ಕಟ್ಟಡ ಕಾಮಗಾರಿಯ ವೇಳೆ ತಾತ್ಕಾಲಿಕ ಲಿಫ್ಟ್ ಕುಸಿದು, ಇಬ್ಬರು ಕಾರ್ಮಿಕರು ದಾರುಣವಾಗಿ ಸಾವನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ (ನ.07): ಕಟ್ಟಡ ಕಾಮಗಾರಿಯ ವೇಳೆ ತಾತ್ಕಾಲಿಕ ಲಿಫ್ಟ್ ಕುಸಿದು, ಇಬ್ಬರು ಕಾರ್ಮಿಕರು ದಾರುಣವಾಗಿ ಸಾವನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ. ಮುರುಡೇಶ್ವರ ಬಸ್ತಿಯ ಪ್ರಭಾಕರ್ ಮುತಪ್ಪ ಶೆಟ್ಟಿ (48), ಕುಂದಾಪುರ ತಾಲೂಕಿನ ಗೋಳಿಹೊಳೆಯ ಬಾಬಣ್ಣ ಪೂಜಾರಿ (45) ಈ ದುರ್ಘಟನೆಯಲ್ಲಿ ಮೃತಪಟ್ಟವರು. ಕಾಮತ್ ಯಾತ್ರಿ ನಿವಾಸದ ಮಾಲೀಕ ವೆಂಕಟದಾಸ ಕಾಮತ್ ಅವರ ಹೊಸ ಕಟ್ಟಡ ಕಾಮಗಾರಿಯ ಮಿನಿ ಲಿಫ್ಟ್ ದುರಸ್ತಿ ಕಾರ್ಯ ನಡೆಯುತ್ತಿತ್ತು. ಕಟ್ಟಡದ ಮೇಲ್ಮಹಡಿಗಳಿಗೆ ವಸ್ತುಗಳನ್ನು ಸಾಗಿಸಲು ತಾತ್ಕಾಲಿಕ ಲಿಫ್ಟ್ ವ್ಯವಸ್ಥೆ ಮಾಡಲಾಗಿತ್ತು.
ಆದರೆ, ಲಿಫ್ಟ್‌ನ ಸೇಫ್ಟಿ ಲಾಕ್ ಹಾಳಾಗಿ ಕೇಬಲ್ ಕಟ್ಟಾದ ಪರಿಣಾಮ ಲಿಫ್ಟ್ ಕೆಳಕ್ಕೆ ಬಿದ್ದು ಇಬ್ಬರು ಕಾರ್ಮಿಕರು ಸಾವನಪ್ಪಿದ್ದಾರೆ. ಗಾಯಾಳುಗಳನ್ನು ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ವರ್ಗಾಯಿಸಲಾದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಮುರುಡೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಿನಿ ಲಿಫ್ಟ್ ತಯಾರಿಕಾ ಸಂಸ್ಥೆ ಹಾಗೂ ಕಟ್ಟಡ ಮಾಲೀಕ ವೆಂಕಟದಾಸ ಕಾಮತ್ ವಿರುದ್ಧ ಮೃತ ಪ್ರಭಾಕರ್ ಶೆಟ್ಟಿಯ ಪುತ್ರ ಶ್ರವಣ ಶೆಟ್ಟಿಯಿಂದ ದೂರು ದಾಖಲಿಸಿದ್ದಾರೆ. ಇನ್ನು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಬೆಂಕಿ ಹಚ್ಚಿಕೊಂಡಿದ್ದ ರೈತ ಚಿಕಿತ್ಸೆ ಫಲಕಾರಿಯಾಗದೆ ಸಾವು
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ತಾಲೂಕಿನ ಮೂಡನಹಳ್ಳಿಯ ರೈತ ಮಂಜೇಗೌಡರು(55) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತ ಮಂಜೇಗೌಡರ ಸ್ವಾಧೀನದಲ್ಲಿದ್ದ ಅರಣ್ಯ ಇಲಾಖೆಗೆ ಸೇರಿದ್ದ ಜಮೀನನ್ನು ಸರ್ಕಾರವು ವಾಪಸ್ ಪಡೆದುಕೊಂಡಿತ್ತು. ಈ ಸಂಬಂಧ ಮಂಜೇಗೌಡರು ಸಂಬಂಧಿಸಿದ ಭೂ ದಾಖಲೆಗಳನ್ನು ಸಲ್ಲಿಸಿ ಸೂಕ್ತ ಪರಿಹಾರ ಕೊಡುವಂತೆ ಕಂದಾಯ ಇಲಾಖೆ ಬಳಿ ನಿವೇದಿಸಿಕೊಂಡಿದ್ದರು. ಆದರೆ, ಸರ್ಕಾರದ ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಮೃತ ಮಂಜೇಗೌಡರ ದೂರಿಗೆ ಸ್ಪಂದಿಸಿರಲಿಲ್ಲ.
ಇದರಿಂದ ಬೇಸತ್ತ ಮಂಜೇಗೌಡರು ಡೀಸಿ ಕಚೇರಿ ಮುಂದಿನ ಪಾರ್ಕಿನಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆ*ಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ನೋಡಿದ ಪಾರ್ಕಿನಲ್ಲಿದ್ದ ಸಾರ್ವಜನಿಕರು ಬೆಂಕಿ ನಂದಿಸಿ ತೀವ್ರವಾಗಿ ಗಾಯಗೊಂಡಿದ್ದ ಮಂಜೇಗೌಡರನ್ನು ಪೊಲೀಸರ ಸಹಕಾರದಲ್ಲಿ ಮಂಡ್ಯ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದರು. ರೈತನ ದೇಹ ಶೇ.60 ಭಾಗ ಸುಟ್ಟು ಹೋಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬುಧವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಂಜೇಗೌಡರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಶವ ಹಸ್ತಾಂತರಿಸಿದ್ದಾರೆ. ಆಸ್ಪತ್ರೆಯಲ್ಲಿ ಹಾಗೂ ಮೃತರ ಸ್ವಗ್ರಾಮ ಮೂಡನಹಳ್ಳಿಯಲ್ಲಿ ಬಂಧುಗಳ ಆಕ್ರಂದನ ಮುಗಿಲುಮುಟ್ಟಿತ್ತು.
