Varthur police assault on woman ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ಆರೋಪದ ಮೇಲೆ ಪಶ್ಚಿಮ ಬಂಗಾಳ ಮೂಲದ ಮನೆಗೆಲಸದ ಮಹಿಳೆಗೆ ವರ್ತೂರು ಪೊಲೀಸರು ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ.ತೀವ್ರವಾಗಿ ಗಾಯಗೊಂಡ ಮಹಿಳೆಯ ಆರೋಗ್ಯವನ್ನು ಪಶ್ಚಿಮ ಬಂಗಾಳ ಸಿಎಂ ಕಚೇರಿ ವಿಚಾರಿಸಿದೆ.

ಬೆಂಗಳೂರು (ನ.3): ಸೀರೆ ಕದ್ದಿದ್ದಕ್ಕೆ ಸಾರ್ವಜನಿಕವಾಗಿ ಮಹಿಳೆಯನ್ನು ಒದ್ದು ಹಲ್ಲೆ ಮಾಡಿದ ಘಟನೆಯ ಮಾಸುವ ಮುನ್ನವೇ, ಬೆಂಗಳೂರಿನ ವರ್ತೂರು ಪೊಲೀಸರಿಂದ ಮತ್ತೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಪೊಲೀಸರು ಮಹಿಳೆಯ ಖಾಸಗಿ ಭಾಗಗಳ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ.. ಈ ವಿಚಾರಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಚೇರಿಯಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಹಲ್ಲೆಗೊಳಗಾದ ಮಹಿಳೆಯನ್ನು ನೇರವಾಗಿ ಸಂಪರ್ಕಿಸಿ ಆರೋಗ್ಯ ವಿಚಾರಿಸಿದ್ದಾರೆ.

ವರ್ತೂರು ಪೊಲೀಸರಿಂದ ಮನಸೋ ಇಚ್ಛೆ ಹಲ್ಲೆ?

34 ವರ್ಷ ವಯಸ್ಸಿನ ಸುಂದರಿ ಬೀಬಿ ಎಂಬ ಮಹಿಳೆ, ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದು, ಬೆಂಗಳೂರಿನ ಶೋಭಾ ಅಪಾರ್ಟ್‌ಮೆಂಟ್‌ನ ಒಂದು ಫ್ಲ್ಯಾಟ್‌ನಲ್ಲಿ ಮನೆ ಕೆಲಸ ಮಾಡುತ್ತಿದ್ದರು. ಈ ವೇಳೆ ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ನಡೆದಿದೆ ಎಂದು ಆರೋಪಿಸಿ ವರ್ತೂರು ಪೊಲೀಸರು ಸುಂದರಿ ಬೀಬಿ ಎಂಬ ಮಹಿಳೆಯನ್ನ ಹಿಡಿದು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. 'ಇವರು ಪೊಲೀಸರೋ? ರೌಡಿಗಳೋ?' ಎಂದು ಮಹಿಳೆಯ ಕುಟುಂಬಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳೆಯ ಖಾಸಗಿ ಅಂಗಗಳಿಗೆ ಪೆಟ್ಟು:

ಹಲ್ಲೆಯಲ್ಲಿ ಮಹಿಳೆಯ ಕೈ, ಕಾಲು, ತಲೆಗೆ ಹೊಡೆದು, ಖಾಸಗಿ ಅಂಗಗಳ ಮೇಲೆಯೂ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಇದರಿಂದ ರಕ್ತ ಹೆಪ್ಪುಗಟ್ಟಿದ್ದು, ಶೌಚಕ್ಕೆ ಹೋಗುವುದಕ್ಕೂ ಸಾಧ್ಯವಾಗುತ್ತಿಲ್ಲ. ಪೊಲೀಸರ ಹೊಡೆತಕ್ಕೆ ನಲುಗಿ, ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಹಲ್ಲೆಯ ತೀವ್ರತೆ ಸ್ಪಷ್ಟವಾಗಿ ಬೆಳಕಿಗೆ ಬಂದಿದೆ. ಈ ಘಟನೆಯ ವಿಚಾರವನ್ನು ಮಹಿಳೆ ಪಶ್ಚಿಮ ಬಂಗಾಳದ ರಾಜ್ಯಸಭಾ ಸದಸ್ಯ ಸಮೀರ್ ಉಲ್ ಇಸ್ಲಾಂಗೆ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿರುವ ಸಮೀರ್ ಉಲ್ ಇಸ್ಲಾಂ, ಈ ವಿಷಯವನ್ನು ನೇರವಾಗಿ ಸಿಎಂ ಮಮತಾ ಬ್ಯಾನರ್ಜಿಗೆ ತಿಳಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಸಿಎಂ ಕಚೇರಿಯ ಸಿಬ್ಬಂದಿ ಹಲ್ಲೆಗೊಳಗಾದ ಮಹಿಳೆಯನ್ನು ಸಂಪರ್ಕಿಸಿ, ಫೋನ್ ಮೂಲಕ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

ಸದ್ಯ ಬೆಂಗಳೂರಿನ ವಿಮೋಚನಾ ಮಹಿಳಾ ಹೆಲ್ಪ್‌ಲೈನ್‌ನಲ್ಲಿ ಇರುವ ಮಹಿಳೆಯ ಸ್ಥಿತಿಯ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಲಾಗಿದೆ. ಉತ್ತರ ಭಾರತದ ಮಹಿಳೆಯಾಗಿರುವ ಸುಂದರಿ ಬೀಬಿ, ಈ ಹಲ್ಲೆಯಿಂದ ಭಯಭೀತರಾಗಿ ಇದ್ದಾರೆ. ವರ್ತೂರು ಪೊಲೀಸರ ಮೇಲಿನ ಈ ಆರೋಪಗಳು ಗಂಭೀರವಾಗಿವೆ.