Udupi SSLC ಉತ್ತರ ಪತ್ರಿಕೆ ಕೊಠಡಿ ಭದ್ರತೆಯಲ್ಲಿದ್ದ ಕಾನ್ಸ್‌ಟೇಬಲ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
* ಉಡುಪಿಯ ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
* ಸಹೋದ್ಯೋಗಿಗಳ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಕೇಸು ದಾಖಲು
* ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ರಾಜೇಶ್ ಕುಂದರ್
ವರದಿ- ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಮೇ.1): ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಕೇಸು ದಾಖಲಾಗಿದೆ. ಕರ್ತವ್ಯದಲ್ಲಿದ್ದಾಗಲೇ ರೈಫಲ್ ನಿಂದ ಗುಂಡು ಹಾರಿಸಿಕೊಂಡು ರಾಜೇಶ್ ಕುಂದರ್ ಶುಕ್ರವಾರ ಮೃತಪಟ್ಟಿದ್ದರು. ಇದೀಗ ಗಂಗೊಳ್ಳಿ ಠಾಣಾ ಎಸ್‌ಐ ಹಾಗೂ ಮತ್ತಿಬ್ಬರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ.
ಬಹುತೇಕ ಎಲ್ಲರಿಗೂ ಅದೊಂದು ಆತ್ಮಹತ್ಯೆ ಪ್ರಕರಣ ಎಂಬುದು ಈ ಮೊದಲೇ ಗೊತ್ತಾಗಿತ್ತು. ಆದರೆ ಗಂಗೊಳ್ಳಿ ಠಾಣೆಯ ಹೆಡ್ ಕಾನ್ ಸ್ಟೇಬಲ್ ರಾಜೇಶ್ ಕುಂದರ್ ಸಾವಿನ ಹಿಂದೆ ಹಲವು ಅನುಮಾನಗಳಿದ್ದವು. ಪ್ರಕರಣ ನಡೆದ ತಕ್ಷಣ ಇದೊಂದು ಆಕಸ್ಮಿಕ ಸಾವು ಎಂದು ದೂರು ದಾಖಲಿಸಲಾಗಿತ್ತು. ಆದರೆ ಇದೀಗ ಆತ್ಮಹತ್ಯೆ ಅನ್ನೋದು ಖಚಿತವಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಗಂಗೊಳ್ಳಿ ಠಾಣಾ ಎಸೈ ನಂಜನಾಯ್ಕ್ ಮತ್ತಿಬ್ಬರು ಸಿಬ್ಬಂದಿಗಳಾದ ಮತ್ತು ಉಮೇಶ್ ಮತ್ತು ಅಶ್ಫಕ್ ಎಂಬವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ.
Udupi SSLC ಉತ್ತರ ಪತ್ರಿಕೆ ಇಟ್ಟಿರುವ ಕೊಠಡಿ ಭದ್ರತೆಯಲ್ಲಿದ್ದ ಕಾನ್ಸ್‌ಟೇಬಲ್ ಆತ್ಮಹತ್ಯೆ
ಆದಿಉಡುಪಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಉತ್ತರ ಪತ್ರಿಕೆಯ ಕೊಠಡಿಗೆ ಭದ್ರತೆ ನೀಡುತ್ತಿದ್ದ ರಾಜೇಶ್ ಕುಂದರ್ ಶುಕ್ರವಾರ ಬೆಳಿಗ್ಗೆ ಒಂಬತ್ತು ಗಂಟೆಯ ಸುಮಾರಿಗೆ ಶವವಾಗಿ ಪತ್ತೆಯಾಗಿದ್ದರು. ಕುಳಿತ ಭಂಗಿಯಲ್ಲಿದ್ದ ಇವರ ಕುತ್ತಿಗೆಯಿಂದ ಸಿಡಿದ ಗುಂಡು ತಲೆಯಿಂದ ಹೊರಬಂದು ಮುಖದ ಮೇಲಿನ ಭಾಗ ಸಿಡಿದು ನುಚ್ಚುನೂರಾಗಿತ್ತು. ಇತ್ತೀಚೆಗಷ್ಟೇ ಅಮಾನತಾಗಿದ್ದ ರಾಜೇಶ್ ಕುಂದರ್ ಕರ್ತವ್ಯಕ್ಕೆ ಹಾಜರಾದ ಮರುದಿನವೇ ಈ ರೀತಿ ಸಾವನ್ನಪ್ಪಿದ್ದರು. ಅಮಾನತು ಆಗಿರುವ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು, ಆದರೆ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಗದ ಕಾರಣ ಇದೊಂದು ಆಕಸ್ಮಿಕ ಪ್ರಕರಣ ಇದ್ದರೂ ಇರಬಹುದು ಎಂದು ಭಾವಿಸಿ ದೂರು ದಾಖಲಿಸಿಕೊಳ್ಳಲಾಗಿತ್ತು.
ಆದರೆ ಇದೀಗ ಸತ್ಯ ಬಯಲಾಗಿದೆ. ದೂರು ನೀಡಿದ್ದ ಸಹೋದ್ಯೋಗಿ ಗಣೇಶ್ ಘಟನೆ ನಡೆದ ದಿನ ಆದಿಉಡುಪಿ ಶಾಲೆಯಲ್ಲಿದ್ದ ತನ್ನ ಬಟ್ಟೆಬರೆ ಇದ್ದ ಬ್ಯಾಗ್ ಮತ್ತು ರೈಫಲ್ ನ್ನು ತೆಗೆದುಕೊಂಡು ವಾಪಸಾಗಿದ್ದರು. ಡಿಎಆರ್ ನ ಕೇಂದ್ರ ಸ್ಥಾನಕ್ಕೆ ಹೋಗಿ ಬ್ಯಾಗನ್ನು ಕಿಟ್ ಬಾಕ್ಸ್ ನಲ್ಲಿ ಇರಿಸಿ ವಿಶ್ರಾಂತಿಗೆ ತೆರಳಿದ್ದರು. ಶನಿವಾರದಂದು 9.30 ಕ್ಕೆ ಮತ್ತೆ ಕೇಂದ್ರ ಕಚೇರಿಗೆ ಬಂದು ಕರ್ತವ್ಯಕ್ಕೆ ತೆರಳುವಾಗ ಕಿಟ್ ಬಾಕ್ಸ್ ನಲ್ಲಿದ್ದ ಬ್ಯಾಗ್ ನಲ್ಲಿ ನೋಟ್ ಬುಕ್ಕಿನ ಒಂದು ಹಾಳೆ ಪತ್ತೆಯಾಗಿದೆ. ಈ ಹಾಳೆಯನ್ನು ಪರಿಶೀಲಿಸಿದಾಗ ರಾಜೇಶ್ ಬರೆದಿರುವ ಡೆತ್ನೋಟ್ ಅನ್ನುವುದು ಗೊತ್ತಾಗಿದೆ. ನನ್ನ ಸಾವಿಗೆ ಇಂಥವರೇ ಕಾರಣ ಎಂದು ನಮೂದಿಸಿದ ಹಿನ್ನೆಲೆಯಲ್ಲಿ ಇದೀಗ ಮೂವರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ.
ತಿಂಗಳ ಹಿಂದೆ ರಾಜೇಶ್ ಕುಂದರ್ ತನ್ಬ ಸಹೋದ್ಯೋಗಿಗಳಾದ ಉಮೇಶ್ ಮತ್ತು ಅಶ್ಫಕ್ ವಿರುದ್ಧ ಕರ್ತವ್ಯಲೋಪದ ಆರೋಪ ಮಾಡಿದ್ದರು. ನಿಗದಿತ ಕರ್ತವ್ಯವನ್ನು ನಿಭಾಯಿಸದೆ ತಪ್ಪಿಸಿಕೊಂಡ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರಿದ್ದರು. ಇದೇ ಕಾರಣಕ್ಕೆ ರಾಜೇಶ್ ಅವರ ಮೇಲೆ ಆರೋಪಿತ ಸಿಬ್ಬಂದಿಗಳು ಹಲ್ಲೆ ನಡೆಸಿದ್ದರು. ಠಾಣಾ ಎಸ್ಸೈ ನಂಜ ನಾಯಕ್ ಈ ಪ್ರಕರಣವನ್ನು ನಿಭಾಯಿಸುವಲ್ಲಿ ಸೋತಿದ್ದರು. ಬಳಿಕ ರಾಜೇಶ್ ಕುಂದರ್ ಮತ್ತಿಬ್ಬರು ಸಿಬ್ಬಂದಿಗಳನ್ನು ಅಮಾನತು ಕೂಡ ಮಾಡಲಾಗಿತ್ತು. ಇದರಿಂದ ಮಾನಸಿಕವಾಗಿ ಘಾಸಿಗೊಂಡಿದ್ದ ರಾಜೇಶ್ ಆತ್ಮಹತ್ಯೆಗೆ ಶರಣಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ತನ್ನಿಬ್ಬರು ಸಹೋದ್ಯೋಗಿಗಳ ವಿರುದ್ಧ ದೂರು ನೀಡಿರುವ ಆಡಿಯೋಗಳು ಕೂಡಾ ಇದೀಗ ಲಭ್ಯವಾಗಿದೆ.
ಪೊಲೀಸ್ ಇಲಾಖೆಯಲ್ಲಿ ಈ ರೀತಿಯ ಗಲಾಟೆಗಳ ಆಗುವುದು ಮಾಮೂಲು. ಬ್ರಿಟಿಷರ ಕಾಲದ ಅನೇಕ ಪದ್ಧತಿಗಳು ಇಂದಿಗೂ ಜಾರಿಯಲ್ಲಿರುವುದರಿಂದ, ಪೊಲೀಸರ ಮೇಲಿನ ಶೋಷಣೆ ಇವತ್ತಿಗೂ ಮುಂದುವರಿದಿದೆ. ಒತ್ತಡವನ್ನು ಸಹಿಸಿಕೊಳ್ಳಲಾಗದ ರಾಜೇಶ್ ಅವರಂತ ಮುಗ್ಧ ಪೊಲೀಸರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಪ್ರಕರಣ ದಿಂದಾದರೂ ಇಲಾಖೆಯೊಳಗೆ ಒಂದಿಷ್ಟು ಸುಧಾರಣೆಗಳು ಆಗಬೇಕಾಗಿದೆ.