ಬೆಂಗಳೂರು(ಸೆ.03): ಅಕ್ರಮವಾಗಿ ವಜ್ರದ ಹರಳುಗಳನ್ನು ಮಾರಾಟಕ್ಕೆ ಯತ್ನಿಸಿದ್ದ ಮೂವರು ಆರೋಪಿಗಳನ್ನು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಬಲ್ನಾಡ್‌ ಗ್ರಾಮದ ರವಿಕುಮಾರ್‌, ಬೆಳ್ತಂಗಡಿ ತಾಲೂಕಿನ ಅರಂಬೋಡಿ ಪ್ರವೀಣ್‌ ಕುಮಾರ್‌ ಹಾಗೂ ಸುಧೀರ್‌ ಬಂಧಿತರಾಗಿದ್ದು, ಆರೋಪಿಗಳಿಂದ 40 ಲಕ್ಷ ಮೌಲ್ಯದ 80 ವಜ್ರದ ಹರಳು ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕೃಷಿ ಮಾರಾಟ ಮಂಡಳಿ 50 ಕೋಟಿ ವಂಚನೆ ಕೇಸ್‌: ಕಿಂಗ್‌ಪಿನ್‌ ಬಂಧನ

ಸಿ.ಟಿ.ಮಾರ್ಕೆಟ್‌ ಹತ್ತಿರ ಮಂಗಳವಾರ ರಾತ್ರಿ ಆರೋಪಿಗಳು ಅನುಮಾನಾಸ್ಪದವಾಗಿ ಓಡಾತ್ತಿದ್ದರು. ಆಗ ಅದೇ ವೇಳೆ ಗಸ್ತಿನಲ್ಲಿದ್ದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹರಳು ಮಾರಾಟ ಯತ್ನ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.

ಮಾರಾಟ ಮಾಡಿಕೊಡುವಂತೆ ಪರಿಚಿತನೋರ್ವ ಆರೋಪಿಗಳಿಗೆ ಹರಳುಗಳನ್ನು ನೀಡಿದ್ದು, ಹರಳು ಮಾರಾಟವಾದರೆ ಹಣ ಸಿಗಲಿದೆ ಎಂಬ ಕಾರಣಕ್ಕೆ ಆರೋಪಿಗಳು ಸಿ.ಟಿ.ಮಾರ್ಕೆಟ್‌ ಹತ್ತಿರದ ಚಿನ್ನದ ವ್ಯಾಪಾರಿಗಳ ಸಂಪರ್ಕಕ್ಕೆ ಯತ್ನಿಸಿದ್ದರು. ಅಷ್ಟರಲ್ಲಿ ಸಿಕ್ಕಿಬಿದ್ದಿದ್ದಾರೆ. ಈಗ ತಲೆಮರೆಸಿಕೊಂಡಿರುವ ವ್ಯಕ್ತಿಗೆ ತನಿಖೆ ನಡೆದಿದೆ. ಈ ಹರಳುಗಳ ಬಗ್ಗೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳಿಗೆ ಕೂಡಾ ಮಾಹಿತಿ ನೀಡಲಾಗಿದೆ. ಹರಳುಗಳ ಮೂಲದ ಪತ್ತೆಗೆ ಶೋಧನೆ ಮುಂದುವರೆಸಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.