊಲೆ ಹೇಗಿರುತ್ತಿತ್ತೆಂದರೆ ಪೊಲೀಸರಿಗೂ ಕೂಡ ಕೊಲೆಯ ಸಣ್ಣ ಸುಳಿವು ಕೂಡ ಸಿಗುತ್ತಿರಲಿಲ್ಲ. ದೇಹದಲ್ಲಿ ಯಾವುದೇ ಗಾಯಗಳಿರುತ್ತಿರಲಿಲ್ಲ. ಬಹುತೇಕ ಹೆಣಗಳು ಕೊಳೆತ ಸ್ಥಿತಿಯಲ್ಲೇ ಪತ್ತೆಯಾಗುತ್ತಿದ್ದವು. ಕೆಲವು ಪ್ರಕರಣಗಳಲ್ಲಿ ಅಸಹಜ ಸಾವು ಎಂದು ದಾಖಲಿಸಲಾಗುತ್ತಿತ್ತು. ಆದರೆ ಅಪರಾಧಿ ಕೆ ಡಿ ಕೆಂಪಮ್ಮ ಅಲಿಯಾಸ್ ಸೈನೈಡ್ ಮಲ್ಲಿಕಾಳ ಕೃತ್ಯವನ್ನು ಕಂಡುಹಿಡಿಯಲು ಪೊಲೀಸ್ ಇಲಾಖೆಗೆ ಸುಮಾರು 1 ದಶಕವೇ ಬೇಕಾಯಿತು.
ಹೆಂಡತಿಯ ಕೊಂದು ಮೆದುಳು ತಿಂದ ಗಂಡ, ತಲೆಬುರುಡೆ ಸಿಗರೇಟ್ ಬೂದಿ ಹಾಕಲು ಬಳಕೆ!
ಸದ್ಯ ಈಕೆ ಕಂಬಿಗಳ ಹಿಂದೆ ಇದ್ದರೂ ಆಕೆಯ ಹೆಸರು ಕೇಳಿದರೆ ಪೊಲೀಸರಲ್ಲಿ ಮತ್ತು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತಿದೆ. ಅಂತಿಮವಾಗಿ ಈಕೆ ಆರು ಕೊಲೆ ಮಾಡಿರುವ ಬಗ್ಗೆ ಬೆಳಕಿಗೆ ಬಂತು, ಆದರೂ ಸೈನೈಡ್ ಮಲ್ಲಿಕಾಳ ಕೊಲೆಯಲ್ಲಿ ಹೆಚ್ಚಿನ ನಿಗೂಢತೆ ಮುಂದುವರೆದಿದೆ, ಏಕೆಂದರೆ ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್ ಅವರಂತಹ ಕೆಲವು ಅಧಿಕಾರಿಗಳು ಅವಳು 13 ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾಳೆ ಎನ್ನುವ ಅನುಮಾನ ವ್ಯಕ್ತಪಡಿಸುತ್ತಾರೆ.
ಸೈನೈಡ್ ಮಲ್ಲಿಕಾ ಆಗುವ ಮುನ್ನ ಕೆಂಪಮ್ಮ ಯಾರು?
1970 ರ ದಶಕದಲ್ಲಿ ಬೆಂಗಳೂರಿನ ಹೊರವಲಯದ ಭಾಗದ ಹಳ್ಳಿಯಾದ ಕಗ್ಗಲಿಪುರದಲ್ಲಿ ಜನಿಸಿದ ಕೆಂಪಮ್ಮ ಹೆಚ್ಚು ಶಾಲೆಗೆ ಹೋಗಲಿಲ್ಲ. ಬೆಂಗಳೂರಿನಲ್ಲಿ ವಾಸಿಸುವ ಟೈಲರ್ ಅನ್ನು ವಿವಾಹವಾಗಿ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾನೆ. ಬೇಗ ಶ್ರೀಮಂತಳಾಗಬೇಕೆಂಬ ಕನಸು ಕಾಣುತ್ತಿದ್ದ ಕೆಂಪಮ್ಮ ಮನೆ ಬಳಿಯೇ ಚಿಟ್ ಫಂಡ್ ಯೋಜನೆ ಆರಂಭಿಸಿ ಅಪಾರ ನಷ್ಟ ಅನುಭವಿಸಿದಳು. ಇದಾದ ಬಳಿಕ ಪತಿ ಅವಳನ್ನು ತೊರೆದನು. ಹಣ ಸಂಪಾದಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲದೆ, ಕೆಂಪಮ್ಮ ಮನೆಕೆಲಸಕ್ಕೆ ಸೇರಿಕೊಂಡಳು, ಅದೇ ಮನೆಗಳಿಂದ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದಳು. ಒಮ್ಮೆ ಬಿಡದಿ ಪೊಲೀಸರು ಆಕೆಯನ್ನು ಕಳ್ಳತನ ಪ್ರಕರಣದಲ್ಲಿ ಬಂಧಿಸಿ ಆರು ತಿಂಗಳು ಜೈಲಿನಲ್ಲಿಟ್ಟಿದ್ದರು.
ಎಣ್ಣೆ ಏಟಲ್ಲಿದ್ದ ಯುವಕರಿಂದ ಕೆಎಸ್ಆರ್‌ಟಿಸಿ ಬಸ್ ಚಾಲಕನ ಮೇಲೆ ಹಲ್ಲೆ
ಸೈನೈಡ್ ಬಗ್ಗೆ ಮಲ್ಲಿಕಾಗೆ ತಿಳಿದಿದ್ದು ಹೇಗೆ? ಕೊಲೆ ನಡೆಸಲು ತಂತ್ರ ಹೇಗೆ ಹಣೆಯುತ್ತಿದ್ದಳು?
ಹಣ ಸಂಪಾದನೆಗೆ ಇಳಿದ ಕೆಂಪಮ್ಮ ಅಕ್ಕಸಾಲಿಗನ ಬಳಿ ಕೆಲಸಕ್ಕೆ ಸೇರಿಕೊಂಡಳು. ಅಲ್ಲಿ ಆಕೆಗೆ ಸೈನೈಡ್ ಬಗ್ಗೆ ಮೊದಲ ಬಾರಿಗೆ ತಿಳಿಯಿತು. ಇದು ಹೆಚ್ಚು ವಿಷಕಾರಿ ರಾಸಾಯನಿಕವಾಗಿದ್ದು, ಅಂತಿಮವಾಗಿ ತನ್ನ ಕೃತ್ಯಗಳಿಗೆ ಅದೇ ಸೈನೈಡ್ ಅನ್ನು ಬಳಸಲು ಪ್ರಾರಂಭಿಸಿದಳು. ಅವಳ ಟಾರ್ಗೆಟ್ ಇದ್ದಿದ್ದೇ ದೇವಾಲಯಕ್ಕೆ ತೆರಳುವ ಮಹಿಳಾ ಭಕ್ತರು ಮತ್ತು ಅವರು ಧರಿಸಿದ್ದ ಬಂಗಾರ. ಮೊದಲಿಗೆ ದೇವಾಲಯಕ್ಕೆ ಬರುವ ಭಕ್ತರನ್ನು ಚೆನ್ನಾಗಿ ಮಾತನಾಡಿಸಿ ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದಳು. ಬಳಿಕ ಅವರೊಂದಿಗೆ ಉತ್ತಮ ಬಾಂದವ್ಯ ಹೊಂದಿರುತ್ತಿದ್ದಳು.
ಇಷ್ಟು ಮಾತ್ರವಲ್ಲ ಕಷ್ಟ ಎಂದು ದೇವಾಲಯಕ್ಕೆ ಬಂದವರಿಗೆ ಪೂಜೆಗಳನ್ನು ಮಾಡಿಸಿ ಎಂದು ಸಾಂತ್ವಾನದ ಮಾತುಗಳನ್ನು ಹೇಳುತ್ತಿದ್ದಳು. ಮಾತ್ರವಲ್ಲ ಮಹಿಳೆಯರನ್ನು ಮಂಡಲ ಪೂಜೆಗೆಂದು ಹೊರವಲಯಲ್ಲಿರುವ ದೇವಾಲಯಕ್ಕೆ ಕರೆಸುತ್ತಿದ್ದಳು. ಪೂಜೆಗೆ ಬರುವಾಗ ಬೆಲೆಬಾಳುವ ಚಿನ್ನ, ಸೀರೆಗಳನ್ನು ಧರಿಸಿ ಬರುವಂತೆ ಹೇಳುತ್ತಿದ್ದಳು. ನೊಂದ ಮಹಿಳೆಯರಿಗೆ ಕಣ್ಣು ಮುಚ್ಚಿ ಪ್ರಾರ್ಥಿಸಲು ಹೇಳಿ ಸೈನೈಡ್ ಮಿಶ್ರಿತ ತೀರ್ಥವನ್ನು ಕುಡಿಯಲು ಕೊಡುತ್ತಿದ್ದಳು.
1999 ರಲ್ಲಿ 30 ವರ್ಷದ ಶ್ರೀಮಂತ ಮಹಿಳೆ ಮಮತಾ ರಾಜನ್ ಅನ್ನು ಗುರಿಯಾಗಿಸಿಕೊಂಡು ಕೆಂಪಮ್ಮ ತನ್ನ ಮೊದಲ ಕೊಲೆ ಮಾಡಿದ್ದಳು. 2000 ರಲ್ಲಿ, ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಯಿತು ಮತ್ತು ಆರು ತಿಂಗಳು ಜೈಲಿನಲ್ಲಿಡಲಾಯಿತು. ಇದಾಗಿ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದಳು. ಹೀಗೆ 2006ರಲ್ಲಿ ಅತಿಥಿ ಗೃಹದಲ್ಲಿ ಶವ ಪತ್ತೆಯಾದ ಬೆಂಗಳೂರು ನಿವಾಸಿ ರೇಣುಕಾ ಕೊಲೆ ಪ್ರಕರಣದ ಪೊಲೀಸ್ ವರದಿಯಲ್ಲಿ ಕೊಲೆಗಾರ್ತಿ ಜಯಮ್ಮ ಎಂದು ನಮೂದಿಸಲಾಗಿದೆ. ಇದೇ ರೀತಿ ಕೆಂಪಮ್ಮ ತನ್ನ ಸುಳಿವು ಸಿಗದಂತೆ ಹೆಸರು ಬದಲಿಸಿಕೊಳ್ಳುತ್ತಿದ್ದಳು.
2007 ರಲ್ಲಿ, 10 ಅಕ್ಟೋಬರ್ ಮತ್ತು 18 ಡಿಸೆಂಬರ್ ನಡುವೆ ಐದು ಮಹಿಳೆಯರನ್ನು ಕೆಂಪಮ್ಮ ಕೊಂದಳು ಆಕೆಯ ಎರಡನೇ ಬಲಿಪಶು 52 ವರ್ಷ ವಯಸ್ಸಿನ ಸಾತನೂರಿನ ಎಲಿಜಬೆತ್ . ಕಾಣೆಯಾದ ಮೊಮ್ಮಗಳನ್ನು ಹುಡುಕಲು ಎಲಿಜಬೆತ್ ಪ್ರಾರ್ಥಿಸುತ್ತಿದ್ದಳು. ಕೆಂಪಮ್ಮ ಆಕೆಯನ್ನು ಕಬಾಲಮ್ಮನ ದೇವಸ್ಥಾನಕ್ಕೆ ಕರೆದೊಯ್ದು ಕೊಂದಿದ್ದಾಳೆ. ಕೆಂಪಮ್ಮನ ಮೂರನೇ ಬಲಿಪಶು ಯಶೋಧಮ್ಮ, ವಯಸ್ಸು 60. ಅವರು ಡಿಸೆಂಬರ್ 2007 ರಲ್ಲಿ ಕ್ಯಾತ-ಸಂದ್ರದ ಸಿದ್ದಗಂಗಾ ಮಠದಲ್ಲಿ ಕೊಲ್ಲಲ್ಪಟ್ಟರು. ಕೆಂಪಮ್ಮ ಅವರು ಅಸ್ತಮಾದಿಂದ ಮುಕ್ತಿ ನೀಡಲು ಧಾರ್ಮಿಕ ಕ್ರಿಯೆಯನ್ನು ಮಾಡುವುದಾಗಿ ಭರವಸೆ ನೀಡಿದರು. ನಾಲ್ಕನೇ ಬಲಿಯಾದವರು 60 ವರ್ಷದ ಮುನಿಯಮ್ಮ, ಅವರು ಭಕ್ತಿಗೀತೆಗಳನ್ನು ಹಾಡಲು ಬಯಸಿದ್ದರು. ಯಲಹಂಕದವರಾದ ಆಕೆಯನ್ನು ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಹತ್ಯೆ ಮಾಡಲಾಗಿತ್ತು. ಆಕೆಯ ಐದನೇ ಬಲಿಪಶು 60 ವರ್ಷ ವಯಸ್ಸಿನ ಪಿಳ್ಳಮ, ಮದ್ದೂರು ವ್ಯದ್ಯನಾಥಪುರದಲ್ಲಿ ಕೊಲ್ಲಲ್ಪಟ್ಟರು. ಪಿಳ್ಳಮ್ಮ ಹೆಬ್ಬಾಳ ದೇವಸ್ಥಾನದ ಅರ್ಚಕರಾಗಿದ್ದರು. ಹೆಬ್ಬಾಳ ದೇವಸ್ಥಾನಕ್ಕೆ ಹೊಸ ಕಮಾನು ಪ್ರಾಯೋಜಿಸುವುದಾಗಿ ಕೆಂಪಮ್ಮ ಪಿಳ್ಳಮ್ಮನಿಗೆ ತಿಳಿಸಿದರು. ಕೆಂಪಮ್ಮನ ಕೊನೆಯ ಬಲಿಪಶು ನಾಗವೇಣಿ, 30 ವರ್ಷದ ಮಹಿಳೆ, ಅವಳು ಮಕ್ಕಳಿಲ್ಲದ ಕಾರಣ ಗರ್ಭಿಣಿಯಾಗಲು ಪ್ರಾರ್ಥಿಸುತ್ತಿದ್ದಳು.
ವಿಶೇಷವೆಂದರೆ ಕೊಲೆ ಮಾಡಿದ ಬಳಿಕವೂ ಆಕೆ ಮನೆ ಕೆಲಸಗಳಿಗೆ ಹೋಗುತ್ತಿದ್ದಳು. ಅನುಮಾನ ಬರಬಾರದೆಂಬ ಕಾರಣಕ್ಕೆ ಈಕೆ ಈ ರೀತಿ ನಡೆದುಕೊಳ್ಳುತ್ತಿದ್ದಳು. ಈಕೆ ಮಾಡಿದ ಕೊನೆಯ ಕೊಲೆಯು ಡಿಸೆಂಬರ್ 18, 2007 ರಂದು ಅದು ನಾಗವೇಣಿ ಎಂಬಾಕೆಯದ್ದು, ಆ ಸಮಯದಲ್ಲಿ ಕೆಂಪಮ್ಮ ತಾನು ತಂಗಿದ್ದ ಲಾಡ್ಜ್‌ನಲ್ಲಿ ಅವಳ ಹೆಸರನ್ನು 'ಮಲ್ಲಿಕಾ' ಎಂದು ಇಟ್ಟಿದ್ದಳು. ಹೀಗಾಗಿ ಕೆಂಪಮ್ಮ ಅವಳ ಹೆಸರಿಗೆ ಸಮನಾರ್ಥಕವಾಗಿ ಬೆಳೆದ ಹೆಸರು ಸೈನೈಡ್ ಮಲ್ಲಿಕಾ.
ಸಿಕ್ಕಿಬಿದ್ದಿದ್ದೇಗೆ? ಬೆಂಗಳೂರಿನ ಮಹಿಳೆಯರ ಹತ್ಯೆಗಳು ಮುಖ್ಯವಾಗಿ ದೇಗುಲ ಪಟ್ಟಣಗಳಲ್ಲಿ ನಡೆಯುತ್ತಿದ್ದರೆ, ಕೆಲವು ಪ್ರಕರಣಗಳನ್ನು ಅಸ್ವಾಭಾವಿಕ ಸಾವು ಎಂದು ವರದಿ ಬರೆಯಲಾಗಿತ್ತು. ಸೈನೈಡ್ ದೇಹ ಹೊಕ್ಕಿದ್ದ ಕಾರಣಕ್ಕೆ ಬೇಗ ಮೃತದೇಹ ಕೊಳೆಯುತ್ತಿತ್ತು. ಹೀಗಾಗಿ ತನಿಖೆ ಪೊಲೀಸರಿಗೂ ಸವಾಲಾಗಿತ್ತು. ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ನಿವೃತ್ತರಾದ ಉಮೇಶ್ ಅವರು ಡಿಸೆಂಬರ್ 2007 ರಲ್ಲಿ ಮದ್ದೂರಿನ ಲಾಡ್ಜ್‌ನಲ್ಲಿ ಶವ ಪತ್ತೆಯಾದ ಯಶೋಧಮ್ಮ ಅವರ ಕುರಿತು ಪತ್ರಿಕೆಯ ಲೇಖನವನ್ನು ಓದಿದಾಗ ಹಳೆಯ ನಿಗೂಢ ಸಾವುಗಳಿಗೆ ಇದು ಕನೆಕ್ಟ್ ಆಗುತ್ತಿತ್ತು ಎಂದಿದ್ದಾರೆ.
ಹೀಗೆ ಯಶೋಧಮ್ಮ ಅವರ ಮೊಬೈಲ್ ಸಂಖ್ಯೆಯನ್ನು ಐಎಂಇಐ ನಂಬರ್ ಮೂಲಕ ಮೊಬೈಲ್ ಟ್ರ್ಯಾಕಿಂಗ್ ಮಾಡಿದಾಗ ಸೈನೈಡ್ ಮಲ್ಲಿಕಾ ಸಿಕ್ಕಿಬಿದ್ದಿದ್ದಾಳೆ. ಬೆಂಗಳೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಆಕೆಯನ್ನು ಅರೆಸ್ಟ್ ಮಾಡಿದಾಗ ಸಿಕ್ಕಿದ ಬ್ಯಾಗ್ ನಲ್ಲಿ ಬೆಲೆ ಬಾಳುವ ಚಿನ್ನಾಭರಣ ಮತ್ತು ಸೈನೈಡ್ ಪತ್ತೆಯಾಗಿತ್ತು. ಈ ಆಭರಣಗಳು ಸಂತ್ರಸ್ತರೊಬ್ಬರಿಗೆ ಸೇರಿದ್ದಾಗಿತ್ತು. ಈಕೆಯನ್ನು ಹಿಡಿಯಲು ನಿರ್ಣಾಯಕ ಲಿಂಕ್ ಒಂದು ಮೊಬೈಲ್ ಆಗಿತ್ತು.
ಪೊಲೀಸರ ಪ್ರಕಾರ ಆಕೆಯ ಮಗನಿಗೆ ಕೊಲೆಗಳ ಬಗ್ಗೆ ತಿಳಿದಿಲ್ಲ. ಆದರೆ ಮಗನಿಗಾಗಿ ಮಲ್ಲಿಕಾ ಇಂಡಿಕಾ ಕಾರು ಖರೀದಿಸಿದ್ದಳು. ಹೆಣ್ಣು ಮಕ್ಕಳಿಬ್ಬರಿಗೆ ಮದುವೆಯಾಗಿ ಬೇರೆಯೇ ನೆಲೆಸಿದ್ದಾರೆ. ಅವರು ಈಕೆಯೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಇನ್ನು ಪೊಲೀಸ್ ಇನ್ಸ್‌ಪೆಕ್ಟರ್ ಉಮೇಶ್ ಪ್ರಕಾರ ಆಕೆಯ ವಿರುದ್ಧ 13 ಕೊಲೆ ಆರೋಪ ಇದ್ದರೂ ಕೇವಲ 6 ಮಾತ್ರ ಸಾಬೀತಾಗಿ ಶಿಕ್ಷೆಯಾಗಿದೆ.
2010 ರಲ್ಲಿ ನ್ಯಾಯಾಲಯವು ಮುನಿಯಮ್ಮ ಕೊಲೆ ಪ್ರಕರಣದಲ್ಲಿ ಸೈನೈಡ್ ಮಲ್ಲಿಕಾಗೆ ಮರಣದಂಡನೆ ವಿಧಿಸಿತು. ಕರ್ನಾಟಕದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಮೊದಲ ಮಹಿಳಾ ಅಪರಾಧಿ. 2012ರಲ್ಲಿ ಮತ್ತೊಂದು ನ್ಯಾಯಾಲಯ ನಾಗವೇಣಿ ಹತ್ಯೆ ಪ್ರಕರಣದಲ್ಲಿ ಆಕೆಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತಾದರೂ ನಂತರ ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಯಿತು. ಸದ್ಯ 50ರ ಹರೆಯದ ಸೈನೈಡ್ ಮಲ್ಲಿಕಾ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. 2017 ರಲ್ಲಿ, ತಮಿಳುನಾಡು ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಆಪ್ತ ಸಹಾಯಕಿಯಾಗಿದ್ದ ಎಐಎಡಿಎಂಕೆ ಮಾಜಿ ಕಾರ್ಯದರ್ಶಿ ವಿ ಕೆ ಶಶಿಕಲಾ ಅವರು ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದಾಗ, ಕೆಂಪಮ್ಮ ನೆರೆಯ ಸೆಲ್‌ನಲ್ಲಿದ್ದಳು. ವಿ ಕೆ ಶಶಿಕಲಾಳ ಜೈಲು ಸ್ನೇಹಿತೆ ಎಂದು ಆಗ ಸುದ್ದಿಯಾಗಿತ್ತು. ಇದಾದ ಬಳಿಕ ಶಶಿಕಲಾ ಅವರಿಗೆ ಜೀವ ಬೆದರಿಕೆ ಇದ್ದ ಕಾರಣ ಕೆಂಪಮ್ಮ ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸಲಾಗಿತ್ತು.