ತುಮಕೂರು ಜಿಲ್ಲಾಸ್ಪತ್ರೆಯ ಕಟ್ಟಡದ ಮೇಲಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವನಪ್ಪಿದ ಘಟನೆ ಟ್ರಾಮಾ ಕೇರ್ ಸೆಂಟರ್ ಆಸ್ಪತ್ರೆ ಕಟ್ಟಡದಲ್ಲಿ ನಡೆದಿದೆ. ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ‌ ನಡೆದಿದೆ.

ತುಮಕೂರು (ನ.07): ತುಮಕೂರು ಜಿಲ್ಲಾಸ್ಪತ್ರೆಯ ಕಟ್ಟಡದ ಮೇಲಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವನಪ್ಪಿದ ಘಟನೆ ಟ್ರಾಮಾ ಕೇರ್ ಸೆಂಟರ್ ಆಸ್ಪತ್ರೆ ಕಟ್ಟಡದಲ್ಲಿ ನಡೆದಿದೆ. ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ‌ ನಡೆದಿದ್ದು, ಕಟ್ಟಡದ ನಾಲ್ಕನೆ ಮಹಡಿಯಿಂದ ಬಿದ್ದು ವ್ಯಕ್ತಿ ಸಾವನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ತುಮಕೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ‌ ಪ್ರಾಥಮಿಕ ತನಿಖೆಯಲ್ಲಿ ಸಾವನ್ನಪ್ಪಿದ ವ್ಯಕ್ತಿ ಭಿಕ್ಷುಕ ಎಂದು ಹೇಳಲಾಗ್ತಿದೆ. ಆದರೆ ಮೃತನ ವಿಳಾಸ ಪತ್ತೆಯಾಗಿಲ್ಲ. ಇನ್ನು ತುಮಕೂರು ನಗರ ಪೊಲೀಸರಿಂದ ತನಿಖೆ ಮುಂದುವರಿದಿದ್ದು, ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

ನವಜಾತ ಅವಳಿ ಶಿಶುಗಳ ಸಾವು: ಹೊಸಪೇಟೆನಗರದ 60 ಹಾಸಿಗೆ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ನವಜಾತ ಶಿಶುಗಳು ಮೃತಪಟ್ಟಿದ್ದು, ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಬಾಣಂತಿ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ. ಹಗರಿಬೊಮ್ಮನಹಳ್ಳಿಯ ಪರ್ವೀನ್ ಬಾನು (26) ಅವರ ಅವಳಿ ನವಜಾತ ಶಿಶುಗಳು ಮೃತಪಟ್ಟಿವೆ. ಪರ್ವೀನ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಗರಿಬೊಮ್ಮನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಗರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ. ಆದರೆ, ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡದೆ ಸ್ಕ್ಯಾನಿಂಗ್‌ಗಾಗಿ ನಮ್ಮನ್ನು ಸುತ್ತಾಡಿಸಿದ್ದಾರೆ. ಹೆರಿಗೆ ನೋವಿನಲ್ಲೇ ಖಾಸಗಿ ಸ್ಕ್ಯಾನಿಂಗ್‌ ಸೆಂಟರ್‌ಗೆ ತೆರಳುವಂತಾಯಿತು. ವೈದ್ಯರು ಬಂದು ನೋಡಿದ್ದರೆ, ಅವಳಿ ಮಕ್ಕಳು ಉಳಿಯುತ್ತಿದ್ದರೂ ಎಂದು ಬಾಣಂತಿ ಸಂಬಂಧಿಕರು ದೂರಿದ್ದಾರೆ. ಅಲ್ಲದೇ, ಈ ಕುರಿತು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರಿಗೂ ದೂರು ಸಲ್ಲಿಸಿದ್ದಾರೆ.

ಆಗಿದ್ದೇನು?

ನಗರದ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಬುಧವಾರ ಮಧ್ಯರಾತ್ರಿ ಹೆರಿಗೆ ಮಾಡಿಸಲಾಗಿದ್ದು, 1200 ಗ್ರಾಂ ತೂಕ ಇದ್ದ ಹಸುಳೆಯೊಂದು ಹೊಟ್ಟೆಯಲ್ಲೇ ಮೃತಪಟ್ಟಿದೆ. 1400 ಗ್ರಾಂ ತೂಕ ಇದ್ದ ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ದಾರಿ ಮಧ್ಯೆ ಈ ಹಸುಳೆ ಕೂಡ ಆ್ಯಂಬುಲೆನ್ಸ್‌ನಲ್ಲಿ ಮೃತಪಟ್ಟಿದೆ. ನನ್ನ ಇಬ್ಬರು ಮಕ್ಕಳನ್ನು ಕಳೆದುಕೊಂಡಿರುವೆ. ಭಾರೀ ಹೆರಿಗೆ ನೋವು ಇತ್ತು. ವೈದ್ಯರು ಚಿಕಿತ್ಸೆ ನೀಡಲು ನಿರ್ಲಕ್ಷಿಸಿದರು. ಆಸ್ಪತ್ರೆ ಸಿಬ್ಬಂದಿ ಕೂಡ ಸರಿಯಾಗಿ ಸ್ಪಂದಿಸಿಲ್ಲ. ನನಗೆ ನೋವಿದ್ದರೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಸ್ಕ್ಯಾನಿಂಗ್‌ ರಿಪೋರ್ಟ್‌ ಕೂಡ ಸರಿಯಾಗಿ ನೋಡಿಲ್ಲ. ಸಿಬ್ಬಂದಿಯಿಂದ ಮೊಬೈಲ್ ಚಾರ್ಜರ್ ತರಿಸಿಕೊಂಡ ವೈದ್ಯರು, ನನ್ನ ನೋಡಲಿಲ್ಲ. ಇವರ ನಿರ್ಲಕ್ಷ್ಯಕ್ಕೆ ಅವಳಿ ಮಕ್ಕಳನ್ನು ಕಳೆದುಕೊಳ್ಳುವಂತಾಯಿತು ಎಂದು ಪರ್ವಿನ್ ಬಾನು ದೂರಿದರು.