ಪೆಡ್ಲರ್‌ಗಳ ಸೆರೆ: 32 ಲಕ್ಷ ಮೌಲ್ಯದ ಡ್ರಗ್ಸ್ ವಶ
ಆರೋಪಿಗಳಿಂದ 1 ಲೀಟರ್ ಡ್ರಗ್ಸ್ ದ್ರವ ಮತ್ತು 16 ಕೆ.ಜಿ. ಗಾಂಜಾ ಜಪ್ತಿ| ಕೆಲ ದಿನಗಳ ಹಿಂದೆ ಗಾಂಜಾ ಸೇವಿಸುವಾಗ ಸಿಕ್ಕಿಬಿದ್ದಿದ್ದ ವ್ಯಸನಿಗಳು| ಆಂಧ್ರಪ್ರದೇಶದ ವಿಜಯವಾಡದಿಂದ ಕಡಿಮೆ ಬೆಲೆಗೆ ಮಾದಕ ದ್ರವ್ಯ ಖರೀದಿಸಿ ಬೆಂಗಳೂರು ಮತ್ತು ಕೇರಳದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ|
ಬೆಂಗಳೂರು(ಅ.29): ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ ಇಬ್ಬರು ಪೆಡ್ಲರ್‌ಗಳನ್ನು ಸೆರೆ ಹಿಡಿದಿರುವ ಹಲಸೂರು ಉಪ ವಿಭಾಗದ ಪೊಲೀಸರು, ಅವರಿಂದ 32 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಬೊಮ್ಮನಹಳ್ಳಿಯ ಮೊಹಮ್ಮದ್ ಶಾಕೀರ್ ಮತ್ತು ತಾವರೆಕೆರೆಯ ಕೃಷ್ಣಕುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ 1 ಲೀಟರ್ ಡ್ರಗ್ಸ್ ದ್ರವ ಮತ್ತು 16 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಹೇಳಿದ್ದಾರೆ.
ಹನಿಟ್ರ್ಯಾಪ್ ದಂಧೆ: ದಂಪತಿ ಸೇರಿ 7 ಮಂದಿ ಬಂಧನ
ಆರೋಪಿಗಳು ಮೂಲತಃ ಕೇರಳದವರಾಗಿದ್ದು, ಹಲವು ದಿನಗಳಿಂದ ನಗರದಲ್ಲಿ ನೆಲೆಸಿದ್ದರು. ಆಂಧ್ರಪ್ರದೇಶದ ವಿಜಯವಾಡದಿಂದ ಕಡಿಮೆ ಬೆಲೆಗೆ ಮಾದಕ ದ್ರವ್ಯ ಖರೀದಿಸಿ ಬೆಂಗಳೂರು ಮತ್ತು ಕೇರಳದಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದರು. ಬೈಯಪ್ಪನಹಳ್ಳಿ, ಸಿವಿ ರಾಮನ್‌ನಗರ, ಬಾಗಮನೆ ಟೆಕ್‌ಪಾರ್ಕ್ ಸಮೀಪ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದರು.
ಕೆಲ ದಿನಗಳ ಹಿಂದೆ ಗಾಂಜಾ ಸೇವಿಸುವಾಗ ವ್ಯಸನಿಗಳು ಸಿಕ್ಕಿಬಿದ್ದಿದ್ದರು. ಆಗ ವಿಚಾರಣೆ ನಡೆಸಿದಾಗ ಅವರು ಪೆಡ್ಲರ್‌ಗಳ ಹೆಸರು ಬಹಿರಂಗಪಡಿಸಿದ್ದರು. ಈ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.