ಹನಿಟ್ರ್ಯಾಪ್ ದಂಧೆ: ದಂಪತಿ ಸೇರಿ 7 ಮಂದಿ ಬಂಧನ
ಶ್ರೀಮಂತರ ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿತ ಮಹಿಳೆ| ಹಲವು ಜನರಿಗೆ ಬೆದರಿ ಹಾಕಿ ಹಣ ಸುಲಿಗೆ ಮಾಡಿರುವ ಆರೋಪಿಗಳು| ದಂಪತಿ ಸೇರಿದಂತೆ ಏಳು ಮಂದಿ ಕಿಡಿಗೇಡಿಗಳ ಸೆರೆ|
ಬೆಂಗಳೂರು(ಅ.29): ಮಹಿಳೆಯರ ಜತೆ ಮೋಜು-ಮಸ್ತಿಯ ಆಸೆ ತೋರಿಸಿ ಹಣವಂತರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ಸುಲಿಗೆ ಮಾಡುತ್ತಿದ್ದ ದಂಪತಿ ಸೇರಿದಂತೆ ಏಳು ಮಂದಿ ಕಿಡಿಗೇಡಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.
ಪೈ ಲೇಔಟ್ ಸಮೀಪದ ಶಕ್ತಿನಗರದ ಅಂಜಲಿ(31), ಆಕೆಯ ಪತಿ ಪ್ರೇಮನಾಥ್ ಅಲಿಯಾಸ್ ವಿಜಯ್ (32), ಸಹಚರರಾದ ಉದಯನಗರದ ದೀಪಕ್(26), ಟೈಸನ್(23), ವಿನೋದ್(43), ಪ್ರಕಾಶ್ ಅಲಿಯಾಸ್ ಚೋಟು(20) ಹಾಗೂ ಈಶ್ವರಿ(40) ಬಂಧಿತರು. ಆರೋಪಿಗಳಿಂದ 40 ಗ್ರಾಂ ಚಿನ್ನಾಭರಣ ಹಾಗೂ 2 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ವಿನೋದ್ ಪತ್ತೆಗೆ ತನಿಖೆ ನಡೆದಿದೆ. ಇತ್ತೀಚಿಗೆ ಹಲಸೂರಿನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಖಾಸಗಿ ವಿಡಿಯೋ ಬಹಿರಂಗ ಪಡಿಸುವುದಾಗಿ ಬೆದರಿಸಿ ಆರೋಪಿಗಳು ಸುಲಿಗೆ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಆರೋಪಿಗಳು ಬಲೆಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನ ಹನಿಟ್ರ್ಯಾಪ್‌ಗೆ ಕಾರವಾರ ನೌಕಾ ಸಿಬ್ಬಂದಿ..!
ಹೇಗೆ ಬಲೆಗೆ?:
ಆಟೋ ಚಾಲಕ ಪ್ರೇಮನಾಥ್, ಮಹದೇವಪುರ ಸಮೀಪ ತನ್ನ ಪತ್ನಿ ಅಂಜಲಿ ಜತೆ ನೆಲೆಸಿದ್ದಾನೆ. ಹಲವು ದಿನಗಳಿಂದ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರುವ ಈ ದಂಪತಿ, ಸುಲಭವಾಗಿ ಹಣ ಸಂಪಾದನೆಗೆ ಹನಿಟ್ರ್ಯಾಪ್ ದಂಧೆ ಶುರು ಮಾಡಿದ್ದರು. ಅ.22ರಂದು ಸಂಜೆ 4 ಗಂಟೆಯಲ್ಲಿ ಬಿಲ್ಡರ್‌ಗೆ ಆತನ ಸ್ನೇಹಿತ ಕರೆ ಮಾಡಿ, ಪೈ ಲೇಔಟ್‌ನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತದೆ. ನಿನಗೆ ಆಸಕ್ತಿ ಇದ್ದರೆ ಹೋಗು ಎಂದಿದ್ದ. ಈ ಮಾತು ಕೇಳಿ ಪುಳಕಿತನಾದ ಬಿಲ್ಡರ್, ಅಂದು ಸಂಜೆ ಗೆಳೆಯ ಕೊಟ್ಟಿದ್ದ ನಂಬರ್‌ಗೆ ಕರೆ ಮಾಡಿದ್ದಾನೆ. ಆಗ ಕರೆ ಸ್ವೀಕರಿಸಿದ ಅಂಜಲಿ, ತನ್ನ ಮನೆಯ ವಿಳಾಸವನ್ನು ಆತನಿಗೆ ಕಳುಹಿಸಿದ್ದಳು.
ಅದರಂತೆ ಈ ವಿಳಾಸಕ್ಕೆ ಬಿಲ್ಡರ್ ಹೋಗಿದ್ದು, ಖಾಸಗಿಯಾಗಿ ಸಮಯ ಕಳೆಯುತ್ತಿದ್ದ ವೇಳೆ, ಅಂಜಲಿ ಮನೆ ಮೇಲೆ ಇತರ ಆರೋಪಿಗಳು ದಾಳಿ ನಡೆಸಿದ್ದಾರೆ. ನಾನು ಅಂಜಲಿ ಗಂಡ ಎಂದು ಹೇಳಿಕೊಂಡ ಪ್ರೇಮನಾಥ್, ಬಿಲ್ಡರ್‌ನನ್ನು ರೂಮ್‌ನಲ್ಲಿ ಕೂಡಿ ಹಾಕಿ ಹೊಡೆದಿದ್ದಾರೆ. ನಂತರ ಅರೆ ನಗ್ನ ಸ್ಥಿತಿಯಲ್ಲಿದ್ದ ಬಿಲ್ಡರ್‌ನನ್ನು ಮೊಬೈಲ್‌ನಲ್ಲಿ ವಿಡಿಯೋ ತೆಗೆದುಕೊಂಡ ಆರೋಪಿಗಳು, ಆತನಿಂದ 100 ಗ್ರಾಂ ಚಿನ್ನದ ಸರ, 40 ಗ್ರಾಂ ಚಿನ್ನದ ಬ್ರಾಸ್‌ಲೇಟ್, 25 ಸಾವಿರ ಕಸಿದುಕೊಂಡಿದ್ದರು. ಅಲ್ಲದೆ, ಮಹಿಳೆ ಜತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದಾಗಿ ಕೂಡಾ ಹೇಳಿಸಿ ವಿಡಿಯೋ ಮಾಡಿಕೊಂಡಿದ್ದರು.
ಕೆಲ ಸಮಯದ ನಂತರ ಮನೆಗೆ ಬಂದ ಈಶ್ವರಿ, ನಾನು ಮಾನವ ಹಕ್ಕುಗಳ ಸಂಘಟನೆ ಮುಖಸ್ಥೆ. ಇದರ ಬಗ್ಗೆ ಎಲ್ಲಿಯಾದರೂ ಬಾಯ್ಬಿಟ್ಟರೇ ಕೊಲೆ ಮಾಡುತ್ತೇನೆ. ಪೊಲೀಸರಿಗೆ ದೂರು ಕೊಟ್ಟರೇ ಮರ್ಯಾದೆ ತೆಗೆಯುವುದಾಗಿ ಎಂದು ಬೆದರಿಸಿದ್ದಳು. ಅಂದು ರಾತ್ರಿ 11.45 ಗಂಟೆಗೆ ಆತನನ್ನು ಆರೋಪಿಗಳು ಬಿಟ್ಟು ಕಳುಹಿಸಿದ್ದರು. ನಂತರ ಹಣಕ್ಕಾಗಿ ಸುಲಿಗೆಕೋರರು ಪದೇ ಪದೆ ಕರೆ ಮಾಡುತ್ತಿದ್ದರು. ಇದರಿಂದ ರೋಸಿ ಹೋದ ಆತ, ಕೊನೆಗೆ ಮಹದೇವಪುರ ಠಾಣೆಯಲ್ಲಿ ದೂರು ದಾಖಲಿಸಿದರು. ಮೊಬೈಲ್ ಕರೆಗಳು ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಟ್ಯಾಟೋ ಹುಡುಗರ ಸ್ಕೆಚು
ಮಹದೇವಪುರ ಸಮೀಪ ದೀಪಕ್ ಹಾಗೂ ಟೈಸನ್ ಟ್ಯಾಟೋ ಅಂಗಡಿ ಇಟ್ಟಿದ್ದರು. ಅವರಿಗೆ ಅಂಜಲಿಯ ಸ್ನೇಹವಾಗಿದೆ. ನೀನು ವೇಶ್ಯಾವಾಟಿಕೆ ದಂಧೆಯಿಂದ ಹೆಚ್ಚು ಹಣ ಸಂಪಾದನೆ ಮಾಡಲು ಸಾಧ್ಯವಿಲ್ಲ. ಹನಿಟ್ರ್ಯಾಪ್ ಮಾಡಿದರೆ ಲಕ್ಷ ಲಕ್ಷ ರು. ಸಂಪಾದಿಸಬಹುದು ಎಂದು ಹೇಳಿದ್ದರು. ಈ ಗೆಳೆಯರ ಮಾತು ಕೇಳಿದ ಆಕೆ, ಹನಿಟ್ರ್ಯಾಪ್ ದಂಧೆ ಆರಂಭಿಸಿದ್ದಳು. ತನ್ನ ಸಂಪರ್ಕದಲ್ಲಿದ್ದ ರಿಯಲ್ ಎಸ್ಟೇಟ್ ಉದ್ಯಮಿಗಳು, ವ್ಯಾಪಾರಿಗಳು ಸೇರಿದಂತೆ ಶ್ರೀಮಂತರ ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಹಲವು ಜನರಿಗೆ ಬೆದರಿ ಹಾಕಿ ಆರೋಪಿಗಳು ಹಣ ಸುಲಿಗೆ ಮಾಡಿರುವ ಮಾಹಿತಿ ಇದೆ. ಆದರೆ ಇದುವರೆಗೆ ಯಾವುದೇ ದೂರುಗಳು ದಾಖಲಾಗಿಲ್ಲ. ಮಹದೇವಪುರ ಠಾಣೆಯಲ್ಲಿ ಸಂತ್ರಸ್ತರು ದೂರು ನೀಡಿದರೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಡಿ.ದೇವರಾಜ್ ತಿಳಿಸಿದ್ದಾರೆ.