ಬೆಳಗ್ಗೆ ಶಾಲೆಗೆ ಹೋಗಲು ತಡವಾಗುತ್ತಿದೆ ಎಂದು ಬಾಲಕನಿಗೆ ತಾಯಿ ಬೈದಿದ್ದು ಇದರಿಂದ ಮನನೊಂದ ಅಪ್ರಾಪ್ತ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ.
ಜೈಪುರ (ಜು. 17): ಶುಕ್ರವಾರ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬೆಹ್ರೋರ್ ಪ್ರದೇಶದಲ್ಲಿ 15 ವರ್ಷದ ಬಾಲಕ ತನ್ನ ಮನೆಯ ಸೀಲಿಂಗ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide)ಮಾಡಿಕೊಂಡಿದ್ದಾನೆ. ಅಲ್ಲದೇ ತಾನು ತಾಯಿಗೆ ಜನ್ಮದಿನದಂದು "ಅತ್ಯುತ್ತಮ ಉಡುಗೊರೆ" (Best gift) ನೀಡುತ್ತಿದ್ದೇನೆ ಎಂದು ಬಾಲಕ ಸೂಸೈಡ್ ನೋಟ್ ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಕಾರಿ ಶಿಕ್ಷಕಿಯಾಗಿದ್ದ ತಾಯಿ ಕೆಲಸಕ್ಕೆ ತೆರಳಿದ್ದ ವೇಳೆ ಬಾಲಕ ಈ ಕೃತ್ಯ ಎಸಗಿದ್ದಾನೆ.
ಶಾಲೆಗೆ ತಡವಾಗಿದ್ದರಿಂದ ಬಾಲಕನನ್ನು ಬೆಳಿಗ್ಗೆ ಅವನ ತಾಯಿ ಬೈದ್ದಿದ್ದು, ಇದರಿಂದ ಬಾಲಕ ಅಸಮಾಧಾನಗೊಂಡಿದ್ದ ಎಂದು ನೆರೆಹೊರೆಯವರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
10 ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ತನ್ನ ತಾಯಿಗೆ ಹೊಸ ಶಾಲಾ ಸಮವಸ್ತ್ರವನ್ನು ಖರೀದಿಸುವಂತೆ ಕೇಳಿಕೊಂಡಿದ್ದ ಎಂದು ಕೆಲವು ನೆರೆಹೊರೆಯವರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಹೊಸ ಸಮವಸ್ತ್ರ ಖರೀದಿಸಲು ತಾಯಿಗೆ ಸಮಯ ಸಿಕ್ಕಿರಲಿಲ್ಲ. ಶುಕ್ರವಾರ ಬೆಳಗ್ಗೆಯೂ ಬಾಲಕ ತನ್ನ ತಾಯಿಗೆ ಸಮವಸ್ತ್ರವನ್ನು ಖರೀದಿ ಬಗ್ಗೆ ನೆನಪಿಸಿದ್ದಾನೆ.
"ಸದ್ಯ ದುಃಖಿತ ತಾಯಿ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ, ನಾವು ಅವಳೊಂದಿಗೆ ಮಾತನಾಡಲಿಲ್ಲ ಮತ್ತು ನೆರೆಹೊರೆಯವರನ್ನು ಮಾತ್ರ ವಿಚಾರಣೆ ಮಾಡಿದ್ದೇವೆ" ಎಂದು ಬೆಹ್ರೋರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ವೀರೇಂದ್ರ ಶನಿವಾರ ಹೇಳಿದ್ದಾರೆ.
ಇದನ್ನೂ ಓದಿ:ವರದಕ್ಷಿಣೆ ಕಿರುಕುಳ: ಮಗುವಿನೊಂದಿಗೆ ತಾಯಿ ನೇಣಿಗೆ ಶರಣು
ಮಹಿಳೆಯ ಪತಿ 3-4 ವರ್ಷಗಳ ಹಿಂದೆ ನಿಧನರಾದರು. ಪತಿಯ ಮರಣದ ನಂತರ, ಅನುಕಂಪದ ಆಧಾರದ ಮೇಲೆ ಭಗವಾದಿ ಖುರ್ದ್‌ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡರು. ಆಕೆಯ ಹಿರಿಯ ಮಗಳು ತನ್ನ ತಾಯಿಯ ಚಿಕ್ಕಪ್ಪನೊಂದಿಗೆ ವಾಸಿಸುತ್ತಾಳೆ ಮತ್ತು 12 ನೇ ತರಗತಿಯಲ್ಲಿ ಓದುತ್ತಿದ್ದಾಳೆ, ಆದರೆ ಮಗ ಅವಳೊಂದಿಗೆ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ.
ಜನ್ಮದಿನದ ಶುಭಾಶಯಗಳು ಮಮ್ಮಿ ಜೀ: ತಾಯಿ ಕೆಲಸಕ್ಕೆಂದು ಶಾಲೆಗೆ ಹೋದಾಗ ಯುವಕ ಆತ್ಮಹತ್ಯೆಗೆ ಶರಣಾಗಿದ್ದು “ಈಗ ನಿನಗೆ ಶಾಲೆಗೆ ಯಾವತ್ತೂ ತಡವಾಗುವುದಿಲ್ಲ. ವಿಶ್ವದ ಅತ್ಯುತ್ತಮ ಕೊಡುಗೆ. ಜನ್ಮದಿನದ ಶುಭಾಶಯಗಳು ಮಮ್ಮಿ ಜೀ ” ಎಂದು ರಿಜಿಸ್ಟರ್‌ವೊಂದರಲ್ಲಿ ಬಾಲಕ ಬರೆದಿದ್ದಾನೆ.
ಮೃತ ಬಾಲಕನ ತಾಯಿಗೆ ಶಾಲೆಗೆ ತಡವಾಗುತ್ತಿದ್ದರಿಂದ ಯಾವುದೋ ವಿಷಯಕ್ಕೆ ಬೆಳಗ್ಗೆ ಆತನನ್ನು ಗದರಿಸಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಯಿ ಆಕೆಯ ಹುಟ್ಟುಹಬ್ಬದ ದಿನದಂದೇ ಬೈದಿದ್ದರಿಂದ ಹುಡುಗ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:20 ಸಾವಿರ ರೂ ಸಾಲದ ಅಸಲು ಬಡ್ಡಿ ಕಿತ್ತುಕೊಂಡು ಲೋನ್ ಆ್ಯಪ್ ಕಿರುಕುಳ, ಮಹಿಳೆ ಆತ್ಮಹತ್ಯೆ!
ತಮ್ಮ ಬಾಡಿಗೆ ಮನೆಯಿಂದ ಸುಮಾರು 20 ಕಿಮೀ ದೂರದಲ್ಲಿರುವ ಶಾಲೆಯಿಂದ ತಾಯಿ ಹಿಂತಿರುಗಿದಾಗ, ಮನೆಯ ಬಾಗಿಲು ಒಳಗಿನಿಂದ ಮುಚ್ಚಿರುವುದು ಕಂಡುಬಂದಿತ್ತು. ಹಲವು ಬಾರಿ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಆಕೆ ಅಕ್ಕಪಕ್ಕದ ಮನೆಯವರ ಸಹಾಯ ಪಡೆದು ಬಾಗಿಲು ಒಡೆದಿದ್ದಾಳೆ. ಈ ವೇಳೆ ಬಾಲಕ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಇನ್ನು ಶವವನ್ನು ಶುಕ್ರವಾರ ಮರಣೋತ್ತರ ಪರೀಕ್ಷೆಯ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
