ನೈಜೀರಿಯಾ ಪ್ರಜೆಗಳಿಂದ 10 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ| ವೈದ್ಯಕೀಯ ವೀಸಾದಡಿ ಭಾರತಕ್ಕೆ ಬಂದಿದ್ದು, ಪಾಸ್‌ಪೋರ್ಟ್‌ ಮತ್ತು ವೀಸಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಆರೋಪಿಗಳು| 

ಬೆಂಗಳೂರು(ಸೆ.20): ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನೋನ್ಸೋ ಜೋಚಿನ್‌ (36) ಮತ್ತು ಟ್ರೋರಿ ಬೆನ್‌ (25) ಬಂಧಿತರು. ಆರೋಪಿಗಳಿಂದ 10 ಲಕ್ಷ ಮೌಲ್ಯದ 134 ಎಕ್ಸ್‌ಟಸಿ ಮಾತ್ರೆ, 25 ಎಲ್‌ಎಸ್‌ಡಿ ಸ್ಟ್ರಿಫ್ಸ್‌, ಎರಡು ದ್ವಿಚಕ್ರ ವಾಹನ ಹಾಗೂ ತೂಕದ ಯಂತ್ರ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

ಆರೋಪಿಗಳಿಬ್ಬರು ವೈದ್ಯಕೀಯ ವೀಸಾದಡಿ ಭಾರತಕ್ಕೆ ಬಂದಿದ್ದು, ಪಾಸ್‌ಪೋರ್ಟ್‌ ಮತ್ತು ವೀಸಾ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದರು. ರಾಮಮೂರ್ತಿ ನಗರದ ಓಎಂಬಿಆರ್‌ ಲೇಔಟ್‌ನ ಮುಖ್ಯರಸ್ತೆಯಲ್ಲಿ ರಿಲಯನ್ಸ್‌ ಡಿಜಿಟಲ್‌ ಕಟ್ಟಡದ ಮುಂಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಾ ಮಾದಕ ವಸ್ತು ಮಾರಾಟ ಮಾಡಲು ಆರೋಪಿಗಳು ಯತ್ನಿಸುತ್ತಿದ್ದರು. ಸಿಸಿಬಿ ಇನ್‌ಸ್ಪೆಕ್ಟರ್‌ ಲಕ್ಷ್ಮೇ ಕಾಂತಯ್ಯ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಪತಿ-ಪತ್ನಿ ಮತ್ತು ಆಕೆ.. ಡ್ರಗ್ಸ್ ಕೇಸಿಗೆ ಲವ್ ಟ್ವಿಸ್ಟ್ಮ ಗರ್ಲ್‌ ಫ್ರೆಂಡ್‌ಗೆ ಅದೊಂದು ಕರೆ!

2016ರಿಂದ ದಂಧೆಯಲ್ಲಿ ತೊಡಗಿದ್ದು, ರಾಮಮೂರ್ತಿ ನಗರ ಹಾಗೂ ಕೆ.ಆರ್‌.ಪುರಂ ಪೊಲೀಸ್‌ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳಿವೆ. ನೊನ್ಸೋ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ 2016 ಮತ್ತು 2019ರಲ್ಲಿ ಬಂಧನಕ್ಕೆ ಒಳಗಾಗಿದ್ದ. ಒಂದು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆ ಹೊಂದಿದ್ದ. ಟ್ರೋರಿ ವಿರುದ್ಧ ಈ ಹಿಂದೆ ಅಕ್ರಮವಾಗಿ ನೆಲೆಸಿದ್ದ ಪ್ರಕರಣದಲ್ಲಿ ದೂರು ದಾಖಲಾಗಿತ್ತು. ಒಂದು ಎಕ್ಸಟಸಿ ಮಾತ್ರೆಯನ್ನು ಮೂರು ಸಾವಿರದಿಂದ ಐದು ಸಾವಿರದ ತನಕ ಮಾರಾಟ ಮಾಡುತ್ತಿದ್ದರು ಎಂದು ವಿವರಿಸಿದರು.