Bengaluru: ಮನೆಗಳ್ಳತನಕ್ಕೆಂದೆ ತಮಿಳುನಾಡಿನಿಂದ ಬರುವ ಅಂತಾರಾಜ್ಯ ಕಳ್ಳನ ಬಂಧನ
ನಗರದಲ್ಲಿ ಮನೆಗಳ್ಳತನದಲ್ಲಿ ತೊಡಗಿದ್ದ ಕುಖ್ಯಾತ ಖದೀಮನೊಬ್ಬನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಸೆರೆ ಹಿಡಿದು 17.70 ಲಕ್ಷದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಬೆಂಗಳೂರು (ಜೂ.10): ನಗರದಲ್ಲಿ ಮನೆಗಳ್ಳತನದಲ್ಲಿ ತೊಡಗಿದ್ದ ಕುಖ್ಯಾತ ಖದೀಮನೊಬ್ಬನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಸೆರೆ ಹಿಡಿದು 17.70 ಲಕ್ಷದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆ ಮೂಲದ ಮಣಿ ಅಲಿಯಾಸ್ ನಾಗಮಣಿ ಬಂಧಿತ ಆರೋಪಿಯಾಗಿದ್ದು, ಈತನಿಂದ 319 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಬಿಇಎಲ್ ಲೇಔಟ್‌ನ ಕೆ.ಪ್ರಶಾಂತ್ ಎಂಬುವರ ಮನೆಗಳ್ಳತನ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಸುಂದರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಕೆ.ಎಲ್.ಪ್ರಭು ನೇತೃತ್ವದ ತಂಡ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯ ನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಮಿಳುನಾಡಿನಿಂದ ಬಂದು ಕಳ್ಳತನ: ಕಳೆದ ಮೂರು ದಶಕಗಳಿಂದ ಕಳ್ಳತನ ಮಾಡುವುದೇ ಮಣಿಯ ವೃತ್ತಿಯಾಗಿದ್ದು, ನಗರದ ವಿವಿಧ ಠಾಣೆಗಳಲ್ಲಿ ಆತನ ಮೇಲೆ ಪ್ರಕರಣಗಳು ದಾಖಲಾಗಿವೆ. ಕೆಲ ದಿನಗಳ ಹಿಂದೆ ಮನೆಗಳ್ಳತನ ಪ್ರಕರಣದಲ್ಲಿ ಆತನನ್ನು ಬಂಧಿಸಿ ಸಂಜಯನಗರ ಠಾಣೆ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದ ಆತ ಮತ್ತೆ ತನ್ನ ಚಾಳಿ ಮುಂದುವರೆಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಆಗಾಗ್ಗೆ ಬೈಯುತ್ತಿದ್ದ ಅಜ್ಜಿಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದ ಮೊಮ್ಮಗನ ಬಂಧನ
ಮನೆಗಳ್ಳತನ ಸಲುವಾಗಿ ತಮಿಳುನಾಡಿನಿಂದ ನಗರಕ್ಕೆ ಬಂದು ವಸತಿ ಪ್ರದೇಶಗಳಲ್ಲಿ ರಾತ್ರಿ ವೇಳೆ ಓಡಾಡಿ ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ. ಕೃತ್ಯ ಎಸಗಿದ ಬಳಿಕ ಮುಂಜಾನೆ ಬಸ್ ಹತ್ತಿ ತಮಿಳುನಾಡಿಗೆ ಹೋಗುತ್ತಿದ್ದ. ಇತ್ತೀಚಿಗೆ ವಿದ್ಯಾರಣ್ಯಪುರ ಸಮೀಪದ ಬಿಇಎಲ್ ಲೇಔಟ್ 1 ಮತ್ತು 2ನೇ ಹಂತದಲ್ಲಿ ಸರಣಿ ಮನೆಗಳ್ಳತನ ಕೃತ್ಯಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೇಪ್ರಸಾದ್ ಅವರು ರಚಿಸಿದ್ದ ವಿಶೇಷ ತಂಡ ಆರೋಪಿಯನ್ನು ಎರಡು ವಾರಗಳ ಸತತ ಪ್ರಯತ್ನದ ಬಳಿಕ ಬಂದಿಸಿದೆ.
ಕಳವು ಮಾಡಿದ ಬಳಿಕ ಪ್ರಿಯತಮೆಗೆ ಕರೆ: ಮನೆಗಳ್ಳತನ ಎಸಗಿದ ಬಳಿಕ ಆ ಪ್ರದೇಶದ ನಿರ್ಮಾಣ ಹಂತದ ಕಟ್ಟಡಕ್ಕೆ ತೆರಳಿ ಮುಂಜಾನೆವರೆಗೆ ಇರುತ್ತಿದ್ದ. ಕೃತ್ಯ ಎಸಗುವ ವೇಳೆ ಪೊಲೀಸರಿಗೆ ಸುಳಿವು ಸಿಗುತ್ತದೆ ಎಂಬ ಕಾರಣಕ್ಕೆ ಮೊಬೈಲ್ ಬಳಸುತ್ತಿರಲಿಲ್ಲ. ಅಲ್ಲದೆ ವಾಚ್ ಸಹ ಆತ ಕಟ್ಟುತ್ತಿರಲಿಲ್ಲ. ಹೀಗಾಗಿ ನಿರ್ಜನ ಕಟ್ಟಡದಲ್ಲೇ ಅಡಗಿ ಕುಳಿತಿರುತ್ತಿದ್ದ ಆರೋಪಿ, ಜನರು ವಾಕಿಂಗ್ ಬಂದಾಗ ಸಮಯ 5.30 ಗಂಟೆಯಾಗಿದೆ ಎಂದು ತಿಳಿದು ಆ ಕಟ್ಟಡದ ಹಿಂಭಾಗದಿಂದ ಕೆಳಗಿಳಿದು ಬಳಿಕ ಬಸ್ ಹತ್ತಿ ಪರಾರಿಯಾಗುತ್ತಿದ್ದ. ಕಳ್ಳತನ ಕೃತ್ಯ ಎಸಗಿದ ಬಳಿಕ ಪ್ರಿಯತಮೆ ಕರೆ ಮಾಡುತ್ತಿದ್ದ. ತಾನು ಕರೆ ಮಾಡಿದಾಗ ಕರೆ ಸ್ವೀಕರಿಸದೆ ಹೋದರೆ ಪೊಲೀಸರಿಗೆ ಮಣಿ ಸಿಕ್ಕಿಬಿದ್ದಿದ್ದಾನೆ ಎಂಬುದು ಆತನ ಪ್ರಿಯತಮೆಗೆ ಗೊತ್ತಾ ಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಕಾರು ಡಿಕ್ಕಿ, ಪಾದಚಾರಿ ಸಾವು: ನಡು ರಸ್ತೆಯಲ್ಲಿಯೇ ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ
ರಾತ್ರಿ 9-11 ಹಾಗೂ 11-3 ಗಂಟೆ ವೇಳೆ ಕೃತ್ಯ: ತಮಿಳುನಾಡಿನಿಂದ ರಾತ್ರಿ 7 ಗಂಟೆಗೆ ಮೆಜೆಸ್ಟಿಕ್‌ಗೆ ಬರುತ್ತಿದ್ದ ಮಣಿ, ಅಲ್ಲೇ ಊಟ ಕಟ್ಟಿಸಿಕೊಂಡು ವಿದ್ಯಾರಣ್ಯಪುರ ಮಾರ್ಗದ ಬಿಎಂಟಿಸಿ ಬಸ್ಸೇರುತ್ತಿದ್ದ. ನಂತರ ಕೊನೆ ಸ್ಟಾಪ್‌ನಲ್ಲಿ ಬಸ್ಸಿನಿಂದಿಳಿದು ಅಲ್ಲೇ ಸುತ್ತಾಡುತ್ತಾ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದನು. ಕೆಲವು ಕೃತ್ಯಗಳು ರಾತ್ರಿ 9 ರಿಂದ 11 ನಡೆಸಿದ್ದ ಆರೋಪಿ, ಪೊಲೀಸರ ದಿಕ್ಕು ತಪ್ಪಿಸಲು ಕೆಲವು ಕೃತ್ಯಗಳನ್ನು ರಾತ್ರಿ 11 ರಿಂದ ನಸುಕಿನ 3 ಗಂಟೆಯೊಳಗೆ ಎಸಗಿ ಪರಾರಿಯಾಗಿದ್ದ.