Breaking ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೇಸ್: ಈಶ್ವರಪ್ಪಗೆ ಬಿಗ್ ರಿಲೀಫ್
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ ಮೊದಲ ಹಂತದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಇದರಿಂದ ಈಶ್ವರಪ್ಪ ಮತ್ತೆ ಸಚಿವ ಸ್ಥಾನ ಅಲಂಕರಿಸುತ್ತಾರಾ?
ಬೆಂಗಳೂರು, (ಜುಲೈ.20): ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ (Santosh Suicide Case)ಪ್ರಕರಣದಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ (KS Eshwarappa) ಬಿಗ್ ರಿಲೀಫ್ ಸಿಕ್ಕಿದೆ.ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಟೌನ್ ಪೊಲೀಸರಿಂದ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ.
ಸಾಕ್ಷಾಧಾರಗಳ ಕೊರತೆಯಿಂದಾಗಿ ಉಡುಪಿ ಟೌನ್ ಪೊಲೀಸರು (Udupi Town Police) ಬಿ.ರಿಪೋರ್ಟ್ ಸಲ್ಲಿಕೆ ಹಾಕಿದ್ದು, ವರದಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಆದ್ರೆ, ಕೋರ್ಟ್ ಇನ್ನೂ ಉಡುಪಿ ಪೊಲೀಸರ ಬಿ.ರಿಪೋರ್ಟ್ ವರದಿಯನ್ನು ಅಂಗೀಕರಿಸಿಲ್ಲ.ಮುಂದಿನ ವಿಚಾರಣೆ ವೇಳೆ ಬಿ-ರಿಪೋರ್ಟ್ ಬಗ್ಗೆ ದೂರುದಾರರಿಗೆ ಮಾಹಿತಿ ನೀಡಲಾಗುತ್ತೆ. ಆಗ ದೂರುದಾರರು ಬಿ ರಿಪೋರ್ಟ್‌ಅನ್ನು ಚಾಲೆಂಜ್ ಮಾಡಬಹುದು. ಇದರಿಂದ ಈಶ್ವರಪ್ಪಗೆ ಮೊದಲ ಹಂತದ ರಿಲೀಸ್ ಅಂತ ಹೇಳಬಹುದು.
ಸಂತೋಷ್ ಆತ್ಮಹತ್ಯೆ ಕೇಸ್‌ಗೆ ಸ್ನೇಹಿತನಿಂದ ಟ್ವಿಸ್ಟ್, ತೀವ್ರಗೊಂಡ ತನಿಖೆ
ಈಶ್ವರಪ್ಪ ಅವರೇ ಆತ್ಮಹತ್ಯೆಗೆ ಕಾರಣ ಅನ್ನೋದಕ್ಕೆ ಸಾಕ್ಷ್ಯ ಸಿಕ್ಕಿಲ್ಲ. ಸಾಕ್ಷ್ಯಗಳ ಕೊರತೆ ಹಿನ್ನಲೆ ಬಿ.ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಉಡುಪಿ ಪೊಲೀಸ್ ಮೂಲಗಳ ಮಾಹಿತಿ ನೀಡಿವೆ.
ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ದ ಶೇಕಡಾ 40ರಷ್ಟು ಕಮಿಷನ್ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಭಾರೀ ಸುದ್ದಿಯಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಏಪ್ರಿಲ್ 12 ರಂದು ಉಡುಪಿಯ ಖಾಸಗಿ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಆದ್ರೆ, ಸಾವಿಗೆ ಮುನ್ನ ಸ್ನೇಹಿತರಿಗೆ ವಾಟ್ಸಪ್ ಸಂದೇಶ ಕಳಿಸಿದ್ದ ಸಂತೋಷ್, ತನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಈಶ್ವರಪ್ಪ ವಿರುದ್ಧ ಪ್ರತಿಭಟನೆ ಮಾಡಿದ್ದವು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಪ್ರತಿಪಕ್ಷಗಳು ಈಶ್ವರಪ್ಪ ವಿರುದ್ಧ ಪ್ರತಿಭಟನೆ ಮಾಡಿದ್ದವು. ಕೊನೆಗೆ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಬೆಳಗಾವಿ ತಾಲೂಕಿನ ಬಡಸ ಗ್ರಾಮದ ನಿವಾಸಿ. ಬಡಸ ಗ್ರಾಮ ಬಿಟ್ಟು ಬೆಳಗಾವಿ ನಗರಕ್ಕೆ ಬಂದು ನೆಲೆಸಿದ್ದರು. ಬೆಳಗಾವಿ ಗ್ರಾಮಾಂತರ ಗ್ರಾಮ ಪಂಚಾಯಿತಿಯೊಂದರಲ್ಲಿ ವರ್ಕ್ ಆರ್ಡರ್ ಇಲ್ಲದೇ ಗ್ರಾಮದ ಅಭಿವೃದ್ಧಿ ಕೆಲಸ ಮಾಡಿದ್ದರು. ಕಾಮಗಾರಿ ಮಾಡಿದ ಹಣವನ್ನು ಬಿಡುಗಡೆ ಮಾಡುವಂತೆ ಸಂತೋಷ್ ಹಲವು ಬಾರಿ ಈಶ್ವರಪ್ಪ ಹಾಗೂ ಸಂಬಂಧಿಸಿದ ಅಧಿಕಾರಿಗಳ ಬಳಿ ಹೋಗಿ ಮನವಿ ಮಾಡಿಕೊಂಡಿದ್ದರು.
ಆದ್ರೆ, ಹಣ ಮಾತ್ರ ಬಿಡುಗಡೆಯಾಗಿಲ್ಲ. ಇದರಿಂದ ಬೇರೆ ಕಡೆ ಸಾಲ ಮಾಡಿ ಕಾಮಗಾರಿ ಮಾಡಿದ್ದ ಸಂತೋಷ್‌ಗೆ ದಿಕ್ಕುತೋಚದಂತಾಗಿ ಕೊನೆಗೆ ಅವರು ಈಶ್ವರಪ್ಪನವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಉಡುಪಿ ಪೊಲೀಸರು ಬಿ ರಿಪೋರ್ಟ್ ಹಾಕಿದ್ದು, ಈಶ್ವರಪ್ಪ ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೇ ಅವರು ಮತ್ತೆ ಮಂತ್ರಿಯಾಗ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.