ನೈಟ್ ಶಿಫ್ಟ್ ಮಾಡುತ್ತಿದ್ದ ಪೊಲೀಸ್‌ಗೆ ಗುದ್ದಿದ ಅಪರಿಚಿತ ವಾಹನ: ಸ್ಥಳದಲ್ಲಿಯೇ ಪೇದೆ ಸಾವು
ರಾತ್ರಿ ಪಾಳಿಯಲ್ಲಿ ಚೆಕ್ ಪೋಸ್ಟ್ ಪರಿಶೀಲನೆಗೆಂದು ಹೋಗಿದ್ದ ಪೊಲೀಸ್ ಕಾನ್ಸ್‌ಟೇಬಲ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಕಲಬುರಗಿ (ಮಾ.20): ರಾತ್ರಿ ಪಾಳಿಯಲ್ಲಿ ಚೆಕ್ ಪೋಸ್ಟ್ ಪರಿಶೀಲನೆಗೆಂದು ಹೋಗಿದ್ದ ಪೊಲೀಸ್ ಕಾನ್ಸ್‌ಟೇಬಲ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ-ಡಿಗ್ಗಿ ತಾಂಡಾದಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣೆ ಪೇದೆ ಕರಿಯಪ್ಪ (37) ಮೃತ ದುದೈವಿ. ಲಾಡ್ಲಾಪುರ-ಡಿಗ್ಗಿ ತಾಂಡಾದ ರಸ್ತೆಯಲ್ಲಿ ಹೋಗುವಾಗ ಈ ದುರ್ಘಟನೆ ನಡೆದಿದೆ. ನಿನ್ನೆ ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ಪೇದೆ ಕರಿಯಪ್ಪ ಅವರು, ಮನೆಲಿ ಊಟ ಮಾಡಿ ಬೈಕ್ ತೆಗೆದುಕೊಮಡು ನಂತರ ಕಾರ್ಯನಿಮಿತ್ತ ನಾಲವಾರ್ ಚೆಕ್‌ಪೋಸ್ಟ್ ಕಡೆಗೆ ಹೋಗಿದ್ದರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಪೊಲೀಸ್ ಪೇದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸಾಗರ ಕೋರ್ಟ್ ಬೆರಳಚ್ಚುಗಾರ ನಿತ್ಯಾನಂದ ಆತ್ಮಹತ್ಯೆ: ಸಾಯುವಂತಹ ಸಮಸ್ಯೆಯಾದ್ರೂ ಏನಿತ್ತು?
ರಾತ್ರಿಯೇ ಅಪಘಾತ ಆಗಿದ್ದರೂ ನೆರವು ಸಿಕ್ಕಿಲ್ಲ: ಇನ್ನು ರಾತ್ರಿ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ಗಾಯದಿಂದ ಬಳಲುತ್ತಿದ್ದರೂ ಚೆಕ್‌ಪೋಸ್ಟ್‌ನಲ್ಲಿ ಯಾರೊಬ್ಬರೂ ಇಲ್ಲದ ಹಿನ್ನೆಲೆಯಲ್ಲಿ ನರಳಾಡುತ್ತಲೇ ಪೇದೆ ಸಾವನ್ನಪ್ಪಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಇನ್ನು ಬೆಳಗ್ಗೆ ಆಗುವವರೆಗೂ ಯಾರೊಬ್ಬರೂ ಈ ಬಗ್ಗೆ ಗಮನಿಸಿಲ್ಲ. ಇನ್ನು ರಸ್ತೆಯಲ್ಲಿ ಹೋಗುವ ವಾಹನ ಸವಾರರು ಕೂಡ ಈ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ಇನ್ನು ಪೊಲೀಸ್ ಪೇದೆ ಕೂಡ ಸಿವಿಲ್ ಡ್ರೆಸ್‌ನಲ್ಲಿ ಇದ್ದುದರಿಂದ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಕೂಡ ಯಾರೋ ಕುಡಿದು ಬಿದ್ದಿರಬೇಕು ಎಂದು ನಿರ್ಲಕ್ಷ್ಯ ಮಾಡಿದ್ದಾರೆ.
ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ: ಇನ್ನು ಬೆಳಗ್ಗೆ ಸ್ಥಳೀಯರು ಹೋಗಿ ನೋಡಿದಾಗ ಅಪಘಾತವಾಗಿ ರಸ್ತೆಯ ಪಕ್ಕದಲ್ಲಿ ಬೈಕ್ ಪಕ್ಕ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣಬಿಟ್ಟಿದ್ದ ಪೊಲೀಸ್ ಪೇದೆಯನ್ನು ಕಂಡಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣವೇ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಘಟನೆ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಇನ್ನು ಅಪಘಾತ ಮಾಡಿದ ವಾಹನಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.
ಮಹಿಳೆಯೊಂದಿಗೆ ಸರಸಕ್ಕೆ ಹೋದ ಬೆಂಗಳೂರು ಉದ್ಯಮಿಗೆ ಮುಂಜಿ ಮಾಡುವುದಾಗಿ ಧಮ್ಕಿ: ಕಾಮದಾಸೆಗೆ ಹೋಗಿ ಹಣ ಕಳ್ಕೊಂಡ
ಮರಳು ಸಾಗಣೆ ಟ್ರ್ಯಾಕ್ಟರ್‌ನಡಿ ಸಿಲುಕಿ ಯುವಕ ಸಾವು
ವಿಜಯಪುರ (ಮಾ.20): ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಕಂದಕಕ್ಕೆ ಉರುಳಿದ ಮರಳಿನ ಟ್ರ್ಯಾಕ್ಟರ್‌ನಡಿ ಸಿಲುಕು ಯುವಕನೊಬ್ಬ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಕೆಸರಟ್ಟಿ ಕ್ರಾಸ್ ಬಳಿ ನಡೆದಿದೆ. ಮಹೇಶ ತಳವಾರ (22) ಮೃತಪಟ್ಟಿರುವ ಯುವಕ ಆಗಿದ್ದಾನೆ.
ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಅನ್ನು ಯುವಕ ಚಾಲನೆ ಮಾಡುತ್ತಿದ್ದನು. ಅಂಬಳನೂರ ಬಳಿಯ ಡೋಣಿ ನದಿಯಿಂದ ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಿಸುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ ಅನ್ನು ಚಿಕ್ಕದಾದ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುವ ವೇಳೆ ಕಂದಕಕ್ಕೆ ಉರುಳಿದೆ. ಇನ್ನು ಟ್ರ್ಯಾಕ್ಟರ್‌ನಲ್ಲಿದ್ದ ಮಹೇಶ ಕೆಳಗೆ ಬಿದ್ದಿದ್ದು, ಆತನ ಮೇಲೆ ಮರಳು ತುಂಬಿದ ಟ್ರೇಲರ್ ಬಿದ್ದಿದೆ. ಇದರ ಪರಿಣಾಮವಾಗಿ ಮಹೇಶ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಕಲಕೇರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಬಂದು ಪರಿಶೀಲನೆ ಮಾಡಿದ್ದಾರೆ.